ADVERTISEMENT

PV Web Exclusive | ಈಗ ದೇವರು ರುಜು ಮಾಡುವ ಹೊತ್ತು

ಬಾಗಲಕೋಟೆ: ಆಲಮಟ್ಟಿ ಜಲಾಶಯದ ಕೃಷ್ಣೆಯ ಹಿನ್ನೀರಿನ ಪ್ರದೇಶ

ವೆಂಕಟೇಶ ಜಿ.ಎಚ್.
Published 12 ನವೆಂಬರ್ 2020, 14:04 IST
Last Updated 12 ನವೆಂಬರ್ 2020, 14:04 IST
ಬೀಳಗಿ ತಾಲ್ಲೂಕಿನ ಹೆರಕಲ್ ಬಳಿ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ರಾಜಹಂಸಗಳ (ಫ್ಲಿಮಿಂಗೊ) ಗಾಂಭೀರ್ಯ (ಚಿತ್ರ: ವಿಶ್ವನಾಥ ಸುವರ್ಣ)
ಬೀಳಗಿ ತಾಲ್ಲೂಕಿನ ಹೆರಕಲ್ ಬಳಿ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ರಾಜಹಂಸಗಳ (ಫ್ಲಿಮಿಂಗೊ) ಗಾಂಭೀರ್ಯ (ಚಿತ್ರ: ವಿಶ್ವನಾಥ ಸುವರ್ಣ)   
""
""
""
""
""
""
""
""
""
""
""

ಬಾಗಲಕೋಟೆ: ಇಲ್ಲಿನ ಆಲಮಟ್ಟಿ ಜಲಾಶಯದ ಹಿನ್ನೀರಿಗೆ ಈಗ ದೇವರು ರುಜು ಮಾಡುವ ಹೊತ್ತು. ನೀಲಾಕಾಶದ ಹಾದಿಯಲ್ಲಿ ಹಿಂಡುಹಿಂಡಾಗಿ ದೇಶ–ವಿದೇಶಗಳಿಂದ ಸಾಗಿಬರುವ ಸಾವಿರಾರು ದೇವದೂತರು (ವಲಸೆ ಪಕ್ಷಿಗಳು) ಹಿನ್ನೀರ ಹಾದಿಯಲ್ಲಿ ಬೀಡು ಬಿಡುವ, ವಿಶ್ರಮಿಸಿ, ಹಾಡಿ–ನಲಿದು ಮೈಮರೆವ ಕಾಲವಿದು. ಹಿನ್ನೀರಲ್ಲಿ ಅಲ್ಲಲ್ಲಿ ಕಾಣಸಿಗುವದ್ವೀಪ ಸಮೂಹ, ನದಿ ದಂಡೆ, ಗುಡ್ಡ–ಗಾಡು ಮುಂದಿನ ನಾಲ್ಕೈದು ತಿಂಗಳು ನಮ್ಮೂರಿನ ಈ ಅತಿಥಿಗಳಿಗೆ ಗಮ್ಯತಾಣ..

ಕೃಷ್ಣೆಯ ಜಲರಾಶಿಗೆ ಮೆರುಗು ನೀಡುವ ಈ ಬಾನಾಡಿಗಳು ಇನ್ನು ನಿತ್ಯ ನಸುಕು, ಬೈಗಿಗೆ ಬೆರುಗು ತರುತ್ತವೆ. ಹಗಲಿಡೀ ಧ್ಯಾನಸ್ಥ, ಮಂದಸ್ಮಿತ, ಬಿಸಿ ಅಪ್ಪುಗೆಯ ಪ್ರಣಯ ಸ್ವರೂಪಿಗಳಾಗಿ, ದಾಂಪತ್ಯದ ಸರಸ–ವಿರಸಕ್ಕೂ ಸಾಕ್ಷಿಯಾಗುತ್ತವೆ. ನೀರಾಟದ ನಡುವೆ ದಣಿದಾಗಬೇಟೆಗಾರರ ಹೊಂಚು ತೋರಿ ಮೀನೂಟ ಸವಿದು, ಹುಳು-ಹುಪ್ಪಟೆಯ ಉಪ್ಪಿನಕಾಯಿ ಚಪ್ಪರಿಸುತ್ತವೆ. ಅಕ್ಕಪಕ್ಕದ ಹೊಲ–ತೋಟಗಳಿಗೆ ಹಾರಿ, ಇಳಿದು ಕಾಳು–ಕಡಿ ತಿಂದು, ಹಣ್ಣು–ಹಂಪಲು ಸವಿಯುತ್ತವೆ. ರೆಕ್ಕೆ ಬಡಿದು, ನಲಿದುಚಿಲಿ–ಪಿಲಿ ನಿನಾದದೊಂದಿಗೆ ಹಿಂಡು–ಹಿಂಡಾಗಿ ಹಾರಿ ದೇವರ ರುಜುವನ್ನು ಸಾಕ್ಷೀಕರಿಸಲಿವೆ.

