ADVERTISEMENT

ಬಾಗಲಕೋಟೆ, ಬೆಳಗಾವಿ, ಬಳ್ಳಾರಿಯಲ್ಲಿ ಮಳೆ: ಮುಳುಗಿದ ಬ್ಯಾರೇಜ್, ದೇಗುಲ ಜಲಾವೃತ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 18:34 IST
Last Updated 29 ಜುಲೈ 2025, 18:34 IST
ಮುಧೋಳ ತಾಲ್ಲೂಕು ಮಾಚಕನೂರ ಗ್ರಾಮದ ಹೊಳೆಬಸವೇಶ್ವರ ದೇವಸ್ಥಾನ ಘಟಪ್ರಭಾ ನದಿಯ ಪ್ರವಾಹದಿಂದ ಜಲಾವೃತ ಆಗಿರುವುದು
ಮುಧೋಳ ತಾಲ್ಲೂಕು ಮಾಚಕನೂರ ಗ್ರಾಮದ ಹೊಳೆಬಸವೇಶ್ವರ ದೇವಸ್ಥಾನ ಘಟಪ್ರಭಾ ನದಿಯ ಪ್ರವಾಹದಿಂದ ಜಲಾವೃತ ಆಗಿರುವುದು   

ಹುಬ್ಬಳ್ಳಿ: ಬಾಗಲಕೋಟೆ, ಬೆಳಗಾವಿ ಮತ್ತು ಬಳ್ಳಾರಿ ಜಿಲ್ಲೆಯ ವಿವಿಧೆಡೆ ನದಿಗಳು ಉಕ್ಕಿ ಹರಿಯುತ್ತಿವೆ. ಬಹುತೇಕ ಕಡೆ ಸೇತುವೆಗಳು ಜಲಾವೃತಗೊಂಡಿದ್ದು, ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಕೆಲ ಕಡೆ ದೇಗುಲಗಳು ಮುಳುಗಡೆಯಾಗಿವೆ. ಗ್ರಾಮಗಳಿಗೂ ನೀರು ಆವರಿಸುವ ಆತಂಕ ಎದುರಾಗಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ 8 ಬ್ರಿಜ್‌ ಕಂ ಬ್ಯಾರೇಜ್‌ಗಳು ಘಟಪ್ರಭಾ ನದಿ ಪ್ರವಾಹದಿಂದ ಜಲಾವೃತಗೊಂಡಿವೆ. ಪ್ರವಾಹ ಹೆಚ್ಚಾದರೆ, ತಾಲ್ಲೂಕಿನ ಮಿರ್ಜಿ, ಮಳಲಿ, ಒಂಟಗೋಡಿ, ಮಾಚಕನೂರ ಮತ್ತಿತರ ಗ್ರಾಮಗಳಿಗೆ ನೀರು ಆವರಿಸುವ ಭೀತಿ ಎದುರಾಗಿದೆ. 

ತುಂಗಭದ್ರಾ ಜಲಾಶಯದಿಂದ 1.10 ಲಕ್ಷ ಕ್ಯೂಸೆಕ್ ನೀರು ಹೊರಗೆ ಬಿಟ್ಟಿದ್ದರಿಂದ ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲ್ಲೂಕಿನ ಕಂಪ್ಲಿ– ಗಂಗಾವತಿ ಸೇತುವೆ ಜಲಾವೃತವಾಗಿರುವುದು

ಮಾಚಕನೂರ ಗ್ರಾಮದ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತವಾಗಿದೆ. ಭಕ್ತರು ನೀರಿನಲ್ಲೇ ದೇವಸ್ಥಾನದವರೆಗೆ ನಡೆದು, ದೇವರ ದರ್ಶನ ಪಡೆದರು. 

ADVERTISEMENT

ರಾಯಬಾಗ ವರದಿ: ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಿದ್ದು, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿ-ಭಿರಡಿ ಕೂಡುವ ರಸ್ತೆ ಜಲಾವೃತಗೊಂಡಿದೆ. ರಾಯಬಾಗದ ಕುಡಚಿ–ಉಗಾರ ಸೇತುವೆ  ಮುಳುಗಿ ಸಂಚಾರ ಸ್ಥಗಿತಗೊಂಡಿದೆ. ಕುಡಚಿ ಪೋಲೀಸರು ಎರಡೂ ಬದಿ ಬ್ಯಾರಿಕೇಡ್ ಅಳವಡಿಸಿದ್ದಾರೆ.

ಕಂಪ್ಲಿ ವರದಿ: ತುಂಗಭದ್ರಾ ನದಿಗೆ ಜಲಾಶಯದಿಂದ 1.10 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಮೂರು ದಿನದಿಂದ ಕಂಪ್ಲಿ-ಗಂಗಾವತಿ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.  

ರಾಯಬಾಗ ತಾಲ್ಲೂಕಿನ ಕುಡಚಿ ಕೃಷ್ಣಾ ನದಿ ಸೇತುವೆ ಜಲಾವೃತಗೊಂಡು ವಾಹನಗಳ ಸಂಚಾರ ಸ್ಥಗಿತಗೊಂಡಿದೆ.

ಪಟ್ಟಣ ಸೇರಿದಂತೆ ಸುತ್ತಲಿನ ಹಳ್ಳಿಗಳಿಂದ ನಿತ್ಯ ಗಂಗಾವತಿಗೆ ತೆರಳುವ ವಿವಿಧ ಶಾಲಾಕಾಲೇಜು ವಿದ್ಯಾರ್ಥಿಗಳು, ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ತೆರಳುವ ರೋಗಿಗಳಿಗೆ ಸಮಸ್ಯೆಯಾಗಿದೆ.

ಕೋಟೆ ಗಂಗಮ್ಮನ ಕಟ್ಟೆ, ಕೋಟೆ ಮಾಧವ ತೀರ್ಥರ ವೃಂದಾವನ ಮತ್ತು ಕೋಟೆ ಹೊಳೆ ಆಂಜನೇಯ ದೇವಸ್ಥಾನ ಜಲಾವೃತವಾಗಿವೆ. ಕಂಪ್ಲಿ-ಸಿರುಗುಪ್ಪ ಹೆದ್ದಾರಿಯ ನಾರಿಹಳ್ಳ ಸೇತುವೆ ಮುಳುಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.