ADVERTISEMENT

ಮುಖ್ಯಮಂತ್ರಿಗಳೇ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ಸಿಗರ ಹೇಳಿಕೆಗೆ ಉತ್ತರಿಸಿ: ಜೋಶಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 11:12 IST
Last Updated 21 ಜೂನ್ 2025, 11:12 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಬಾಗಲಕೋಟೆ: ಮನೆ ಹಂಚಿಕೆ ಭ್ರಷ್ಟಾಚಾರ ಕುರಿತು ಬಿ.ಆರ್. ಪಾಟೀಲ, ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರ ಕುರಿತು ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.

ಜಿಲ್ಲೆಯ ಪಟ್ಟದಕಲ್ಲಿನಲ್ಲಿ ಶನಿವಾರ ವಿಶ್ವ ಯೋಗ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಹೇಳಿದರೆ ಬಿಜೆಪಿಯವರಿಗೆ ಕೆಲಸ ಇಲ್ಲ ಎನ್ನುತ್ತಾರೆ. ಈಗ ಅವರದ್ದೇ ಪಕ್ಷದ ನಾಯಕರು ಹೇಳುತ್ತಿದ್ದಾರೆ ಎಂದರು.

ಮನೆ ಹಂಚಿಕೆಯಲ್ಲಿ ನಡೆದಿರುವ ಭ್ರಷ್ಟಾಚಾರ ಕುರಿತು ಅಡಿಯೊ ಬಿಡುಗಡೆ ಆಗಿದೆ. ಹಣ ನೀಡದಿದ್ದರೆ ಮನೆ ಮಂಜೂರು ಮಾಡಲ್ಲ ಎಂದಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ದುಸ್ಥಿತಿ ಎಂದು ಟೀಕಿಸಿದರು.

ADVERTISEMENT

ವರ್ಗಾವಣೆಯಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಶಾಸಕರೇ ಆರೋಪಿಸಿದ್ದಾರೆ.‌ ಶೇ60 ಪರ್ಸೆಂಟ್ ಸರ್ಕಾರ ಎಂದು ಗುತ್ತಿಗೆದಾರರು ಆರೋಪಿಸುತ್ತಿದ್ದಾರೆ. ಭ್ರಷ್ಟಾಚಾರದ ಮೊಟ್ಟೆ ಇಟ್ಟು ಮರಿಗಳನ್ನು ಬೆಳೆಸಿದವರೇ ಕಾಂಗ್ರೆಸ್ಸಿಗರು ಎಂದು ಆರೋಪಿಸಿದರು.

ಯುಪಿಎ ಸರ್ಕಾರದಲ್ಲಿ ₹12 ಲಕ್ಷ ಕೋಟಿ ಭ್ರಷ್ಟಾಚಾರ ನಡೆದಿದೆ.

ಸೊನ್ನೆ ಇಡಲಿಕ್ಕೂ ಗೊಂದಲ ಆಗಬೇಕು. ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರೇ ಜಾಮೀನಿನ ಮೇಲೆ ಇದ್ದಾರೆ. ಇನ್ನು ಇವರಿಗೆ ಹೇಳುವವರು ಯಾರು ಎಂದು ಪ್ರಶ್ನಿಸಿದರು.

ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಬಣದವರು ನವೆಂಬರ್ ನಲ್ಲಿ ಸಿಎಂ ಬದಲಾವಣೆ ಖಚಿತ ಎನ್ನುತ್ತಾರೆ. ಸಿದ್ದರಾಮಯ್ಯ ಬಣದವರು ಯಾವುದೇ ಬದಲಾವಣೆ ಇಲ್ಲ ಎನ್ನುತ್ತಾರೆ. ಶಾಸಕರನ್ನು ಖರೀದಿಸಲು ಎರಡೂ ಬಣದವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.