ADVERTISEMENT

ಶಾಸಕ ಸಿದ್ದು ಸವದಿ ಮನೆ ಮುಂದೆ ಜೈನ ಮುನಿ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 6:37 IST
Last Updated 30 ನವೆಂಬರ್ 2019, 6:37 IST
   

ಬಾಗಲಕೋಟೆ: ಹಳಿಂಗಳಿಯ ಭದ್ರಗಿರಿಯ ಜೈನ ಮುನಿ ಕುಲರತ್ನ ಭೂಷಣರು ಶನಿವಾರ ಶಾಸಕ ಸಿದ್ದು ಸವದಿ ಮನೆ ಆವರಣದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಹಳಿಂಗಳಿಯ ಭದ್ರಗಿರಿ ಬೆಟ್ಟ ಪ್ರದೇಶದಲ್ಲಿ ರಾಜ್ಯ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಜಾಗ ನೀಡುವ ಸಲುವಾಗಿ ಸಮೀಕ್ಷೆ ಕಾರ್ಯ ಆರಂಭಿಸಿದೆ. ಅದನ್ನು ವಿರೋಧಿಸಿ ಕುಲರತ್ನ ಭೂಷಣರು ಶಾಸಕರ ಮನೆ ಆವರಣದಲ್ಲಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.

‘ಹಳಿಂಗಳಿ ಬೆಟ್ಟದಲ್ಲಿ ಜೈನ ಧರ್ಮದ ಅಭಿವೃದ್ಧಿಗಾಗಿ 89.30 ಎಕರೆ ಜಮೀನು ಕೇಳಿ ಸರ್ಕಾರಕ್ಕೆ 2013 ರಲ್ಲಿ ಮನವಿ ಸಲ್ಲಿಸಲಾಗಿದೆ. ಆದರೂ ಇದುವರೆಗೂ ಜಮೀನು ನೀಡಿಲ್ಲ. ಆದರೆ ಪುನರ್ವಸತಿ ಕೇಂದ್ರಕ್ಕೆ ಜಾಗ ನೀಡಲಾಗುತ್ತಿದೆ. ಅದು ಸರಿಯಲ್ಲ,’ ಎಂದು ಕುಲರತ್ನ ಭೂಷಣ ಮಹಾರಾಜರು ತಿಳಿಸಿದರು.

ADVERTISEMENT

ಭದ್ರಗಿರಿ ಬೆಟ್ಟದಲ್ಲಿ ಕಂದಾಯ ಇಲಾಖೆಗೆ ಸೇರಿದ ಸರ್ವೇ ನಂ. 142/ಎ ಒಟ್ಟು 336 ಎಕರೆ ಜಮೀನು ಇದೆ. ಅದರಲ್ಲಿ ಹಳಿಂಗಳಿ ಮಠಕ್ಕೆ 89.30 ಎಕರೆ ಗುಂಟೆ ಬಿಟ್ಟು ಉಳಿದ ಸ್ಥಳದಲ್ಲಿ ಪುನರ್ವಸತಿ ಕೇಂದ್ರಕ್ಕೆ ನೀಡಲು ಆಗ್ರಹಿಸಿದರು.

‘ಭದ್ರಗಿರಿ ಬೆಟ್ಟದಲ್ಲಿ ಪ್ರಾಚೀನ ಕಾಲದ 662 ಜೈನ ಧರ್ಮದ ಗುಂಪಾ(ಬಸದಿ)ಗಳಿದ್ದು, ಇವುಗಳಲ್ಲಿ 603 ಗುಂಪಾಗಳನ್ನು ಸಂಶೋಧನೆಯ ಮೂಲಕ ಪತ್ತೆ ಹಚ್ಚಲಾಗಿದೆ. ಆದ್ದರಿಂದ ಸರ್ಕಾರ ಅವುಗಳ ರಕ್ಷಣೆಗೆ ಮುಂದಾಗಬೇಕು. ಬದುಕು ಬದುಕಲು ಬೀಡಿ ಎಂಬುದು ನಮ್ಮ ಧರ್ಮದ ಉದ್ದೇಶ,’ ಎಂದರು.

ಈ ಹಿಂದೆ ಉಮಾಶ್ರೀ ಅವರು ಶಾಸಕಿ ಆಗಿದ್ದಾಗ ಹಳಿಂಗಳಿ ಮಠಕ್ಕೆ ಸರ್ಕಾರ ಎರಡು ಎಕರೆ ಭೂಮಿ ಮಂಜೂರು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.