ಕಪ್ಪು ತಲೆ ಹೆಬ್ಬಾತು

ಬಹುದೂರದ ಆಫ್ರಿಕಾ, ಆಸ್ಟ್ರೇಲಿಯಾ ಖಂಡಗಳಿಂದ ದುರ್ಗಮ ಹಾದಿಗಳನ್ನು ಸವೆಸಿ ಸಾವಿರಾರು ಕಿ.ಮೀ ಸಾಗಿಬರುವ ಈ ವಲಸೆ ಹಕ್ಕಿಗಳಿಗೆ ಕೃಷ್ಣೆಯೊಡಲು ನೆಲೆ ಕಲ್ಪಿಸುತ್ತದೆ. ಬಸಿರು-ಬಾಣಂತನದೊಟ್ಟಿಗೆ ತವರಿನ ವಾತ್ಸಲ್ಯ ಉಣಿಸುವ ಈ ಕಾಲಕ್ಕೆ ಮಾಗಿ ಮುನ್ನುಡಿ ಬರೆಯುತ್ತದೆ. ಆತಿಥ್ಯದ ಸೊಬಗು ಮೈದಳೆಯಲು ಅನುವು ಮಾಡಿಕೊಟ್ಟು ನಾಡಿನ ಪಕ್ಷಿ ಪ್ರಿಯರನ್ನೂ ಕೈ ಬೀಸಿ ಕರೆಯುತ್ತದೆ.ಕ್ಯಾಮೆರಾ ಕಣ್ಣುಗಳಿಗೆ ಪಕ್ಷಿಲೋಕದ ಸುರಸುಂದರಿಯರೇ ರೂಪದರ್ಶಿಗಳಾಗಿ ಸಿಕ್ಕುವ ಈ ಸಮಯ ಛಾಯಾಚಿತ್ರಗಾರರಿಗಂತೂ ಹಬ್ಬದೂಟ.

ADVERTISEMENT
ಕಪ್ಪು ಬಣ್ಣದ ಹೆಬ್ಬಾತು

ಬೀಳಗಿ ತಾಲ್ಲೂಕು ಹೆರಕಲ್ ಬ್ಯಾರೇಜ್, ಗಲಗಲಿ, ಕದಂಪುರ, ಚಿಕ್ಕಸಂಗಮ, ಹಳೆಯ ಅನಗವಾಡಿಯಿಂದ ಕುಂದರಗಿ ರಸ್ತೆ, ಸಾಲಗುಂದಿ, ನೆಕ್ಕರಗುಂದಿ, ಸಿಂದಗಿ, ಕೊರ್ತಿ, ಕೊಲ್ಹಾರ, ಬಾಗಲಕೋಟೆ ತಾಲ್ಲೂಕಿನ ಗುಡ್ಡದ ಮಲ್ಲಾಪುರ, ಬೆನ್ನೂರು, ರಾಂಪುರ, ಅಚನೂರು, ಸೀತಿಮನಿ ಸುತ್ತಲಿನ ಹಿನ್ನೀರ ಪ್ರದೇಶ ಶರದೃತುವಿನಲ್ಲಿ ಪಕ್ಷಿ ಕಾಶಿಯಾಗಿ ಬದಲಾಗಲಿವೆ.

