
ಬಾಗಲಕೋಟೆ: ಆಲಂಕಾರಿಕ ಹೂವು, ವಿವಿಧ ತರಕಾರಿ, ವಿವಿಧ ಹಣ್ಣಿನ ಪ್ರಾತ್ಯಕ್ಷಿಕೆಗಳನ್ನು ಡಿ.21ರಿಂದ ಆರಂಭವಾಗುವ ತೋಟಗಾರಿಕೆ ಮೇಳದಲ್ಲಿ ವೀಕ್ಷಿಸಬಹುದಾಗಿದೆ. ಅಂತಹವುಗಳನ್ನು ಬೆಳೆಯಬೇಕು ಎನ್ನಿಸುತ್ತಿದೆಯೇ? ಹಾಗಿದ್ದರೆ ತಡವೇಕೆ? ಅಲ್ಲಿಯೇ ಇವುಗಳ ಸಸಿಗಳು, ಬೀಜಗಳೂ ದೊರೆಯುತ್ತವೆ.
ವಿವಿಯೇ ಅಭಿವೃದ್ಧಿ ಪಡಿಸಿರುವ ಮೆಣಸಿನಕಾಯಿಯ ರುದ್ರ, ನುಗ್ಗೆಯ ಭಾಗ್ಯ ತಳಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ರುದ್ರ ಮೆಣಸಿನಕಾಯಿಯ 500 ಕೆ.ಜಿ, ಭಾಗ್ಯ ನುಗ್ಗೆಯ 400 ಕೆ.ಜಿ ಬೀಜವನ್ನು ಮೇಳಕ್ಕೆ ಬರುವ ರೈತರಿಗಾಗಿ ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ.
ವಿವಿಧ ತರಕಾರಿ ಬೀಜ, ಕಿಚನ್ ಗಾರ್ಡನ್‌ನ 500 ಕಿಟ್, ಮೆಂತೆ ಹಾಗೂ ಕೊತ್ತಂಬರಿ ಬೀಜಗಳು ಲಭ್ಯ ಇವೆ. ಮೇ ತಿಂಗಳಿನಲ್ಲಿ 2 ಲಕ್ಷದಷ್ಟು ಅರಿಸಿಣ ಸಸಿಗಳನ್ನು ರೈತರಿಗೆ ವಿತರಿಸಲಾಗಿತ್ತು.
ಹಣ್ಣಿನ ಸಸಿಗಳೂ ಲಭ್ಯ: ಅಲ್ಫಾನ್ಸೊ, ಕೇಸರ, ಮಲ್ಲಿಕಾ, ತಶೇರಿ ಸೇರಿದಂತೆ ಹಲವು ಮಾವಿನ ಹಣ್ಣಿನ ಸಸಿಗಳನ್ನು ಬೆಳೆಸಲಾಗಿದೆ. ಲಿಂಬೆಯಲ್ಲಿನ ಕಾಗ್ಜಿ ತಳಿಯ ಸಸಿಗಳೂ ರೈತರಿಗಾಗಿ ಲಭ್ಯವಿವೆ. ಹಲಸಿನ ವಿವಿಧ ತಳಿಗಳು, ಅಂಜೂರ, ಬಿಲ್ವಪತ್ರೆ, ಚಿಕ್ಕು, ಡ್ರ್ಯಾಗನ್ ಫ್ರೂಟ್, ಬೆಳವಲ, ಕವಳೆ, ಪೇರಲದಂತಹ ಸಸಿಗಳಿವೆ.
ಗುಣಮಟ್ಟದ ಸಸಿಗಳನ್ನು ಬೆಳೆಸಲಾಗಿದೆ. ಕಡಿಮೆ ದರದಲ್ಲಿ ರೈತರಿಗೆ ವಿತರಣೆ ಮಾಡಲಾಗುತ್ತದೆ. ಜತೆಗೆ ಬೆಳೆಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು ಎಂದು ಹಣ್ಣು ವಿಭಾಗದ ಪ್ರೊ.ಆನಂದ ನಂಜಪ್ಪನವರ ತಿಳಿಸಿದರು.
ಸುಗಂಧ ದ್ರವ್ಯ, ಔಷಧೀಯ ಸಸ್ಯಗಳೂ ಇವೆ. ಅಲೊವೆರಾ, ತುಳಸಿ, ಇನ್ಸುಲಿನ್, ಬ್ರಾಹ್ಮಿ, ಲಿಂಬೆ ಹುಲ್ಲು ಸೇರಿದಂತೆ ಹಲವು ಬಗೆಯವು ಸಿಗುತ್ತವೆ.
ಬೋಗನ್ ವಿಲ್ಲಾ, ಡ್ರೆಸಿನಾ, ಬ್ಯಾಂಬೂ, ಪಂಡಾಸಿಸ್, ಸಿಲೋಶಿಯಾ ಸೇರಿದಂತೆ ಆಲಂಕಾರಿಕ ಸಸಿಗಳಿವೆ. ಮಲ್ಲಿಗೆ, ಕನಕಾಂಬರ, ಗುಲಾಬಿ, ಚೆಂಡು ಹೂ, ಸೇವಂತಿಗೆ ಸೇರಿದಂತೆ ಹಲವು ಪುಷ್ಪ ಸಸಿಗಳನ್ನೂ ತಂದು ಮನೆ ಆವರಣದಲ್ಲಿ ಬೆಳೆಸಬಹುದಾಗಿದೆ.
‘ಮನೆಯನ್ನು ಅಂದಗೊಳಿಸುವ ಹಲವು ಸಸಿಗಳಿವೆ. ಜೊತೆಗೆ ಪುಷ್ಪದ ಸಸಿಗಳೂ ಇವೆ. ಪಾಟ್ ಸಮೇತ ಸಸಿಗಳನ್ನೂ ಮಾರಾಟ ಮಾಡಲಾಗುವುದು’ ಎಂದು ಪುಷ್ಪ ಮತ್ತು ಉದ್ಯಾನ ವಿಭಾಗದ ಪ್ರೊ.ಬಿ.ಸಿ. ಪಾಟೀಲ ತಿಳಿಸಿದರು.
ಕಲ್ಲಂಗಡಿ, ಕರಬೂಜ, ಕುಂಬಳಕಾಯಿ, ಸೋರೆಕಾಯಿ, ಹಾಗಲಕಾಯಿ, ತುಪ್ಪರಕಾಯಿ ಸೇರಿದಂತೆ ಹಲವು ಬಳ್ಳಿಗಳು, ಗಜ್ಜರಿ, ಬೆಂಡೆಕಾಯಿ, ಬದನೆಕಾಯಿ, ಹೂಕೋಸು, ಗಡ್ಡೆಕೋಸು, ಬಟಾಣಿ, ಟೊಮ್ಯಾಟೊ, ಪಾಲಕ, ಮೆಂತ್ಯೆ, ರಾಜಗಿರಿ ಸೇರಿದಂತೆ ಹಲವು ತರಕಾರಿಗಳ ಗಿಡಗಳನ್ನು ಪ್ರಾತ್ಯಕ್ಷಿಕೆ ವಿಭಾಗದಲ್ಲಿ ನೋಡಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.