ಬಾದಾಮಿ: ಬಾದಾಮಿ ಮತ್ತು ಗುಳೇದಗುಡ್ಡ ತಾಲ್ಲೂಕಿನ ಒಟ್ಟು 161 ಗ್ರಾಮಗಳ ಪೈಕಿ 154 ಗ್ರಾಮಗಳಿಗೆ ಜಲಜೀವನ್ ಮಿಷನ್ (24x7) ಯೋಜನೆಯಡಿ ಕಾಮಗಾರಿ ಮುಗಿದಿದ್ದು, 5 ಗ್ರಾಮಗಳಲ್ಲಿ ಕಾಮಗಾರಿ ನಡೆದಿದೆ. ಎರಡು ಗ್ರಾಮಗಳಿಗೆ ಈ ಯೋಜನೆ ಕೈಬಿಡಲಾಗಿದೆ.
ಆದರೆ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಜೆಜೆಎಂ ಕಾಮಗಾರಿ ಕಳಪೆಯಾಗಿದ್ದು, ಕೆಲವು ಗ್ರಾಮಗಳಲ್ಲಿ ಕೊಳವೆ ಸರಿಯಾಗಿ ಜೋಡಿಸಿಲ್ಲ. ನೀರು ಸರಿಯಾಗಿ ಬರುತ್ತಿಲ್ಲ. ಹಳೆಯ ನಳಗಳಿಂದ ನೀರು ಪೂರೈಕೆಯಾಗುತ್ತಿದೆ ಎಂಬುದು ಪಟ್ಟದಕಲ್ಲು, ನಂದಿಕೇಶ್ವರ, ಬಾಚಿನಗುಡ್ಡ , ಬಿ.ಎನ್. ಜಾಲಿಹಾಳ ಗ್ರಾಮಸ್ಥ ಆರೋಪ.
‘ಬೇಲೂರ ಗ್ರಾಮದ ಹೊರವಲಯದ ರಸ್ತೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಪುನಶ್ಚೇತನ ಕಾಮಗಾರಿಯಲ್ಲಿ ಕೇಂದ್ರದ ಹರ್ ಘರ್ ಜಲ ಯೋಜನೆಯ ಜೆಜೆಎಂ ಅನುದಾನದಲ್ಲಿ ₹2.14 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಈ ಯೋಜನೆಯಿಂದ ಬೇಲೂರು ಸೇರಿದಂತೆ ಸುತ್ತಲಿನ ಜಾಲಿಜಾಳ, ಚಿಕ್ಕನಸಬಿ, ಹಿರೇನಸಬಿ, ಢಾಣಕಶಿರೂರ, ಮಣ್ಣೇರಿ, ಗಿಡ್ಡನಾಯಕನಹಾಳ, ಹೊಸೂರ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಎಸ್. ಬಂಡಿ ಹೇಳಿದರು.
‘ಗ್ರಾಮೀಣ ಪ್ರದೇಶದಲ್ಲಿ 150 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅದರಲ್ಲಿ 39ಕ್ಕೂ ಅಧಿಕ ಘಟಕಗಳು ಅನುಪಯುಕ್ತವಾಗಿವೆ. ದುರಸ್ತಿಗಾಗಿ ವಿಶೇಷ ಅನುದಾನದ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಕಳಿಸಲಾಗಿದೆ. ಅನುದಾನ ಬಂದ ನಂತರ ದುರಸ್ತಿ ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದರು.
‘ತಾಲ್ಲೂಕಿನಲ್ಲಿ ನೀರಲಕೇರಿ ಮತ್ತು ಗಂಗನಬೂದಿಹಾಳ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆಯಿದ್ದು, ರೈತರ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಗಿಡ್ಡನಾಯಕನಾಳ ಗ್ರಾಮದಲ್ಲಿ ನೀರಿನ ಕೊರತೆ ಬಗ್ಗೆ ಗುರುತಿಸಲಾಗಿದೆ. ಖಾಸಗಿಯವರಿಂದ ನೀರು ಪಡೆದು ಪೂರೈಸಲಾಗುವುದು’ ಎಂದು ತಿಳಿಸಿದರು.
‘ಬೇಲೂರ ಗ್ರಾಮದ ಕಲ್ಮಠ ಏರಿಯಾದಲ್ಲಿ ಜೆಜೆಎಂ ನೀರು ಬರುತ್ತಿಲ್ಲ. ನೀರಿನ ವಾಲ್ ಚಾಲೂ ಮಾಡುವುದಿಲ್ಲ. ನಾವು ಬೇರೆ ಕಡೆಯಿಂದ ಹೊತ್ತು ತರುತ್ತೇವೆ’ ಎಂದು ಶಾಂತಪ್ಪ ಕವಲಗಿ ಹೇಳಿದರು.
‘ಬೇಲೂರ ಗ್ರಾಮದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಏಳೆಂಟು ವರ್ಷಗಳಿಂದ ಸ್ಥಗಿತವಾಗಿತ್ತು. ಜೆಜೆಎಂ ಯೋಜನೆಯಲ್ಲಿ ಪುನಶ್ಚೇತನ ಕಾಮಗಾರಿ ಕೈಗೊಂಡು ಏಳು ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ಪುನಃ ಆರಂಭಿಸಲಾಗಿದೆ. ಕೆಲವೆಡೆ ಕೊಳವೆ ಜೋಡಣೆ ಸರಿಯಾಗಿ ಮಾಡಿಲ್ಲ. ಇದನ್ನು ಸರಿಪಡಿಸಲಾಗುವುದು. ಜೆಜೆಎಂ ಕಾಮಗಾರಿ ಬಗ್ಗೆಯೂ ಪರಿಶೀಲಿಸಿ ಗ್ರಾಮಗಳಿಗೆ ನೀರಿನ ಸೌಲಭ್ಯ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ತಿಳಿಸಿದ್ದಾರೆ.
ಕೊಳವೆ ಬಾವಿ ದುರಸ್ತಿಗೆ ₹ 2.10 ಕೋಟಿ ಸರ್ಕಾರಕ್ಕೆ ಪ್ರಸ್ತಾವ ಕಳಿಸಲಾಗಿದೆ. ಮೇ ತಿಂಗಳಲ್ಲಿ ನೀರಿನ ಕೊರತೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.–ಸುರೇಶ ಕೊಕರೆ ಇಒ ತಾಲ್ಲೂಕು ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.