ಬೀಳಗಿ ತಾಲ್ಲೂಕು ಚಿಕ್ಕಸಂಗಮದ ಬಳಿ ಕಾಣಸಿಕ್ಕ ಅಪರೂಪದ ಚಾತಕ ಪಕ್ಷಿ (ಜಾಕೊಬಿನ್ ಚುಕಾವ್)
ಚಿತ್ರ: ಹಣಮಂತ ದೋಣಿ

ನವೆಂಬರ್‌ನಿಂದ ಮಾರ್ಚ್ ಈ ವಲಸೆ ಹಕ್ಕಿಗಳಿಗೆ ಸಂತಾನೋತ್ಪತ್ತಿಯ ಸಮಯ. ಹಿನ್ನೀರಿನಲ್ಲಿ ಕಪ್ಪೆ ಚಿಪ್ಪು, ಗೊದ ಮೊಟ್ಟೆಗಳು, ಕಪ್ಪೆ, ಶಂಕದ ಹುಳು, ಏಡಿ, ಚಿಕ್ಕಮೀನು, ಜಲಸಸ್ಯಗಳು, ಕೆಸರಿನಲ್ಲಿನ ಹುಳು–ಹುಪ್ಪಟೆ ಈ ವಲಸಿಗರ ಆಹಾರದ ಅಗತ್ಯ ಪೂರೈಸುತ್ತವೆ. ಜೊತೆಗೆ ಚಳಿ–ಬಿಸಿಲಿನ ಜುಗಲ್‌ಬಂದಿ ಹೆರಿಗೆ–ಬಾಣಂತನಕ್ಕೆ ಪ್ರಶಸ್ತ ಕಾಲ. ಮಾರ್ಚ್‌ ನಂತರ ಬಿಸಿಲು ಹೆಚ್ಚುವುದರಿಂದ ಹೊಸ ಬಳಗದೊಂದಿಗೆ ಮತ್ತೆ ಮೂಲ ನೆಲೆಯತ್ತ ಹಾರುತ್ತವೆ.

ಬೀಳಗಿ ಸಮೀಪದ ಹೆರಕಲ್ ಬಳಿ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಪಟ್ಟೆ ತಲೆ ಹೆಬ್ಬಾತುಗಳ ದರ್ಶನ
(ಚಿತ್ರ: ಸಂಗಮೇಶ ಬಡಿಗೇರ)

ಎಲ್ಲಿಂದಲೋ ಬಂದವರು...

ಮಧ್ಯ ಏಷ್ಯಾದಲ್ಲಿ ಟಿಬೆಟ್‌, ಕಜಕಿಸ್ತಾನ, ಮಂಗೋಲಿಯಾ, ರಷ್ಯಾ ಭಾಗದಲ್ಲಿ ಕಾಣಸಿಗುವ ಪಟ್ಟೆತಲೆ ಹೆಬ್ಬಾತು (ಬಾರ್‌ ಹೆಡೆಡ್‌ ಗೂಸ್) ಹಿಮಾಲಯ ಪರ್ವತ ಶ್ರೇಣಿಯನ್ನು ದಾಟಿ ಭಾರತ ಉಪಖಂಡ ಪ್ರವೇಶಿಸುತ್ತದೆ. ಅತಿ ಎತ್ತರದಲ್ಲಿ ಹಾರುವ ಪಕ್ಷಿ ಎಂಬ ಶ್ರೇಯ ಇದು ಹೊಂದಿದೆ. ಈ ಹಾದಿಯಲ್ಲಿ ವಿಶ್ವದ ಐದನೇ ದೊಡ್ಡ ಪರ್ವತ ಎನಿಸಿದ ಟಿಬೆಟ್‌ನ ಮೌಂಟ್‌ ಮಕಾಲು (8481 ಮೀಟರ್) ನೆತ್ತಿಯ ಮೇಲಿನಿಂದ ಹಾರಿ ಬರುವುದು ವಿಶೇಷ. ಹಿನ್ನೀರ ದಡದ ಮಣ್ಣಿನಲ್ಲಿಯೇ ಗೂಡುಕಟ್ಟಿ ಒಮ್ಮೆಗೆ 3 ರಿಂದ 8 ಮೊಟ್ಟೆ ಇಡುತ್ತದೆ. ಸತತ ಏಳು ತಾಸು ನಿರಂತರವಾಗಿ ಹಾರಾಟ ನಡೆಸುವ ಸಾಮರ್ಥ್ಯ ಇದಕ್ಕಿದೆ ಎಂದು ಬೀಳಗಿ ವಲಯ ಅರಣ್ಯಾಧಿಕಾರಿ ಹಣಮಂತ ಡೋಣಿ ಹೇಳುತ್ತಾರೆ.

