
ಬೀಳಗಿ: ‘ಮಾಹಿತಿ ಇಲ್ಲದೆ ಹಾಗೂ ಮಾಹಿತಿ ಕೊರತೆಯಿಂದ ಸಭೆಗೆ ಆಗಮಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿ’ ಎಂದು ಶಾಸಕ ಜೆ.ಟಿ. ಪಾಟೀಲ ಪವಿಭಾಗಾಧಿಕಾರಿಗೆ ಸೂಚನೆ ನೀಡಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್ಎಸ್ಎಲ್‌ಸಿ ಫಲಿತಾಂಶ ಉತ್ತಮವಾದ ರೀತಿಯಲ್ಲಿ ಮಾಡಲು ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು, ವೈಶಿಷ್ಟ ಪೂರ್ಣ ಯೋಜನೆಗಳನ್ನು ಇಂದಿನಿಂದಲೇ ಪ್ರಾರಂಭಿಸಿ ಎಂದ ಅವರು, ನಕಲು ರಹಿತ ಪರೀಕ್ಷೆಯನ್ನು ಆಯೋಜನೆ ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿ ಆದಾಪೂರ ಅವರಿಗೆ ತಿಳಿಸಿದರು.
ಪಶುಸಂಗೋಪನೆ ಇಲಾಖೆಯಲ್ಲಿ ಬೀಳಗಿಯಲ್ಲಿ 11, ಬಾಗಲಕೋಟೆಯಲ್ಲಿ 3, ಬದಾಮಿಯಲ್ಲಿ ಒಬ್ಬರು ಪಶು ವೈದ್ಯರ ಕೊರತೆಯಿದೆ ಎಂದು ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು.
ಲೋಕೋಪಯೋಗಿ ಇಲಾಖೆಯ ಕೆಲವು ಕಾಮಗಾರಿಗಳನ್ನು ಎರಡು ವರ್ಷಗಳಿಂದ ಪ್ರಾರಂಭ ಮಾಡದೇ ಇರುವ ಗುತ್ತಿಗೆದಾರರನ್ನು ಬ್ಲಾಕ್‌ಲಿಸ್ಟ್‌ನಲ್ಲಿಟ್ಟು ಆ ಕಾಮಗಾರಿಗಳನ್ನು ಮರು ಟೆಂಡರ್ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಡಾಂಬರ್ ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ತಗ್ಗು ತೆಗೆದು ಪೈಪ್‌ಗಳನ್ನು ಹಾಕವವರ ವಿರುದ್ಧ ಕ್ರಮ ಕೈಗೊಳ್ಳಲು ತಿಳಿಸಿದರು.
ಝಿಂಕಾರ ವನ್ಯಜೀವಿ ಅರಣ್ಯ ಧಾಮವು ನಾಲ್ಕು ವರ್ಷಗಳಿಂದ ಸರ್ವೆಯಾಗಿಲ್ಲ. ಅಧಿವೇಶನದಲ್ಲಿ ಈ ವಿಷಯದ ಕುರಿತು ಪ್ರಶ್ನೆ ಹಾಕುವೆ. ಡಿಸೆಂಬರ್‌ನಲ್ಲಿ ಪ್ರವಾಸಿ ಸ್ಥಳವಾದ ಚಿಕ್ಕ ಸಂಗಮದಲ್ಲಿ ಪ್ಲಾಂಟೇಶನ್ ಪ್ರಾರಂಭಿಸಲು ಸಾಮಾಜಿಕ ಅರಣ್ಯ ವಲಯ ಅಧಿಕಾರಿಗಳಿಗೆ ಸೂಚಿಸಿದರು.
ಬೇರೆ ರಾಜ್ಯಗಳಿಗೆ ಹೋಗುವ ಬಸ್‌ಗಳ ಮಾರ್ಗಗಳನ್ನು ಕಡಿತಗೊಳಿಸಿ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯವನ್ನು ಹೆಚ್ಚಿಸಲು ಅಧಿಕಾರಿಗಳ ಗಮನಕ್ಕೆ ತಂದರು.
ಅಧಿಕಾರಿಗಳು ಕೇವಲ ಕಚೇರಿಗಳಿಗೆ ಸೀಮಿತಗೊಳ್ಳದೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಉತ್ತಮವಾದ ಆಡಳಿತ ನೀಡುವಂತೆ ಕಿವಿಮಾತು ಹೇಳಿದರು.
ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬಿಡಿಕರ, ಬಾಗಲಕೋಟೆ ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ಬೀಳಗಿ ತಹಶೀಲ್ದಾರ್ ವಿನೋದ ಹತ್ತಳ್ಳಿ, ಬದಾಮಿ ತಹಶೀಲ್ದಾರ್ ಕಾವ್ಯಶ್ರೀ ಎಚ್., ಬಾಗಲಕೋಟೆ ತಹಶೀಲ್ದಾರ್ ವಾಸುದೇವಸ್ವಾಮಿ, ಬಾಗಲಕೋಟೆ ಇಒ ಸುಭಾಷ್ ಸಂಪಗಾವಿ, ಬದಾಮಿ ಇಒ ಸತೀಶ ಮಾಕೊಂಡ, ಬೀಳಗಿ ಇಒ ಶ್ರೀನಿವಾಸ ಪಾಟೀಲ, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ ಇದ್ದರು.
ವಸತಿ ನಿಲಯ ಪರಿಶೀಲಿಸಲು ಸೂಚನೆ
ಕಿರಾಣಿ ಅಂಗಡಿ ಪಾನ್ ಶಾಪ್‌ಗಳಲ್ಲಿ ಮದ್ಯ ಅಕ್ರಮ ಮಾರಾಟ ಮಾಡುತ್ತಿದ್ದು ಇದರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಶಾಸಕರು ಪ್ರಶ್ನಿಸಿದರು. ತಾಲ್ಲೂಕಿನಲ್ಲಿ ಹೊಸದಾಗಿ ಪ್ರಾರಂಭವಾದ ಬಾರ್‌ಗಳ ಮಾಹಿತಿ ಕೇಳಿದಾಗ ಅಬಕಾರಿ ಅಧಿಕಾರಿ ಸುಭಾಷ ಕೋಟಿ ತಡಬಡಾಯಿಸಿ ತಡವಾಗಿ ಸಭೆಗೆ ಮಾಹಿತಿ ನೀಡಿದರು. ಕಳೆದ ತಿಂಗಳು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಭೇಟಿ ನೀಡಿದಾಗ ಅಲ್ಲಿಯ ವ್ಯವಸ್ಥೆ ಅಷ್ಟೊಂದು ಸರಿ ಇರಲಿಲ್ಲ ಹಾಗಾಗಿ ಉಳಿದ ವಸತಿ ನಿಲಗಳಿಗೆ ಭೇಟಿ ನೀಡಿ ಗುಣಮಟ್ಟದ ಊಟ ವಸತಿ ಮುಂತಾದ ಸೌಲಭ್ಯಗಳನ್ನು ಪರೀಕ್ಷಿಸುವಂತೆ ಇಲಾಖೆಯ ಅಧಿಕಾರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.