ADVERTISEMENT

ದಲಿತ ಸೈನಿಕ ಅಂತ್ಯಕ್ರಿಯೆ;ಅಂಗಡಿ ಬಂದ್ ಮಾಡಿ ಅಸ್ಪ್ರಶ್ಯತೆ ಆಚರಣೆ:ಸಂಬಂಧಿಕರ ಆರೋಪ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 5:53 IST
Last Updated 28 ಫೆಬ್ರುವರಿ 2026, 5:53 IST
ಇಳಕಲ್ ಸಮೀಪದ ಚಿನ್ನಾಪೂರ ಎಸ್.ಟಿ ಗ್ರಾಮದಲ್ಲಿ ಸವರ್ಣಿಯರು ಅಂಗಡಿ, ಹೊಟೇಲ್ ಮುಚ್ಚಿ ಅಸ್ಪೃಶ್ಯತೆ ಆಚರಿಸಿದರು ಎಂದು ಆರೋಪಿಸಿ, ದಲಿತ ಸಂಘಟನೆಗಳ ಮುಖಂಡರು ರಸ್ತೆ ಬಂದ್ ಮಾಡಿ ಗುರುವಾರ ಪ್ರತಿಭಟನೆ ನಡೆಸಿದರು
ಇಳಕಲ್ ಸಮೀಪದ ಚಿನ್ನಾಪೂರ ಎಸ್.ಟಿ ಗ್ರಾಮದಲ್ಲಿ ಸವರ್ಣಿಯರು ಅಂಗಡಿ, ಹೊಟೇಲ್ ಮುಚ್ಚಿ ಅಸ್ಪೃಶ್ಯತೆ ಆಚರಿಸಿದರು ಎಂದು ಆರೋಪಿಸಿ, ದಲಿತ ಸಂಘಟನೆಗಳ ಮುಖಂಡರು ರಸ್ತೆ ಬಂದ್ ಮಾಡಿ ಗುರುವಾರ ಪ್ರತಿಭಟನೆ ನಡೆಸಿದರು   

ಇಳಕಲ್ (ಬಾಗಲಕೋಟೆ ಜಿಲ್ಲೆ): ‘ಸಮೀಪದ ಚಿನ್ನಾಪೂರ ಎಸ್.ಟಿ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಮಾಜಿ ಸೈನಿಕ ಹನುಮಂತಪ್ಪ ಹರಿಜನ ಅವರು ಗುರುವಾರ ನಿಧನರಾದ ಹಿನ್ನೆಲೆಯಲ್ಲಿ ಗ್ರಾಮದ ಲಿಂಗಾಯತ ಸಮುದಾಯದವರ ಅಂಗಡಿ ಮತ್ತು ಹೋಟೆಲ್ ಮುಚ್ಚಿ ಅಸ್ಪೃಶ್ಯತೆ ಆಚರಿಸಿದ್ದಾರೆ’ ಎಂದು ಮೃತರ ಸಂಬಂಧಿಕರು, ಪರಿಚಯಸ್ಥರು ಆರೋಪಿಸಿದರು.

‘20 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಹನಮಂತಪ್ಪ ಹರಿಜನ ಅವರ ಅಂತ್ಯಕ್ರಿಯೆಗೆ ಬಂಧುಗಳು, ಹಿತೈಷಿಗಳು ಗ್ರಾಮಕ್ಕೆ ಬಂದಿದ್ದರು. ಅವರಿಗೆ ವಸ್ತುಗಳನ್ನು ನೀಡಬೇಕಾಗುತ್ತದೆ ಎಂದು ಸವರ್ಣೀಯರು ಅಂಗಡಿಗಳನ್ನು ಬಂದ್ ಮಾಡಿದರು’ ಎಂದು ದಲಿತ ಸಮುದಾಯದ ಯುವಕರು ಆಕ್ರೋಶ ವ್ಯಕ್ತಪಡಿಸಿದರು. ಕೆಲ ಕಾಲ ರಸ್ತೆ ತಡೆ ಮಾಡಿದರು.

‘ಅಂಗಡಿಯ ಮಾಲೀಕನೊಬ್ಬ ತಂಪು ಪಾನೀಯದ ಬಾಟಲ್ ನೀಡಿ, ಹಣ ಪಡೆಯಲಿಲ್ಲ. ದಲಿತರು ಮೃತಪಟ್ಟ ಸಂದರ್ಭದಲ್ಲಿ ಅಂಗಡಿ, ಹೋಟೆಲ್‌ಗಳನ್ನು ಮುಚ್ಚುವುದು ಖಂಡನೀಯ. ಅಂಥವರ ಅಂಗಡಿಗಳನ್ನು ಕಾಯಂ ಆಗಿ ಮುಚ್ಚಿಸಬೇಕು. ಅಲ್ಲಿಯವರೆಗೆ ಅಂತ್ಯಕ್ರಿಯೆ ನೆರವೇರಿಸುವುದಿಲ್ಲ’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ADVERTISEMENT

ತಹಶೀಲ್ದಾರ್ ಅಮರೇಶ ಪಮ್ಮಾರ ಅವರು ಮೃತನ ಸಂಬಂಧಿಕೊಂರಿಗೆ ಚರ್ಚಿಸಿ ಮನವೊಲಿಸಿ, ಅಂತ್ಯಕ್ರಿಯೆ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟರು. ಅಂಗಡಿ ಬಾಗಿಲು ತೆರೆಯಿಸಿ ತಂಪು ಪಾನೀಯ, ಇತ್ಯಾದಿ ವಸ್ತುಗಳನ್ನು ಕೊಡಿಸಿದರು.

‘ಅಸ್ಪೃಶ್ಯತೆ ಆಚರಿಸುತ್ತಿರುವ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಮಾರ್ಚ್ 2ರಂದು ಗ್ರಾಮಸ್ಥರು ಮತ್ತು ದಲಿತ ಸಮುದಾಯದ ಮುಖಂಡರ ಸಭೆ ನಡೆಸಲಾಗುವುದು’ ಎಂದು ಇಳಕಲ್ ತಹಶೀಲ್ದಾರ್ ಅಮರೇಶ ಪಮ್ಮಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.