ADVERTISEMENT

ಕೆರೂರು: ಆಲಿಕಲ್ಲು ಮಳೆಯ ಆರ್ಭಟ

​ಪ್ರಜಾವಾಣಿ ವಾರ್ತೆ
Published 10 ಮೇ 2020, 14:06 IST
Last Updated 10 ಮೇ 2020, 14:06 IST
ಕೆರೂರ ಪಟ್ಟಣದಲ್ಲಿ ಭಾನುವಾರ ಸುರಿದ ಮಳೆಯ ಸಂದರ್ಭದಲ್ಲಿ ಬಿದ್ದ ಆಲಿಕಲ್ಲುಗಳನ್ನು ಸ್ಥಳೀಯರೊಬ್ಬರು ಬೊಗಸೆಯಲ್ಲಿ ಹಿಡಿದು ಪ್ರದರ್ಶಿಸಿದ್ದು ಹೀಗೆ..
ಕೆರೂರ ಪಟ್ಟಣದಲ್ಲಿ ಭಾನುವಾರ ಸುರಿದ ಮಳೆಯ ಸಂದರ್ಭದಲ್ಲಿ ಬಿದ್ದ ಆಲಿಕಲ್ಲುಗಳನ್ನು ಸ್ಥಳೀಯರೊಬ್ಬರು ಬೊಗಸೆಯಲ್ಲಿ ಹಿಡಿದು ಪ್ರದರ್ಶಿಸಿದ್ದು ಹೀಗೆ..   

ಕೆರೂರ: ಪಟ್ಟಣ ಹಾಗೂ ಸುತ್ತಲಿನ ಗ್ರಾಮೀಣ ಭಾಗದಲ್ಲಿ ಭಾನುವಾರ ಮಧ್ಯಾಹ್ನ ಅರ್ಧ ತಾಸಿಗೂ ಹೆಚ್ಚು ಕಾಲ ಆಲಿಕಲ್ಲು ಮಳೆ ಸುರಿಯಿತು.

ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಮೊದಲ ಬಾರಿಗೆ ಆಲಿಕಲ್ಲಿನೊಂದಿಗೆ ಸುರಿದ ಈ ಬಿರು ಮಳೆಗೆ ಗುಡುಗು–ಸಿಡಿಲಿನ ಆರ್ಭಟವೂ ಸಾಥ್ ನೀಡಿತ್ತು. ಅಡಿಕೆ ಕಾಯಿಗಿಂತಲೂ ದೊಡ್ಡ ಗಾತ್ರದ ಆಲಿಕಲ್ಲು ಮಳೆ ನೀರಿನೊಂದಿಗೆ ಬಿದ್ದು ಸ್ಥಳೀಯ ನಿವಾಸಿಗಳಲ್ಲಿ ಅಚ್ಚರಿ ಮೂಡಿಸಿದವು.

ಹಲವರು ಮಳೆಯಲ್ಲೇ ಆಲಿಕಲ್ಲುಗಳನ್ನು ಊಟದ ತಟ್ಟೆ, ಬೊಗಸೆಯಲ್ಲಿ ಹಿಡಿದು ತಂದರೆ ಮಕ್ಕಳು ಅವುಗಳನ್ನು ಬೆರಗುಗಣ್ಣುಗಳಿಂದ ನೋಡಿ, ಆಲಿಕಲ್ಲು ಹಿಡಿದು ಆಟವಾಡುತ್ತಾ ಖುಷಿಪಟ್ಟರು.

ADVERTISEMENT

’ಮಳೆ ಜೊತೆಗೆ ಬಿರುಸಾಗಿ ಆಲಿಕಲ್ಲುಗಳ ಬಿದ್ದಾಗ ಪತ್ರಾಸ್ ಮನೆಗಳ ಛಾವಣಿ ಮೇಲೆ ರಪ, ರಪನೆ ದೊಡ್ಡ ಮಟ್ಟದ ಸಪ್ಪಳ ಕೇಳಿ ಬಂದಿತು. ಹೊರಗೆ ಬಂದು ನೋಡಿದಾಗ ದೊಡ್ಡ ಗಾತ್ರದ ಆಲಿಕಲ್ಲುಗಳ ಮರಗಳ ಬುಡದಲ್ಲಿ ಬಿದ್ದುದನ್ನು ಕಂಡೆವು‘ ಎಂದು ಸಮೀಪದ ಹಾಲಿಗೇರಿ ಗ್ರಾಮದ ಶೇಖರ ಕಂಕಣವಾಡಿ ಹೇಳಿದರು.

ಕೆಲವರು ಆಲಿಕಲ್ಲುಗಳನ್ನು ತಟ್ಟೆ, ಚೀಲಗಳಲ್ಲಿ ಸಂಗ್ರಹಿಸಿ ಫೋಟೊ, ವಿಡಿಯೊ ತೆಗೆದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟು ಖುಷಿಪಟ್ಟರು. ಮುಂಗಾರು ಹಂಗಾಮಿಗೂ ಮುನ್ನ ಮಳೆ ಸುರಿದಿದೆ. ಹೀಗಾಗಿ ತಮ್ಮ ಹೊಲಗಳನ್ನು ಬಿತ್ತನೆಗೆ ಹದಗೊಳಿಸಿದ್ದ ರೈತರ ಮೊಗದಲ್ಲಿ ಸಂತಸ ಕಂಡುಬಂದಿದೆ.

ಕೆರೂರ ಹೋಬಳಿ ಸುತ್ತಮುತ್ತಲಿನ ಬೆಳಗಂಟಿ, ಹಾಲಿಗೇರಿ, ರ.ತಿಮ್ಮಾಪುರ, ಚಿಂಚಲಕಟ್ಟಿ, ನರೇನೂರ ಗ್ರಾಮಗಳಲ್ಲಿ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.