
ಇಳಕಲ್: ‘ನಗರದ ಬೀದಿಬದಿ ಬಡ 150 ವ್ಯಾಪಾರಸ್ಥರಿಗೆ ಮುಂದಿನ 6 ತಿಂಗಳಲ್ಲಿ ನಿವೇಶನಗಳನ್ನು ನೀಡಿ, ಮನೆ ಕಟ್ಟಿಸಿಕೊಡಲಾಗುವುದು’ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಭರವಸೆ ನೀಡಿದರು.
ಇಲ್ಲಿಯ ಅನುಭವ ಮಂಟಪದಲ್ಲಿ ಉಲ್ಲಾಸ್ ಫ್ರೆಂಡ್ಸ್ ಅಸೋಸಿಯೇಷನ್, ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟ, ಬೀದಿ ಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬೀದಿ ಬದಿ ವ್ಯಾಪಾರಿಗಳ ಪತ್ತಿನ ಸಹಕಾರಿ ಸಂಘದ ಸಹಯೋಗದಲ್ಲಿ ಬುಧವಾರ ನಡೆದ ಬೀದಿಬದಿ ವ್ಯಾಪಾರಿಗಳ ಸಮಾವೇಶ ಹಾಗೂ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸೂಚನೆ ಮೇರೆಗೆ ರಂಗಸ್ವಾಮಿ ಅವರು ಬೀದಿ ಬದಿ ವ್ಯಾಪಾರಿಗಳ ಒಕ್ಕೂಟವನ್ನು ಕಟ್ಟಿ, ಬೀದಿ ಬದಿ ವ್ಯಾಪಾರಿಗಳ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಅದೇ ರೀತಿ ನಗರದಲ್ಲಿ ಪವಾಡೆಪ್ಪ ಚಲವಾದಿ, ಸವಿತಾ ಅಶೋಕ ಚಲವಾದಿ ಅವರು ಬೀದಿ ಬದಿ ವ್ಯಾಪಾರಿಗಳ ಕುಂದುಕೊರತೆಗಳನ್ನು ನಿವಾರಿಸುತ್ತಿದ್ದಾರೆ’ ಎಂದು ಹೇಳಿದರು.
‘ಬೀದಿ ಬದಿ ವ್ಯಾಪಾರಿಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಲವು ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು. ಬೀದಿಬದಿ ವ್ಯಾಪಾರಿಗಳು ಹಾಗೂ ನಗರದ ರಂಗಭೂಮಿ ಕಲಾವಿದರು ಕಾರ್ಮಿಕ ಕಾರ್ಡ್‌ಗಳನ್ನು ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ನೂರಾರು ಜನರ ಆರೋಗ್ಯ ತಪಾಸಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಬಸವ ತತ್ವದಂತೆ ಒಂದು ಜೋಡಿಯ ವಿವಾಹ ಮಹೋತ್ಸವ ಜರುಗಿತು.
ಗುರು ಮಹಾಂತ ಶ್ರೀ, ಸೈಯ್ಯದ್ ಮುರ್ತುಜಾ ಖಾದ್ರಿ ದರ್ಗಾದ ಸಜ್ಜಾದ ನಸೀನ್ ಆಗಿರುವ ಫೈಸಲ್ ಪಾಶಾ ಅವರು ಸಾನ್ನಿಧ್ಯ ವಹಿಸಿದ್ದರು. ಪವಾಡೆಪ್ಪ ಚಲವಾದಿ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಪ್ರದೇಶ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ರಂಗಸ್ವಾಮಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಮಹಾದೇವ ಕಂಬಾಗಿ, ಗಿರೀಶ ಅಚನೂರ, ಮಹಾಬಳೇಶ ಮರಟದ, ಅವಿನಾಶ ಅಕ್ಕಿ, ಮಹಾಂತೇಶ ನರಗುಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.