ADVERTISEMENT

ಜಮಖಂಡಿ | ದೂಳುಮಯ ರಸ್ತೆ: ಸಂಚಾರವೇ ಸವಾಲು

ಆರ್.ಎಸ್.ಹೊನಗೌಡ
Published 21 ಫೆಬ್ರುವರಿ 2024, 5:07 IST
Last Updated 21 ಫೆಬ್ರುವರಿ 2024, 5:07 IST
ಜಮಖಂಡಿ ತಾಲ್ಲೂಕಿನ ತುಂಗಳ ಗ್ರಾಮದಿಂದ ಶೂರ್ಪಾಲಿ ಆರ್.ಸಿವರೆಗೆ ಹದಗೆಟ್ಟ ರಸ್ತೆ ದೂಳಿನಿಂದ ತುಂಬಿರುವುದು
ಜಮಖಂಡಿ ತಾಲ್ಲೂಕಿನ ತುಂಗಳ ಗ್ರಾಮದಿಂದ ಶೂರ್ಪಾಲಿ ಆರ್.ಸಿವರೆಗೆ ಹದಗೆಟ್ಟ ರಸ್ತೆ ದೂಳಿನಿಂದ ತುಂಬಿರುವುದು   

ಜಮಖಂಡಿ: ತಾಲ್ಲೂಕಿನ ತುಂಗಳ ಗ್ರಾಮದಿಂದ ಶೂರ್ಪಾಲಿ ಆರ್.ಸಿ.ವರೆಗೆ ರಸ್ತೆಯ ಮೇಲೆ ಹೋಗುವ ವಾಹನಗಳನ್ನು ನೋಡಿದವರಿಗೆ ವಾಹನಗಳು ಸಂಚರಿಸುತ್ತಿವೆಯೋ ಅಥವಾ ನರ್ತಿಸುತ್ತಿವೆಯೋ ಎಂಬ ಅನುಮಾನ ಮೂಡುತ್ತದೆ. ರಸ್ತೆ ಹದಗೆಟ್ಟಿರುವುದರಿಂದ ರಸ್ತೆಯುದ್ದಕ್ಕೂ ದೂಳು ಎದ್ದು ಸಂಚರಿಸುವವರಿಗೆ ಸಂಕಷ್ಟ ಉಂಟು ಮಾಡಿದೆ.

ತುಂಗಳ ಗ್ರಾಮದಿಂದ ಶೂರ್ಪಾಲಿ ಆರ್.ಸಿ.ವರೆಗೆ ಸುಮಾರು 5.8 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆ ಬಿಸಿಲಿನಲ್ಲಿ ದೂಳಿನಿಂದ ತುಂಬುತ್ತದೆ. ಮಳೆಗಾಲದಲ್ಲಿ ಕೆಸರುಮಯವಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.

ಗ್ರಾಮೀಣ ಭಾಗದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಸೃಷ್ಟಿಯಾಗಿವೆ. ಈ ಗುಂಡಿಗಳ ನಡುವೆಯೇ ರಸ್ತೆ ಹುಡುಕುವ ಸ್ಥಿತಿ ಇದೆ ಎಂದರೆ ಅತಿಶಯೋಕ್ತಿಯಲ್ಲ. ಒಂದು ಗುಂಡಿ ತಪ್ಪಿಸುವುದರೊಳಗೆ ಮತ್ತೊಂದು ಗುಂಡಿ ಎದುರಾಗುತ್ತದೆ. ಇದರಿಂದ ತುಂಗಳ ಹಾಗೂ ಸುತ್ತಲಿನ ಗ್ರಾಮದ ವಾಹನ ಚಾಲಕರಿಗೆ ವಾಹನ ಚಲಾಯಿಸುವುದು ಸವಾಲಿನ ಕೆಲಸವಾಗಿದೆ.

ADVERTISEMENT

ಈ ಭಾಗದ ರಸ್ತೆಗಳು ಡಾಂಬರ್‌ ದರ್ಶನ ಕಂಡು ಹಲವು ವರ್ಷಗಳೇ ಉರುಳಿವೆ. ರಸ್ತೆಗಳ ಡಾಂಬರ್‌ ಕಿತ್ತು ಹೋಗಿದ್ದು, ಗುಂಡಿಗಳು ಅಪಾಯಕ್ಕೆ ಆಹ್ವಾನಿಸುತ್ತಿವೆ. ಈ ರಸ್ತೆಯಲ್ಲಿ ಚಲಿಸುವ ವಾಹನಗಳು ಬೀಳುತ್ತವೆಯೋ ಎನ್ನುವ ಆತಂಕ ಪ್ರಯಾಣಿಕರದ್ದು. ಈಚೆಗೆ ವೃದ್ಧೆಯೊಬ್ಬರು ದ್ವಿಚಕ್ರವಾಹನದಿಂದ ಬಿದ್ದು ಕೈಕಾಲು ಪೆಟ್ಟಾಗಿ ಆಸ್ಪತ್ರೆಗೆ ಸೇರಿದ ಘಟನೆ ನಡೆದಿದೆ. ಇಂತಹ ಅವಘಡಗಳು ಸರ್ವೇ ಸಾಮಾನ್ಯ ಎಂಬಂತಾಗಿದೆ.

ಇದೇ ರಸ್ತೆಯ ಮೂಲಕ ಹಲವು ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳು ಸಂಚರಿಸುತ್ತವೆ. ಹಲವು ಟ್ರ್ಯಾಕ್ಟರ್ ಟ್ರೇಲರ್‌ಗಳು ಬಿದ್ದಿರುವ ಉದಾಹರಣೆಗಳಿವೆ. ಈ ಭಾಗದ ಮಕ್ಕಳು ವಾಹನಗಳಲ್ಲಿ ಶಾಲೆಗೆ ಹೋಗಿ ಮರಳಿ ಮನೆಗೆ ಬರುವವರೆಗೆ ಪಾಲಕರು ಆತಂಕದಲ್ಲಿ ಇರುತ್ತಾರೆ.

ಹದಗೆಟ್ಟ ರಸ್ತೆಯಿಂದ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಸುಮಾರು ಎರಡು, ಮೂರು ಅಡಿಗಳಷ್ಟು ಗುಂಡಿಗಳು ಬಿದ್ದು ರಸ್ತೆ ಸಂಪೂರ್ಣ ಹದೆಗಟ್ಟಿದೆ. ಹಲವು ವರ್ಷಗಳಿಂದ ಈ ರಸ್ತೆ ಸುಧಾರಣೆ ಕಂಡಿಲ್ಲ. ಈ ರಸ್ತೆಯ ಮೂಲಕ ಕಾರುಗಳು ಹೋಗುವದಿಲ್ಲ ಎಂದು ತುಂಗಳ ಗ್ರಾಮಸ್ಥ ಗೋವಿಂದ ಗಿರಡ್ಡಿ ಹೇಳಿದರು.

ತುಂಗಳ ಗ್ರಾಮದಿಂದ ಶೂರ್ಪಾಲಿ ಆರ್.ಸಿ ಕೇಂದ್ರದವರೆಗೆ 5.8 ಕಿ.ಮೀ ರಸ್ತೆ ಮಾಡಲು ಮುಂಜೂರಾತಿಗಾಗಿ ನಬಾರ್ಡ್‌ಗೆ ಕಳುಹಿಸಲಾಗಿದೆ. ಮುಂಜೂರಾದ ನಂತರ ಕೆಲಸ ಮಾಡಲಾಗುತ್ತದೆ
- ವೆಂಕಟೇಶ ಆದಾಪುರ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.