
ಜಮಖಂಡಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಸುಧಾರಣೆ ಹಾಗೂ ಶೇ.100ರಷ್ಟು ಫಲಿತಾಂಶ ಗುರಿಯಾಗಿಸಿಕೊಂಡು ತಾಲ್ಲೂಕು ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಹಲವಾರು ಪ್ರಯತ್ನ ನಡೆದಿದೆ.
ಜಮಖಂಡಿ ಹಾಗೂ ರಬಕವಿ ಬನಹಟ್ಟಿ ತಾಲ್ಲೂಕು ಸೇರಿ 123 ಪ್ರೌಢಶಾಲೆಗಳಿದ್ದು 4279 ವಿದ್ಯಾರ್ಥಿನಿಯರು, 3909 ವಿದ್ಯಾರ್ಥಿಗಳು ಸೇರಿ 8188 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಸ್ವತಃ ಬಿಇಒ ಅಶೋಕ ಬಸಣ್ಣವರ ಹಾಗೂ ಮೂರು ಜನರ 33 ತಂಡ ರಚಿಸಿ ತಾಲ್ಲೂಕಿನಲ್ಲಿರುವ 123 ಪ್ರೌಢಶಾಲೆಗಳಿಗೆ ವಾರದ ಒಂದು ದಿನ ಭೇಟಿ ನೀಡಿ ಕಲಿಕೆಯಲ್ಲಿ ನೂನ್ಯತೆ ಪರಿಶೀಲನೆ ಮಾಡಿ ಮಾರ್ಗದರ್ಶನ ನೀಡುತ್ತಿದ್ದಾರೆ.
ರಾತ್ರಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಪರಿಶೀಲನೆ, ಬೆಳಿಗ್ಗೆ 5 ಗಂಟೆಗೆ ಪೋನ್ ಮಾಡಿ ವಿದ್ಯಾರ್ಥಿಗಳನ್ನು ಎಚ್ಚರಿಸಿ ಓದಲು ಮಾರ್ಗದರ್ಶನ ಮಾಡುವುದು, ಓದುವ ಮನೆ ಎಂದು ಗುರುತಿಸಿ 4-5 ವಿದ್ಯಾರ್ಥಿಗಳು ಸೇರಿ ಓದಲು ಶಾಲಾ ಕೊಠಡಿ, ಹಾಸ್ಟೆಲ್ ವ್ಯವಸ್ಥೆ, ಎರಡು ಸರಣಿ ಪರೀಕ್ಷೆ ಮುಗಿದಿದ್ದು ಎರಡು ಪರೀಕ್ಷೆಯಲ್ಲಿ ಪಾಸಾಗದ ವಿದ್ಯಾರ್ಥಿಗಳ ಮನೆಗೆ ಕಡ್ಡಾಯ ಭೇಟಿ ನೀಡಿ ಮಾರ್ಗದರ್ಶನ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಮುಂದುವರಿದ ಮಕ್ಕಳ ಜೊತೆ ಕಲಿಯಲು ಅವಕಾಶ ಒದಗಿಸಲಾಗಿದೆ.
ಡಿಸೆಂಬರ್ ಅಂತ್ಯದೊಳಗೆ ಪಠ್ಯವನ್ನು ಪೂರ್ಣ ಪ್ರಮಾಣದಲ್ಲಿ ಮುಗಿಸಿ, ಜನವರಿ ಮತ್ತು ಫೆಬ್ರುವರಿಯಲ್ಲಿ ಮರಳಿ ಪುನರಾವರ್ತನೆ ಮಾಡಿಸಲಾಗುತ್ತಿದೆ. ವಿಶೇಷ ತರಗತಿಗಳು, ಶಾಲೆಯಲ್ಲಿಯೇ ಕೆಂಪು, ನೀಲಿ, ಹಸಿರು ಗುಂಪು ರಚಿಸಿ ಪರಿಹಾರ ಬೋಧನೆ, ಬೆಳಗಿನ ಪ್ರಾರ್ಥನಾ ಸಮಯದಲ್ಲಿ ವಿವಿಧ ಚಟುವಟಿಕೆ, ಪಾಲಕರ ಸಭೆ, ತಾಯಂದಿರ ಸಭೆ, ಶಾಲೆಗೆ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತಂದು ಗೈರು ಉಳಿಯದಂತೆ ನೋಡಿಕೊಳ್ಳುವದು, ಕಳೆದ ಎರಡು ವರ್ಷದಲ್ಲಿ ಕಡಿಮೆ ಫಲಿತಾಂಶ ಬಂದ ಶಾಲೆ ಗುರುತಿಸಿ ಶಾಲಾಹಂತದ ಸಮಸ್ಯೆ ಪರಿಹರಿಸಿದ್ದಾರೆ.
