ADVERTISEMENT

ಬಾಗಲಕೋಟೆ: ನಂದಿನಿ ಮಜ್ಜಿಗೆ, ಲಸ್ಸಿಗೆ ಹೆಚ್ಚಿದ ಬೇಡಿಕೆ

ಬೆಲೆ ಏರಿಕೆಯ ನಡುವೆಯೂ ಕುಗ್ಗದ ಬೇಡಿಕೆ

ಬಸನವಾರ ಹವಾಲ್ದಾರ
Published 21 ಏಪ್ರಿಲ್ 2025, 6:19 IST
Last Updated 21 ಏಪ್ರಿಲ್ 2025, 6:19 IST
–
   

ಬಾಗಲಕೋಟೆ: ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಾಪದಿಂದ ಉಂಟಾಗುವ ಸುಸ್ತು, ದಣಿವು, ದಾಹ ಆರಿಸಿಕೊಳ್ಳಲು ಜನರು ತಂಪುಪಾನೀಯಗಳ ಮೊರೆ ಹೋಗುತ್ತಿದ್ದಾರೆ. ನಂದಿನಿ ಮೊಸರು, ಮಜ್ಜಿಗೆ, ಲಸ್ಸಿಗೆ ಬೇಡಿಕೆ ಹೆಚ್ಚಿದೆ.

ಜಿಲ್ಲೆಯ ಹಲವು ಕಡೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಬಹಳಷ್ಟು ಕಡೆಗಳಲ್ಲಿ 38 ಡಿಗ್ರಿ ಸೆಲ್ಸಿಯಸ್ ಆಸು–ಪಾಸಿನಲ್ಲಿದೆ. ಬಿಸಿ ಗಾಳಿ ಬೀಸುತ್ತಿರುವುದರಿಂದ ಜನರ ಬವಣೆ ಇನ್ನಷ್ಟು ಹೆಚ್ಚಾಗಿದೆ. ಮನೆಯ ಚಾವಣಿ ಕಾದು ಮನೆಯಲ್ಲಿ ಕುಳಿತಿದ್ದರೂ ತಳಮಳ ಅನುಭವಿಸುವಂತಾಗಿದೆ. ಇಡೀ ದಿನ ಫ್ಯಾನ್‌ಗಳು ತಿರುಗತ್ತಲೇ ಇರುತ್ತವೆ.

ತಿಂಗಳಿಂದ ಲಸ್ಸಿ, ಮಜ್ಜಿಗೆ, ಜ್ಯೂಸ್, ಎಳನೀರು, ಕಬ್ಬಿನ ಹಾಲಿನ ಮಾರಾಟ ಜೋರಾಗಿದೆ. ಹಾಗೆಯೇ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಮೊಸರು, ಮಜ್ಜಿಗೆ, ಲಸ್ಸಿ ಬೇಡಿಕೆಯೂ ಹೆಚ್ಚಾಗಿದೆ.

ADVERTISEMENT

ಬೇಸಿಗೆ ಕಾರಣಕ್ಕೆ ಹಾಲು ಸಂಗ್ರಹ ಪ್ರಮಾಣದಲ್ಲಿ ಸ್ವಲ್ಪ ಕಡಿಮೆಯಾಗಿದೆ. ಪ್ರತಿ ದಿನ 1.50 ಲಕ್ಷ ಲೀಟರ್‌ಗೂ ಹೆಚ್ಚು ಹಾಲು ಸಂಗ್ರಹ ಆಗುತ್ತಿತ್ತು. ಈಗ ಅದರ ಪ್ರಮಾಣ 1.44 ಲಕ್ಷ ಲೀಟರ್‌ಗೆ ಇಳಿಕೆ ಆಗಿದೆ. ಹಾಲಿನ ಬಳಕೆ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದರೂ, ಮೊಸರು, ಮಜ್ಜಿಗೆ, ಲಸ್ಸಿಯ ಬೇಡಿಕೆ ಪ್ರಮಾಣ ಹೆಚ್ಚಾಗಿದೆ.

ಜನವರಿ ತಿಂಗಳಲ್ಲಿ ಪ್ರತಿ ದಿನ 12,358 ಲೀಟರ್ ಇದ್ದ ಮೊಸರಿನ ಬೇಡಿಕೆ ಏಪ್ರಿಲ್‌ನಲ್ಲಿ 19,319 ಲೀಟರ್‌ಗೆ ಹೆಚ್ಚಿದೆ. ಹಾಗೆಯೇ ಜನವರಿಯಲ್ಲಿ ಪ್ರತಿ ದಿನ 234 ಲೀಟರ್ ಬೇಡಿಕೆ ಇದ್ದ ಮಜ್ಜಿಗೆ 4,257 ಲೀಟರ್‌ಗೆ, ಜನವರಿಯಲ್ಲಿ 79 ಲೀಟರ್ ಬೇಡಿಕೆ ಇದ್ದ ಲಸ್ಸಿ ಬೇಡಿಕೆ 2,726 ಲೀಟರ್ ಗೆ ಹೆಚ್ಚಳವಾಗಿದೆ. ಮಜ್ಜಿಗೆ, ಲಸ್ಸಿಗೆ ಹತ್ತಾರು ಪಟ್ಟು ಬೇಡಿಕೆ ಕುದುರಿದೆ. ನಂದಿನಿ ಐಸ್‌ಕ್ರೀಂಗಳೂ ಭರ್ಜರಿಯಾಗಿ ಮಾರಾಟವಾಗುತ್ತಿವೆ.

ಹಾಲು ಒಕ್ಕೂಟದಲ್ಲಿ 1.44 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದರೂ, ಹಾಲಿನ ಮಾರಾಟ ಕಡಿಮೆಯೇ ಇದೆ. ಹೀಗಾಗಿ, ಹಾಲಿನ ಪೌಡರ್ ಉತ್ಪಾದನೆಗೆ ಹೆಚ್ಚಿನ ಹಾಲನ್ನು ಬಳಸಲಾಗುತ್ತಿತ್ತು. ಮಜ್ಜಿಗೆ, ಲಸ್ಸಿ, ಮೊಸರಿಗೆ ಬೇಡಿಕೆ ಹೆಚ್ಚಿರುವುದರಿಂದ ಹೆಚ್ಚಿನ ಪ್ರಮಾಣದ ಹಾಲು ಇಲ್ಲಿಯೇ ಬಳಕೆಯಾಗುತ್ತಿದೆ.

ಹಾಲು, ಮೊಸರು, ಮಜ್ಜಿಗೆ, ಲಸ್ಸಿ ಸೇರಿದಂತೆ ಒಕ್ಕೂಟದ ವಿವಿಧ ಉತ್ಪನ್ನಗಳ ಬೆಲೆ ಇತ್ತೀಚೆಗೆ ಹೆಚ್ಚಿಸಲಾಗಿದೆ. ಬಿಸಿಲಿನ ತಾಪದಿಂದಾಗಿ ಬೇಡಿಕೆ ಕುಗ್ಗಿಲ್ಲ.

ಕೆಎಂಎಫ್‌ ಗುಣಮಟ್ಟಕ್ಕೆ ಆದ್ಯತೆ ನೀಡುತ್ತದೆ. ಇದರಿಂದಾಗಿಯೇ ಜನರಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ. ಹೊಸ ಹೊಸ ಉತ್ಪನ್ನಗಳ ಉತ್ಪಾದನೆ ಮಾಡಲಾಗುತ್ತಿದೆ.
–ಈರನಗೌಡ ಕರಿಗೌಡರ, ಅಧ್ಯಕ್ಷ ವಿಜಯಪುರ ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.