ಬಾಗಲಕೋಟೆ: ನ್ಯಾಯ ಒದಗಿಸುವಲ್ಲಿ ರಾಜ್ಯ ಪೊಲೀಸ್ ಇಲಾಖೆಯು ರಾಷ್ಟ್ರದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ಸೋಮವಾರ ನವನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ನಿರ್ಮಿಸಿರುವ ಧಾತ್ರಿ ಮಂಗಲ ಭವನ ಹಾಗೂ ಉತ್ಕರ್ಷ ಪೊಲೀಸ್ ನಿವಾಸ ಉದ್ಘಾಟಿಸಿ ಮಾತನಾಡಿದ ಅವರು, ‘ಇದು ನಮ್ಮ ಸರ್ಕಾರ ಹೇಳಿದ್ದಲ್ಲ. ಹೈದರಾಬಾದ್‌ನ ಸಂಸ್ಥೆಯೊಂದು ಅಧ್ಯಯನ ಮಾಡಿ ತಿಳಿಸಿದೆ’ ಎಂದರು.
‘ಜಿಲ್ಲೆಯ ಪ್ರತಿಯೊಂದು ತಾಲ್ಲೂಕು ಕೇಂದ್ರದಲ್ಲಿ ಪೊಲೀಸ್ ವಸತಿ ಗೃಹ ನಿರ್ಮಾಣ ಮಾಡುವ ಕೆಲಸ ಮಾಡಲಾಗುತ್ತಿದೆ. 10 ಸಾವಿರ ಮನೆಗಳ ನಿರ್ಮಾಣ ಮಾಡಲಾಗಿದೆ. ಶೇ40ರಷ್ಟು ಪೊಲೀಸರಿಗೆ ವಸತಿ ಸೌಲಭ್ಯ ದೊರೆತಿದೆ. ಮುಖ್ಯಮಂತ್ರಿ ಅವರು ಮತ್ತಷ್ಟು ಮನೆಗಳ ನಿರ್ಮಾಣಕ್ಕೆ ₹400 ಕೋಟಿ ಬಿಡುಗಡೆ ಮಾಡಿದ್ದಾರೆ’ ಎಂದು ಹೇಳಿದರು.
‘ಈ ಹಿಂದೆ ಆರೋಗ್ಯ ತಪಾಸಣೆಗೆ ನೀಡಲಾಗುತ್ತಿದ್ದ ₹1 ಸಾವಿರವನ್ನು ₹1,500ಕ್ಕೆ ಹೆಚ್ಚಿಸಲಾಗಿದೆ. ಕೊಲೆ, ಅತ್ಯಾಚಾರ ಸೇರಿದಂತೆ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತಿವೆ. ಇದನ್ನು ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿರುವುದು ಗೊತ್ತಾಗುತ್ತದೆ. ಹಾಗೆಂದ ಮಾತ್ರಕ್ಕೆ ಅಪರಾಧಗಳು ನಡೆದಿಲ್ಲ ಎನ್ನುತ್ತಿಲ್ಲ. ಅವುಗಳ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಲಾಗಿದೆ’ ಎಂದರು.
‘ಪೊಲೀಸ್ ಇಲಾಖೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಪ್ರತಿ ಜಿಲ್ಲೆಗೂ ಸಿಇಎನ್ ಪೊಲೀಸ್ ಠಾಣೆ ತೆರೆದ ದೇಶದ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಠಾಣೆಗಳ ಆಧುನೀಕರಣ ಮಾಡಲಾಗುತ್ತಿದೆ. ಜತೆಗೆ ಇಲಾಖೆಯನ್ನು ಜನಸ್ನೇಹಿಯನ್ನಾಗಿ ಮಾಡಲಾಗುತ್ತಿದೆ’ ಎಂದು ಹೇಳಿದರು.
‘ಬಾಗಲಕೋಟೆ ಜಿಲ್ಲಾ ಪೊಲೀಸರು ಜನಕಲ್ಯಾಣ ಕಾರ್ಯ ಮಾಡಿದ್ದು, ಖನಿಜ ಸಂಪತ್ತಿನ ನಿಧಿಯಿಂದ ₹1 ಕೋಟಿ, ನಗಸಭೆಯಿಂದ ₹50 ಲಕ್ಷ, ಪೊಲೀಸ್ ಕಲ್ಯಾಣ ನಿಧಿಯಿಂದ ₹2.55 ಕೋಟಿ ಬಳಸಿಕೊಂಡು ಸಾರ್ವಜನಿಕರಿಗೆ ಉಪಯೋಗವಾಗುವಂತಹ ಕಟ್ಟಡ ನಿರ್ಮಾಣ ಮಾಡಲಾಗಿದೆ’ ಎಂದರು.
ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ, ಶಾಸಕ ಭೀಮಸೇನ ಚಿಮ್ಮನಕಟ್ಟಿ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ, ಸಭಾಪತಿ ಯಲ್ಲಪ್ಪ ನಾರಾಯಣಿ, ಐಜಿಪಿ ಚೇತನಸಿಂಗ್ ರಾಠೋಡ, ಜಿಲ್ಲಾಧಿಕಾರಿ ಸಂಗಪ್ಪ ಎಂ, ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠ ಅಮರನಾಥ ರೆಡ್ಡಿ ಇದ್ದರು.
ಮಂಗಲ ಭವನದಿಂದ ಸಾರ್ವಜನಿಕರಿಗೆ ಉಪಯೋಗ ಪೊಲೀಸರಿಂದ ಸಮಾಜದಲ್ಲಿ ಶಾಂತಿ ಆರೋಗ್ಯ ತಪಾಸಣೆ ಮೊತ್ತ ಹೆಚ್ಚಳ
ಅಪರಾಧ ತೆಡೆಯಲು ಕೈಜೋಡಿಸಿ
ಬಾಗಲಕೋಟೆ: ‘ಜಾತಿ ಧರ್ಮಗಳ ನಡುವೆ ಜಗಳ ಹಚ್ಚಬಾರದು. ಅಪರಾಧ ಕೃತ್ಯ ತಡೆಯಲು ಎಲ್ಲರೂ ಕೈಜೋಡಿಸಬೇಕಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು. ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಮಾತನಾಡಿ ‘ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದು ಶಾಂತಿ ನೆಮ್ಮದಿ ನೆಲೆಸುವಂತೆ ಮಾಡಿದ್ದಾರೆ’ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವೈ.ಮೇಟಿ ಮಾತನಾಡಿ ಸಾರ್ವಜನಿಕರಿಗೂ ಮಂಗಲ ಭವನ ನೀಡುತ್ತಿರುವುದು ಒಳ್ಳೆಯ ಕಾರ್ಯ ಎಂದು ಶ್ಲಾಘಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.