ಪರ್ಪಲ್‌ ಹೆರಾನ್ (ಕೊಕ್ಕರೆ)

ಗುಜರಾತ್‌ನ ಕಚ್ಛ್ ಖಾರಿಯಿಂದ (ರಣ್‌ ಆಫ್‌ ಕಚ್ಛ್) ಬರುವ ಫ್ಲೆಮಿಂಗೊ (ರಾಜಹಂಸ) ಸಂತಾನೋತ್ಪತ್ತಿಗಾಗಿಯೇ ಇಲ್ಲಿಗೆ ಬರುತ್ತದೆ. ಗುಂಪು ಗುಂಪಾಗಿ ಹಿನ್ನೀರ ಹೊರಮೈಮೇಲೆ ಬಣ್ಣದ ಚಿತ್ತಾರ ಬಿಡಿಸಿದಂತೆ ಕಾಣುವ ರಾಜಹಂಸಗಳ ಕಣ್ತುಂಬಿಕೊಳ್ಳುವುದೇ ಸೊಬಗು. ಬಾಲ್ಯದಲ್ಲಿ ಗೆಳೆಯರು ಪರಸ್ಪರರು ಸೊಂಟ ಹಿಡಿದು ರೈಲಾಟ ಆಡಿದ್ದನ್ನು ನೆನಪಿಸುವಂತೆ ಸದಾ ಹತ್ತಿಕೊಂಡು ಹಿಂಡುಗಟ್ಟಲೇ ಸಾಗುವ ಫ್ಲೆಮಿಂಗೊ ಮೇ ಅಂತ್ಯದವರೆಗೂ ಹಿನ್ನೀರಿನಲ್ಲಿ ಮಿಂದು–ಹಾರಾಡಿ ತಮ್ಮೂರಿಗೆ ಮರಳುತ್ತವೆ.

ಬಾತು

ಪೂರ್ವ ಆಫ್ರಿಕಾ, ಆಸ್ಟ್ರೇಲಿಯಾ ಖಂಡದಿಂದ ಬರುವ ಮೂಡಣದ ಚಿಟವ ಹಕ್ಕಿ‌ (Oriental protincole) ಕೂಡ ಬಹುದೂರದ ಅತಿಥಿ. ಉತ್ತರ ಭಾರತದಿಂದ ಬರುವ ಬ್ಲ್ಯಾಕ್‌ಟೇಲ್‌ ಗಾಡ್‌ವಿಟ್ಸ್‌, ಗ್ಲಾಸಿಐಬಿಸ್‌, ಸ್ಥಳೀಯ ಬಾಯ್ಕಳಕ (ಓಪನ್ ಬಿಲ್ಡ್ ಸ್ಟ್ರೋಕ್), ದಾಸ ಕೊಕ್ಕರೆ (ಪೇಯಿಂಟೆಡ್ ಸ್ಟ್ರೋಕ್), ಬಿಳಿ ಕುತ್ತಿಗೆ ನೀರು ಕಾಗೆ (ಗ್ರೇಟ್ ಇಂಡಿಯನ್ ಕಾರ್ಮೊರಾಂಟ್), ಕೊಕ್ಕರೆ (ಲಿಟಲ್ ಎಗ್ರಟ್), ಚಮಚದ ಕೊಕ್ಕಿನ ಕೊಕ್ಕರೆ (ಸ್ಪೂನ್ ಬಿಲ್), ಜಾನುವಾರು ಬೆಳ್ಳಕ್ಕಿ (ಕ್ಯಾಟಲ್ ಎಗ್ರೆಟ್), ಬೂದು ಕೊಕ್ಕರೆ (ಗ್ರೇ ಹೆರಾನ್), ಪರ್ಪಲ್‌ಹೆರಾನ್‌, ಹಸಿರು ಹಾಗೂ ಕೆಸರುಗುಪ್ಪಿ (ಲಿಟಲ್ ಗ್ರಿನ್ ಬಿಟರೆನ್–ಚೆಸ್ಟ್‌ನಟ್ ಬಿಟರೆನ್), ನಾಮಗೋರೆ (ಬ್ಲ್ಯೂವಿಂಗ್ಡ್ ಟೇಲ್), ನೀರು ಗೊರವ (ಬ್ಲ್ಯಾಕ್‌ ವಿಂಗ್ಡ್ ಸ್ಟಿಲ್ಟ್), ಹೆಗ್ಗೊರವ (ಕರ್ಲ್ಯೂ), ಮೀನುಗುಟುರ (ಇಂಡಿಯನ್ ವಿಸ್ಕರ್ಡ್ ಟೆರೆನ್), ಮಿಂಚುಳ್ಳಿ, ನೀಲಿ ಮಿಂಚುಳ್ಳಿ (ಸ್ಮಾಲ್ ಬ್ಲ್ಯೂ ಕಿಂಗ್‌ ಫಿಶರ್), ಜೋಳಿಗೆ ಕೊಕ್ಕ (ಹೆಜ್ಜೆರ್ಲೆ), ಬ್ರಾಹ್ಮಿಣಿ ಡಕ್, ಪಿಂಟೆಲ್ ಡಕ್, ಕಾಮನ್‌ಕೂಟ್ ಹೀಗೆ ಇಲ್ಲಿ ವೈವಿಧ್ಯಮಯ ಪಕ್ಷಿ ಬಳಗವೇ ಕಾಣಸಿಗುತ್ತದೆ.

