
ರಬಕವಿ ಬನಹಟ್ಟಿ: ಬಾಗಲಕೋಟೆ ಕುಡಚಿ ರೈಲು ಮಾರ್ಗ 2027ರ ಮಾರ್ಚ್ ಒಳಗಾಗಿ ಪೂರ್ಣಗೊಳ್ಳಲಿದೆ ಮತ್ತು ಈ ನಿಟ್ಟಿನಲ್ಲಿ ಕುಡಚಿ ಭಾಗದಿಂದ ರೈಲು ಕಾಮಗಾರಿಗೆ ಸಂಬಂಧಪಟ್ಟಂತೆ ಸ್ಥಳದೆ ಸ್ವಚ್ಛತೆ ಕಾರ್ಯವನ್ನು ಇಲಾಖೆ ಆರಂಭ ಮಾಡಿದೆ. ಒಂದು ವೇಳೆ ಈಗ ಆರಂಭ ಮಾಡಿರುವ ಕಾಮಗಾರಿಯನ್ನು ತಾರತಮ್ಯ ಮಾಡಿ, ಹುನ್ನಾರಮಾಡಿ ನಿಲ್ಲಿಸಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈಲು ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಕುತಬುದ್ದೀನ್ ಖಾಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಅವರು ಶನಿವಾರ ಸ್ಥಳೀಯ ಲೋಕೋಪಯೋಗಿ ಇಲಾಖೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ರೈಲು ಮಾರ್ಗಕ್ಕಾಗಿ ಕುಡಚಿಯಲ್ಲಿ ಹಮ್ಮಿಕೊಳ್ಳಲಾದ ಸತ್ಯಾಗ್ರಹದಲ್ಲಿ ರಬಕವಿ ಬನಹಟ್ಟಿ, ಕುಡಚಿ, ತೇರದಾಳ, ಸುಟ್ಟಟ್ಟಿ ಹಾಗೂ ಹಾರೂಗೇರಿ ವಿಭಾಗದಲ್ಲಿಯ ಬಹಳಷ್ಟು ಜನರು ಬೆಂಬಲ ಸೂಚಿಸಿದರು. ಈ ಎಲ್ಲ ಜನರಿಗೂ ರೈಲು ಮಾರ್ಗದ ಅವಶ್ಯಕತೆ ಇದೆ ಎಂದರು.
ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಿಕಿಹೋಳಿ ಚಿಕ್ಕೋಡಿ ಭೂಸ್ವಾಧೀನ ಅಧಿಕಾರಿಗೆ ತುರ್ತಾಗಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ. ಅದೇ ರೀತಿಯಾಗಿ ಅಲ್ಲಿಯ 302 ಎಕರೆಯಷ್ಟು ಭೂ ಪ್ರದೇಶವನ್ನು ರೈಲು ಇಲಾಖೆಗೆ ಈಗಾಗಲೇ ವರ್ಗಾವಣೆ ಮಾಡಲಾಗಿದೆ. ಇದಕ್ಕೆ ಯಾವುದೇ ತಕರಾರು ಇರುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಖಾಜಿ ತಿಳಿಸಿದರು.
ಕುಡಚಿಯಿಂದ ಜಮಖಂಡಿಯವರೆಗೆ ಅಂದಾಜು 58 ಕಿ.ಮೀ ಮಾರ್ಗದ ಸ್ಥಳದ ಸ್ವಚ್ಛತೆಗೆ ಟೆಂಡರ್ ನೀಡುವ ಪ್ರಕ್ರಿಯೆ ಕೂಡಲೇ ಆರಂಭಗೊಳ್ಳಲಿದೆ. ಸ್ವಚ್ಛತೆಗೆ ಸಂಬಂಧಪಟ್ಟಂತೆ ಕಾರ್ಯ ಈಗ ಎರಡು ದಿನಗಳಲ್ಲಿ ಹಾರೂಗೇರಿಯವರೆಗೆ ಬಂದಿದೆ ಎಂದರು. ಭೂಸ್ವಾಧೀನ ಪಡಿಸಿಕೊಂಡ ರೈತರಿಗೂ ಕೂಡಾ ರೈಲು ಮಾರ್ಗದ ಸ್ಥಳದ ಸ್ವಚ್ಛತೆಗೆ ಅನುಕೂಲ ಮಾಡಿಕೊಡಬೇಕು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಮಾರ್ಗಕ್ಕೆ ಬೇಕಾದ 3400 ಎಕರೆ ಭೂಪ್ರದೇಶ ರಾಜ್ಯ ಸರ್ಕಾರ ನೀಡಲು ಸಜ್ಜಾಗಿದೆ. ಅದಕ್ಕೆ ಸಂಬಂಧಪಟ್ಟ ತೊಂದರೆಗಳನ್ನು ಕೂಡಾ ನಿವಾರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಿಕಿಹೊಳಿಯವರಿಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಕುತಬುದ್ದೀನ್ ಖಾಜಿ ತಿಳಿಸಿದರು.
ಸಭೆಯಲ್ಲಿ ಡಾ.ರವಿ ಜಮಖಂಡಿ, ಬ್ರಿಜ್ಮೋಹನ ಡಾಗಾ, ರಾಜಶೇಖರ ಸೋರಗಾವಿ, ಸುಭಾಸ ಶಿರಬೂರ, ಭುಜಬಲಿ ಕೆಂಗಾಲಿ, ಈರಪ್ಪ ಹಿಪ್ಪರಗಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.