ADVERTISEMENT

ಹುನಗುಂದ: ಕರಡಿ ಗ್ರಾಮದ ಹಳ್ಳದ ನೀರಿನಲ್ಲಿ ಸಿಲುಕಿದ್ದ ಬಸ್ ಹೊರಗೆಳೆದ ಸ್ಥಳೀಯರು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 3:51 IST
Last Updated 10 ಅಕ್ಟೋಬರ್ 2021, 3:51 IST
ಹಳ್ಳದ ನೀರಿನಲ್ಲಿ ಸಿಲುಕಿದ್ದ ಸಾರಿಗೆ ಸಂಸ್ಥೆ ಬಸ್
ಹಳ್ಳದ ನೀರಿನಲ್ಲಿ ಸಿಲುಕಿದ್ದ ಸಾರಿಗೆ ಸಂಸ್ಥೆ ಬಸ್   

ಬಾಗಲಕೋಟೆ: ಹುನಗುಂದ ತಾಲ್ಲೂಕಿನ ಕರಡಿ ಗ್ರಾಮದ ಬಳಿ ಹಳ್ಳದ ನೀರಿನಲ್ಲಿ ಸಿಲುಕಿದ್ದ ಸಾರಿಗೆ ಸಂಸ್ಥೆ ಬಸ್ನ್ನು ಭಾನುವಾರ ಟ್ರ್ಯಾಕ್ಟರ್ ಮೂಲಕ ಗ್ರಾಮಸ್ಥರು ಹೊರಗೆ ಎಳೆದಿದ್ದಾರೆ.

ಶನಿವಾರ ರಾತ್ರಿ ಸುರಿದ ಮಳೆಗೆ ಕರಡಿ ಬಳಿಯ ಬೇಕಮಲದಿನ್ನಿ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಹುನಗುಂದದಿಂದ ರಾತ್ರಿ ಕರಡಿಗೆ ಹೊರಟಿದ್ದ ವಸತಿ ಬಸ್ ರಸ್ತೆ ಮೇಲೆ ಹರಿಯುತ್ತಿದ್ದ ಹಳ್ಳದ ನೀರಿನಲ್ಲಿ ಸಿಲುಕಿಕೊಂಡಿದೆ. ಚಾಲಕ, ನಿರ್ವಾಹಕ ಹಾಗೂ ಬೆರಳೆಣಿಕೆಯಷ್ಟು ಪ್ರಯಾಣಿಕರು ಯಾವುದೇ ಅಪಾಯವಿಲ್ಲದೇ ಹೊರಗೆ ಬಂದಿದ್ದಾರೆ.

ADVERTISEMENT

ಮಳೆ ಕಡಿಮೆಯಾಗಿದ್ದರಿಂದ ಹಳ್ಳದಲ್ಲಿ ಹರಿಯುವ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗಲಿಲ್ಲ. ಆದರೆ ಬಸ್ ಮಾತ್ರ ಹಳ್ಳದಲ್ಲಿಯೇ ಸಿಲುಕಿಕೊಂಡಿತ್ತು.

ಮುಂಜಾನೆ ಕರಡಿ ಗ್ರಾಮದ ಯುವಕರು ಬಸ್ ಚಾಲಕ, ನಿರ್ವಾಹಕರ ನೆರವಿಗೆ ಬಂದರು. ಟ್ರ್ಯಾಕ್ಟರ್ ಗೆ ಹಗ್ಗದ ಸಹಾಯದಿಂದ ಬಸ್ ಕಟ್ಟಿ ಹರ ಸಾಹಸ ಪಟ್ಟು ಹಳ್ಳದಿಂದ ಹೊರಗೆ ಎಳೆದು ತಂದರು.

ಬಸ್ ಹಳ್ಳದಿಂದ ಮೇಲೆ ಬರುತ್ತಿದ್ದಂತೆಯೇ ಸುತ್ತಲೂ ನೆರೆದಿದ್ದ ಗ್ರಾಮಸ್ಥರಿಂದ ಚಪ್ಪಾಳೆ-ಕೇಕೆ, ಶಿಳ್ಳೆ ಮುಗಿಲು ಮುಟ್ಟಿತ್ತು.

ಹಳ್ಳದ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಹುನಗುಂದ-ಕರಡಿ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.