ಪಟ್ಟೆ ತಲೆ ಹೆಬ್ಬಾತು (ಚಿತ್ರ: ಹಣಮಂತ ಡೋಣಿ, ಆರ್‌ಎಫ್‌ಒ)

ಬರುವುದು ಹೇಗೆ?

ಈ ದೇವದೂತರ ರಕ್ಷಣೆಗೆ ಅರಣ್ಯ ಇಲಾಖೆ ಟೊಂಕ ಕಂಟಿದ್ದು, ಈ ಪ್ರದೇಶದಲ್ಲಿ ಬೇಟೆ ನಿಷೇಧಿಸಿದೆ. ಪಕ್ಷಿಗಳ ವೀಕ್ಷಣೆಗೆ ಹೆರಕಲ್‌ ಬ್ರಿಜ್ ಕಮ್ ಬ್ಯಾರೇಜ್ ಹಾಗೂ ಸುತ್ತಲಿನ ಗುಡ್ಡಗಳು, ಚಿಕ್ಕಸಂಗಮದ ಬಳಿವೀಕ್ಷಣಾ ಗೋಪುರಗಳ ನಿರ್ಮಿಸಿದೆ.

ಪಕ್ಷಿ ವೀಕ್ಷಣೆಗೆ ಬರುವವರು ಬಸ್‌ನಲ್ಲಿ ಬಾಗಲಕೋಟೆಗೆ ಬಂದರೆ ಅಲ್ಲಿಂದ ಚಿಕ್ಕಸಂಗಮ, ಮಲ್ಲಾಪುರ ಗುಡ್ಡ ಇಲ್ಲವೇ ಹೆರಕಲ್‌ ಬ್ಯಾರೇಜ್‌ಗೆ ಬಾಡಿಗೆ ವಾಹನಗಳಲ್ಲಿ ತೆರಳಿ, ಹಿನ್ನೀರ ಕಾಲು ಹಾದಿಯಲ್ಲಿ ಓಡಾಟ ನಡೆಸಬಹುದು. ಸ್ವಂತ ವಾಹನ ಇದ್ದರೂ ಉತ್ತಮ. ಅಲ್ಲಿಗೆ ತೆರಳಲು ಉತ್ತಮ ರಸ್ತೆಗಳು ಇವೆ. ಆಲಮಟ್ಟಿ, ಬಾಗಲಕೋಟೆ, ಬೀಳಗಿಯಲ್ಲಿ ಉಳಿಯಲು ಉತ್ತಮ ಹೋಟೆಲ್, ಕಾಟೇಜ್‌ಗಳು ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.