ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಬಾಗಲಕೋಟೆ: ಎಚ್‌ಐವಿ ಸೋಂಕಿತ ಮಕ್ಕಳಿಗೆ 5 ತಿಂಗಳಿನಿಂದ ಸಹಾಯಧನ ಬಿಡುಗಡೆಯಾಗದ ಕಾರಣ ಮಕ್ಕಳು ಮತ್ತು ಪೋಷಕರು ವೈದ್ಯಕೀಯ ವೆಚ್ಚ ಪಾವತಿಗೂ ಪರದಾಡುವಂತಾಗಿದೆ.
ಪೌಷ್ಟಿಕ ಆಹಾರ ಸೇವನೆ, ವೈದ್ಯಕೀಯ ವೆಚ್ಚ ಮತ್ತು ಇತರ ವೆಚ್ಚಗಳಿಗೆ ಜಿಲ್ಲೆಯ 534 ಮಕ್ಕಳಿಗೆ ಪ್ರತಿ ತಿಂಗಳು ₹1,000 ಸಹಾಯ ಧನ ವಿಶೇಷ ಪಾಲನಾ ಯೋಜನೆಯಡಿ ನೀಡಲಾಗುತ್ತದೆ. ₹26.70 ಲಕ್ಷ 5 ತಿಂಗಳ ಸಹಾಯ ಧನ ಬಾಕಿ ಉಳಿದಿದೆ.
‘ಎಚ್‌ಐವಿ ಸೋಂಕಿತ ಮಕ್ಕಳ ಪೋಷಕರೂ ಸೋಂಕಿತರಾಗಿದ್ದು, ದುಡಿಯುವ ಚೈತನ್ಯ ಇರುವುದಿಲ್ಲ. ಕೆಲ ಮಕ್ಕಳ ಪೋಷಕರು ತೀರಿಕೊಂಡಿದ್ದು, ಸಂಬಂಧಿಕರ ಮನೆಯಲ್ಲಿದ್ದಾರೆ. ಎಚ್‌ಐವಿ ವಿರುದ್ಧ ಹೋರಾಡಲು ಪೌಷ್ಟಿಕ ಆಹಾರ ಸೇವನೆ ಅತ್ಯಗತ್ಯ. ಆದರೆ, ನಿಯಮಿತವಾಗಿ ಸಹಾಯ ಧನ ಸಿಗದ ಕಾರಣ ಆ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ’ ಎಂದು ಸೋಂಕುಪೀಡಿತರ ಆರೈಕೆದಾರರು ಹೇಳುತ್ತಾರೆ.
ಮಕ್ಕಳ ಪಾಲನಾ ಸಂಸ್ಥೆಯಿಂದ ಬಿಡುಗಡೆಯಾದ ಮಕ್ಕಳು, ಅನಾಥ, ಏಕಪೋಷಕ, ಜೈಲಿನಲ್ಲಿರುವ ಪಾಲಕರಿಗೆ ಮಕ್ಕಳಿಗೆ ಉತ್ತಮ ಕುಟುಂಬ ವಾತಾವರಣದಲ್ಲಿ ಬೆಳೆಯಲು ಮತ್ತು ಶಿಕ್ಷಣಕ್ಕೆ ಪ್ರಾಯೋಜಕತ್ವ ಯೋಜನೆಯಡಿ ಪ್ರತಿ ತಿಂಗಳು ₹4 ಸಾವಿರ ಸಹಾಯಧನ ನೀಡಲಾಗುತ್ತದೆ. ಜಿಲ್ಲೆಯ 195 ಮಕ್ಕಳಿಗೆ ಐದು ತಿಂಗಳಿಂದ ಬಿಡುಗಡೆಯಾಗಬೇಕಿದ್ದ ₹39 ಲಕ್ಷ ಅನುದಾನ ಬಿಡುಗಡೆಯಾಗಿಲ್ಲ. ಹೊಸದಾಗಿ 18 ಮಕ್ಕಳನ್ನು ಗುರುತಿಸಲಾಗಿದೆ.
ಮಕ್ಕಳ ಪಾಲನಾ ಸಂಸ್ಥೆಯಿಂದ ಬಿಡುಗಡೆಯಾದ ಮಕ್ಕಳ ಉನ್ನತ ವ್ಯಾಸಂಗ ಅಥವಾ ವೃತ್ತಿ ತರಬೇತಿಗಾಗಿ ಪ್ರತಿ ತಿಂಗಳು ₹5 ಸಾವಿರ ಸಹಾಯಧನ ನೀಡಲಾಗುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 10 ಮಕ್ಕಳಿಗೆ ನೀಡಲಾಗುತ್ತಿದ್ದು, 6 ತಿಂಗಳಿನಿಂದ ಸಹಾಯ ಧನ ಬಿಡುಗಡೆಯಾಗದ್ದರಿಂದ ಶಿಕ್ಷಣ ಮೊಟಕುಗೊಳ್ಳುವ ಆತಂಕ ಎದುರಾಗಿದೆ.
‘ಕೋವಿಡ್ ಸಂದರ್ಭದಲ್ಲಿ ಹಲವಾರು ಮಕ್ಕಳು ತಂದೆ–ತಾಯಿಯನ್ನು ಕಳೆದುಕೊಂಡರು. ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡ 18 ವರ್ಷದೊಳಗಿನ ಮಕ್ಕಳ ಆರೈಕೆಗಾಗಿ ಪ್ರತಿ ತಿಂಗಳು ₹3,500 ನೀಡಲಾಗುತ್ತಿದೆ. ಆರು ತಿಂಗಳಿಂದ ಸಹಾಯ ಧನ ಬಿಡುಗಡೆಯಾಗಿಲ್ಲ. ಬಾಗಲಕೋಟೆ ಜಿಲ್ಲೆಯಲ್ಲಿ ಐವರು ಮಕ್ಕಳು ಇಬ್ಬರನ್ನೂ ಕಳೆದುಕೊಂಡಿದ್ದು, ಸಂಬಂಧಿಕರ ಮನೆಗಳಲ್ಲಿ ವಾಸವಿದ್ದಾರೆ. ಸಹಾಯ ಧನ ಬಾರದ್ದರಿಂದ ಅವರಿಗೂ ತೊಂದರೆಯಾಗಿದೆ.
‘ನಿತ್ಯ ಪೌಷ್ಟಿಕ ಆಹಾರ ಸೇವಿಸಬೇಕು. ಆಗಾಗ ಕಾಡುವ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಉಚಿತವಾಗಿ ದೊರೆತರೂ, ಕೆಲವೊಂದು ಔಷಧಗಳನ್ನು ಹೊರಗಡೆ ತೆಗೆದುಕೊಳ್ಳಬೇಕು. ಪ್ರತಿ ತಿಂಗಳು ಸಹಾಯ ಧನ ನೀಡದಿದ್ದರೆ ತೀವ್ರ ತೊಂದರೆಯಾಗುತ್ತದೆ’ ಎಂದು ಬಾಲಕನೊಬ್ಬ ಅಳಲು ತೋಡಿಕೊಂಡನು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.