
ರಬಕವಿ ಬನಹಟ್ಟಿ: ಅತಿ ಶೀಘ್ರದಲ್ಲಿಯೇ ಕೊಲ್ಲಾಪುರದ ಕನ್ಹೇರಿ ಮಠ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರ ಪುರ ಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಪೂಜ್ಯರ ಜೊತೆಗೆ ಚರ್ಚಿಸಿ ದಿನಾಂಕ ನಿಗದಿ ಮಾಡಲಾಗುವುದು. ರಬಕವಿ ಬನಹಟ್ಟಿ ಸೇರಿದಂತೆ ಸುತ್ತಲಿನ ಗ್ರಾಮೀಣ ಭಾಗದ ಜನರ ನಿಯೋಗವೊಂದು ಕನ್ಹೇರಿ ಮಠಕ್ಕೆ ತೆರಳಲಿದೆ ಎಂದು ಶಾಸಕ ಸಿದ್ದು ಸವದಿ ತಿಳಸಿದರು.
ಸ್ಥಳೀಯ ಬಂಗಾರೆವ್ವ ತಟ್ಟಿಮನಿ ಸಮುದಾಯ ಭವನದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕೆಲವರು ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಧರ್ಮ ಇಬ್ಭಾಗ ಮಾಡುತ್ತಿದ್ದಾರೆ. ಇಂಥ ಕ್ರಮ ಸರಿಯಲ್ಲ. ಹಿಂದೆ ಬಸವಣ್ಣ ಎಲ್ಲ ಜಾತಿ ಧರ್ಮವನ್ನು ಒಂದೂಗೂಡಿಸುವುದರ ಜೊತೆಗೆ ಧರ್ಮದಲ್ಲಿಯ ಮೂಢನಂಬಿಕೆ ಮತ್ತು ಜಾತಿ ವಿಷಬೀಜವನ್ನು ತೆಗೆದು ಹಾಕಲು ಪ್ರಯತ್ನಿಸಿದರು ಎಂದರು.
ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹಿರಿಯರಾಗಿದ್ದು, ನಮ್ಮ ಧರ್ಮ, ಸಮುದಾಯ ಮತ್ತು ನಮ್ಮ ಮಠ ಮಂದಿರಗಳನ್ನು ಎತ್ತಿ ಹಿಡಿಯುವ ಕಾರ್ಯವನ್ನು ಮಾಡಿದ್ದಾರೆ. ಯಾವುದೇ ದ್ವೇಷ ಅವರಲ್ಲಿ ಇಲ್ಲ.ಅವರು ಕೂಡಾ ಸಮಾಜವನ್ನು ಒಂದುಗೂಡಿಸುವ ಕಾರ್ಯ ಮಾಡುತ್ತಿದ್ದಾರೆ. ನಾವು ಒಗ್ಗಟ್ಟಾಗಿ ಇರದೆ ಇದ್ದರೆ ಮುಂದಿನ ದಿನಗಳಲ್ಲಿ ನಮ್ಮ ಧರ್ಮಕ್ಕೂ ಕೂಡಾ ತೊಂದರೆಯಾಗಲಿದೆ. ಇದು ಕಾಡಸಿದ್ಧೇಶ್ವರ ಸ್ವಾಮೀಜಿಯವರಲ್ಲಿಯ ಕಳಕಳಿಯಾಗಿದೆ ಎಂದು ತಿಳಿಸಿದರು.
ಅವಳಿ ನಗರದ ಗಣ್ಯರಾದ ಸುರೇಶ ಚಿಂಡಕ, ರಾಜಶೇಖರ ಸೋರಗಾವಿ, ನಂದು ಗಾಯಕವಾಡ, ಸಿದ್ದನಗೌಡ ಪಾಟೀಲ, ಶ್ರೀಶೈಲ ಧಬಾಡಿ, ಧರೆಪ್ಪ ಉಳ್ಳಾಗಡ್ಡಿ, ರಾಜಶೇಖರ ಮಾಲಾಪುರ, ಶ್ರೀಪಾದ ಬಾಣಕಾರ, ಗಂಗಪ್ಪ ಮುಗತಿ, ಜಯವಂತ ಮಿಳ್ಳಿ, ಎಸ್.ಎಸ್.ಹೂಲಿ, ಸುರೇಶ ಅಕ್ಕಿವಾಟ, ಪ್ರಶಾಂತ ಕೊಳಕಿ, ಸುರೇಶ ಅಬಕಾರ, ಓಂಪ್ರಕಾಶ ಕಾಬರಾ, ಶಿವಕುಮಾರ ಜುಂಜಪ್ಪನವರ ಇದ್ದರು.