ADVERTISEMENT

ಐಟಿ ರೇಡ್‌ಗೆ ಜಗ್ಗುವುದಿಲ್ಲ: ಎಸ್.ಆರ್.ಪಾಟೀಲ

ಕಾಂಗ್ರೆಸ್ ಮುಖಂಡರು ರಾಜಕೀಯ ಬದುಕಿನಿಂದ ನಿರ್ಗಮಿಸಬೇಕಿದೆ. ಇಲ್ಲವೇ ಬಿಜೆಪಿ ಸೇರಬೇಕಿದೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 11:11 IST
Last Updated 13 ಅಕ್ಟೋಬರ್ 2019, 11:11 IST
ಎಸ್.ಆರ್.ಪಾಟೀಲ
ಎಸ್.ಆರ್.ಪಾಟೀಲ   

ಬಾಗಲಕೋಟೆ: ‘ಕಾಂಗ್ರೆಸ್‌ ನಾಯಕರ ಆತ್ಮಸ್ಥೈರ್ಯ ಕುಗ್ಗಿಸಿದರೆ ರಾಜ್ಯದಲ್ಲಿ ಪಕ್ಷ ಅಶಕ್ತವಾಗಲಿದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಆದಾಯ ತೆರಿಗೆ ದಾಳಿ ನಡೆಸುತ್ತಿದೆ. ಇದಕ್ಕೆಲ್ಲಾ ನಾವು ಜಗ್ಗುವುದಿಲ್ಲ‘ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ದಾಳಿಗಳ ಮೂಲಕ ತಾವು ಸಶಕ್ತಗೊಳ್ಳಲಿದ್ದೇವೆ ಎಂಬುದು ಬಿಜೆಪಿಯವರ ಹಗಲುಗನಸು ಎಂದು ಲೇವಡಿ ಮಾಡಿದರು.

‘ಶಾಸಕ ಜಿ.ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲಿನ ದಾಳಿ ನಮಗಂತೂ ರಾಜಕೀಯ ಪ್ರೇರಿತವಂತೆ ಕಾಣುತ್ತಿದೆ‘ ಎಂದು ಹೇಳಿದ ಎಸ್.ಆರ್.ಪಾಟೀಲ, ಸಂವಿಧಾನಾತ್ಮಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ನರೇಂದ್ರ ಮೋದಿ ಸರ್ಕಾರ ದೇಶದಲ್ಲಿ ಆಳ್ವಿಕೆ ನಡೆಸುತ್ತಿದೆ ಎಂಟು ಟೀಕಿಸಿದರು.

ADVERTISEMENT

‘ಕಾಂಗ್ರೆಸ್ ಮುಖಂಡರು ಸಾರ್ವಜನಿಕ ಬದುಕಿನಿಂದ ನಿರ್ಗಮಿಸಬೇಕು ಎಂಬ ಉದ್ದೇಶದಿಂದ ಉತ್ತಮ ನಾಯಕರನ್ನು ಗುರುತಿಸಿ ಐಟಿ ದಾಳಿ ಮಾಡಲಾಗುತ್ತಿದೆ. ಒಂದೋ ಬಿಜೆಪಿ ಸೇರ್ಪಡೆಯಾಗಬೇಕು. ಇಲ್ಲದಿದ್ದರೆ ರಾಜಕೀಯ ಕ್ಷೇತ್ರದಿಂದ ಹೊರಗೆ ಹೋಗಬೇಕು ಅಂತಹ ಪರಿಸ್ಥಿತಿ ನಿರ್ಮಿಸಲಾಗುತ್ತಿದೆ. ಇನ್ನಾದರೂ ಇಂತಹ ದ್ವೇಷದ ರಾಜಕಾರಣ ಬಿಡಲಿ’ ಎಂದು ಕಿವಿಮಾತು ಹೇಳಿದರು.

‘ಮುಂದೆ ಇನ್ನಷ್ಟು ಕಾಂಗ್ರೆಸ್ ನಾಯಕರ ಮೇಲೆ ದಾಳಿ ಆಗಲಿದೆಯೇ‘ ಎಂಬ ಪ್ರಶ್ನೆಗೆ, ‘ಲೆಟ್‌ ದೆಮ್ ವೇಟ್‘ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.