ADVERTISEMENT

ಪಡಿತರ ಅಕ್ಕಿ ನುಸಿಗಳ ಪಾಲು; ಗೋದಾಮುಗಳ ಸುತ್ತಲಿನ ನಿವಾಸಿಗಳ ಗೋಳಾಟ

ಬಸವರಾಜ ಹವಾಲ್ದಾರ
Published 30 ನವೆಂಬರ್ 2023, 21:12 IST
Last Updated 30 ನವೆಂಬರ್ 2023, 21:12 IST
<div class="paragraphs"><p>ಬಾಗಲಕೋಟೆಯ ರಾಜ್ಯ ಉಗ್ರಾಣ ನಿಗಮದಲ್ಲಿರುವ ಪಡಿತರ ಅಕ್ಕಿ ಚೀಲಗಳಿಗೆ ಮುತ್ತಿಕೊಂಡಿರುವ ನುಸಿಗಳು</p></div>

ಬಾಗಲಕೋಟೆಯ ರಾಜ್ಯ ಉಗ್ರಾಣ ನಿಗಮದಲ್ಲಿರುವ ಪಡಿತರ ಅಕ್ಕಿ ಚೀಲಗಳಿಗೆ ಮುತ್ತಿಕೊಂಡಿರುವ ನುಸಿಗಳು

   

ಬಾಗಲಕೋಟೆ: ನವನಗರದಲ್ಲಿರುವ ರಾಜ್ಯ ಉಗ್ರಾಣ ನಿಗಮದಲ್ಲಿನ ಸಾವಿರಾರು ಟನ್‌ ಪಡಿತರ ಅಕ್ಕಿ ನುಸಿಗಳ ಪಾಲಾಗುತ್ತಿದೆ. ಅವುಗಳ ಹಾವಳಿ ಸುತ್ತಲಿನ ಪ್ರದೇಶಗಳಿಗೂ ವ್ಯಾಪಿಸಿದ್ದು, ಅಲ್ಲಿನ ನಿವಾಸಿಗಳಿಗೆ ಮನೆಯಲ್ಲಿ ವಾಸಿಸುವುದು ಕಷ್ಟವಾಗಿದೆ.

ರಾಜ್ಯ ಉಗ್ರಾಣ ನಿಗಮದಲ್ಲಿ 43,264 ಮೆಟ್ರಿಕ್‌ ಟನ್‌ ಪಡಿತರ ಅಕ್ಕಿ ಮತ್ತು ರಸಗೊಬ್ಬರ ಸಂಗ್ರಹವಿದೆ. ಅದರಲ್ಲಿ 33 ಸಾವಿರ ಮೆಟ್ರಿಕ್‌ ಟನ್‌ ಅಕ್ಕಿ ಇದೆ. ಗೋದಾಮಿನಲ್ಲಿ ಎಲ್ಲೆಡೆ ನುಸಿಗಳು ಹರಡಿವೆ.

ADVERTISEMENT

ಜಿಲ್ಲೆಯ ಪಡಿತರದಾರರಿಗೆ ಪ್ರತಿ ತಿಂಗಳು 8 ಸಾವಿರ ಮೆಟ್ರಿಕ್‌ ಟನ್‌ ಅಕ್ಕಿ ಅಗತ್ಯವಿದ್ದು, ಇಲ್ಲಿಂದಲೇ ಪಡಿತರ ಅಂಗಡಿಗಳಿಗೆ ಅಕ್ಕಿ ರವಾನೆಯಾಗುತ್ತದೆ. ಆರು ತಿಂಗಳಿಗೆ ಬೇಕಾಗುವಷ್ಟು ಅಕ್ಕಿ ಸಂಗ್ರಹವಿದೆ.

‘ನುಸಿಗಳು ಹೆಚ್ಚಿದ್ದು, ಸುತ್ತಮುತ್ತಲಿನ ಜನರು ದೂರು ನೀಡಿದ್ದಾರೆ. ನುಸಿಗಳ ನಿಯಂತ್ರಣಕ್ಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಜೊತೆ ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಈಗಾಗಲೇ ಚರ್ಚಿಸಿದ್ದಾರೆ’ ಎಂದು ನಿಗಮದ ವ್ಯವಸ್ಥಾಪಕ ಜಯರಾಂ ಚವ್ಹಾಣ ತಿಳಿಸಿದರು.

ನುಸಿಗಳ ಕಾಟ, ಬೇಸತ್ತ ನಿವಾಸಿಗಳು: ನಿಗಮದ ಉಗ್ರಾಣಗಳಿಗೆ ಹೊಂದಿಕೊಂಡಿರುವ ನವನಗರದ ಸೆಕ್ಟರ್‌ 35 ಮತ್ತು 36ರಲ್ಲಿರುವ ನೂರಾರು ಮನೆಗಳ ನಿವಾಸಿಗಳು ನುಸಿಗಳ ಕಾಟದಿಂದ ಸುತ್ತಾಗಿದ್ದಾರೆ.

‘ಮನೆಯಲ್ಲಿ ಮಾಡಿಟ್ಟ ಅಡುಗೆ, ಕುಡಿಯುವ ನೀರು, ಆಹಾರ ಧಾನ್ಯ ಸೇರಿ ಎಲ್ಲ ಕಡೆ ನುಸಿಗಳು ಇರುತ್ತವೆ. ಅಡುಗೆ ಕಾಯ್ದಿಡುವುದೆ ಸವಾಲಾಗಿದೆ. ನಾಲ್ಕೈದು ವರ್ಷಗಳಿಂದ ನುಸಿಗಳು ಬರುತ್ತಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ, ನಿಯಂತ್ರಣ ಸಾಧ್ಯವಾಗಿಲ್ಲ. ಬೇರೆಡೆ ಜಾಗ ಕೊಟ್ಟರೆ ಅಲ್ಲಿಯೇ ಮನೆ ಕಟ್ಟಿಸಿಕೊಳ್ಳುತ್ತೇವೆ’ ಎಂದು ನಿವಾಸಿ ಅಬ್ಬಾಸ್‌ ಬದಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಡಿತರದಲ್ಲಿ ವಿತರಣೆಯಾಗುವ ಅಕ್ಕಿಯಲ್ಲೂ ನುಸಿ ಇರುತ್ತವೆ. ಅವುಗಳನ್ನು ಶುಚಿಗೊಳಿಸಿ ಬಳಸಬೇಕಿದೆ. ಈ ಬಗ್ಗೆ ಅಂಗಡಿಯವರನ್ನು ಕೇಳಿದರೆ, ಗೋದಾಮಿನಿಂದಲೇ ಹೀಗೆ ಬಂದಿದೆ ಎನ್ನುತ್ತಾರೆ’ ಎಂದು ಪಡಿತರದಾರರೊಬ್ಬರು ಹೇಳಿದರು.

ನುಸಿಗಳ ನಿರ್ವಹಣೆಗೆ ಬೇಕಾದ ರಾಸಾಯನಿಕ ಪೂರೈಕೆಯಾಗಿಲ್ಲ. ಕೂಲಿಕಾರರಿಗೆ ವೇತನ ನೀಡಲು ಅನುದಾನದ ಕೊರತೆ ಇದೆ. ಕೂಡಲೇ ಕಳುಹಿಸಿಕೊಡುವಂತೆ ಮನವಿ ಮಾಡಲಾಗಿದೆ.
–ಜಯರಾಂ ಚವ್ಹಾಣ, ರಾಜ್ಯ ಉಗ್ರಾಣ ನಿಗಮ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.