’ನಾನು ಪಾಸಾಗುವೆ’ ಎಂಬ ಸಂಕಲ್ಪದೊಂದಿಗೆ 0-15 ಅಂಕ ಪಡೆದ ವಿದ್ಯಾರ್ಥಿಗಳ ಗುಂಪು, 15-25 ಅಂಕ ಪಡೆದ ಗುಂಪು, 26-50 ಅಂಕ ಪಡೆದ ಗುಂಪು, 51-100 ಅಂಕ ಪಡೆಯುವ ಗುಂಪುಗಳನ್ನು ಮಾಡಲಾಗಿದೆ ಸಾಮರ್ಥ್ಯಕ್ಕೆ ಅನುಗುನವಾಗಿ ಪ್ರಶ್ನೆಪತ್ರಿಕೆ ತಯಾರಿಸಿ ಎಲ್ಲರು ಉತ್ತಮ ಫಲಿತಾಂಶ ಮಾಡುವ ನಿಟ್ಟಿನಲ್ಲಿ ಶ್ರಮವಹಿಸಿದ್ದಾರೆ.
ಶೇ.100 ಫಲಿತಾಂಶ ಬರಲು ಪ್ರತಿ ಶಾಲೆಯಿಂದ ಟಾಪ್ 10 ವಿದ್ಯಾರ್ಥಿಗಳನ್ನು ಕರೆಸಿ ಎರಡು ಕಡೆಗಳಲ್ಲಿ ಕಾರ್ಯಾಗಾರ ಮಾಡಲಾಗಿದೆ. 200-300 ವಿದ್ಯಾರ್ಥಿಗಳು ಇರುವ ಶಾಲೆಗಳಲ್ಲಿ ವಿಶೇಷ ತರಗತಿ ನಡೆಸಲಾಗುತ್ತಿದೆ. ರಾಜಯೋಗಿನ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದವರಿಂದ ವಿದ್ಯಾರ್ಥಿಗಳಿಗೆ ಏಕಾಗ್ರತೆ, ಧ್ಯಾನ, ಓದುವ ಹವ್ಯಾಸ ಸೇರಿದಂತೆ ವಿವಿಧ ಮಾರ್ಗದರ್ಶನ ಮಾಡಿಸಲಾಗುತ್ತಿದೆ.
ಶೇ.100 ಫಲಿತಾಂಶ ಮಾಡುವ ಗುರಿ ಹೊಂದಲಾಗಿದೆ. ಸತತ 2ವರ್ಷದಿಂದ ಜಿಲ್ಲೆಗೆ ಜಮಖಂಡಿ ಪ್ರಥಮ ಸ್ಥಾನ ಪಡೆದಿದ್ದು ಅದನ್ನು ಉಳಿಸಿ ಹೆಚ್ಚಿನ ಫಲಿತಾಂಶಕ್ಕೆ ಶಿಕ್ಷಕರೊಂದಿಗೆ ವಿವಿಧ ಪ್ರಯತ್ನ ಮಾಡುತ್ತಿದ್ದೆವೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ 28 ಸ್ಥಳಗಳಲ್ಲಿ, ಮುಂದುವರಿದ ವಿದ್ಯಾರ್ಥಿಗಳಿಗೆ 2 ಸ್ಥಳಗಳಲ್ಲಿ ಕಾರ್ಯಾಗಾರ ಮಾಡಿ ಮಾರ್ಗದರ್ಶನ ನೀಡಲಾಗಿದೆ. ಒಟ್ಟು 25 ಪರೀಕ್ಷಾ ಕೇಂದ್ರಗಳಿದ್ದು ಎಲ್ಲವು ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯುತ್ತವೆ.-ಅಶೋಕ ಬಸಣ್ಣವರ, ಬಿಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.