
ಹುನಗುಂದ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ವಿವಿಧ ವಲಯದ ಕಾರ್ಮಿಕರ ಅನುಕೂಲಕ್ಕಾಗಿ ಹೆಚ್ಚಿನ ಸವಲತ್ತುಗಳನ್ನು ನೀಡುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಮಂಗಳವಾರ ಪಟ್ಟಣದ ಟಿಸಿಎಚ್ ಕಾಲೇಜು ಆವರಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಟ್ರೇಡ್ ಯೂನಿಯನ್ ಸಹಯೋಗದೊಂದಿಗೆ ನಡೆದ ಸಮಾರಂಭದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಸಂಘಟಿತ ಮತ್ತು ಅಸಂಘಟತ ಕಾರ್ಮಿಕರ ನೂತನ ಕಾರ್ಮಿಕರ ಯೂನಿಯನ್ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸಣ್ಣ ಪುಟ್ಟ ಸಮುದಾಯದ 101 ಕಸಬುದಾರರಿಗೆ ಅನುಕೂಲಕ್ಕಾಗಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ₹15 ಲಕ್ಷ ವರೆಗೆ ಆರೋಗ್ಯ ಕಾರ್ಡ್ ನೀಡಲಾಗುವುದು ಎಂದರು.
ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಮುಂದಿನ ದಿನಗಳಲ್ಲಿ ಸಚಿವ ಸಂತೋಷ ಲಾಡ್ ಅವರೊಂದಿಗೆ ಕೆಲಸ ಮಾಡುವ ಆಸೆ ಇದೆ. ಅದನ್ನು ಸಂಗಮನಾಥನಲ್ಲಿ ಬೇಡಿಕೊಳ್ಳುವೆ ಎನ್ನುವ ಮೂಲಕ ತಾವು ಸಚಿವ ಸ್ಥಾನದ ಆಕಾಂಕ್ಷಿ ಎಂದು ಪರೋಕ್ಷವಾಗಿ ಹೇಳಿದರು.
ಇಳಕಲ್ - ಹನಮಸಾಗರದ ಹಜರತ್ ಸೈಯದ್ ಮುರ್ತುಜಾ ಹುಸೈನಿ ಹಾಗೂ ಪಟ್ಟಣದ ಗಚ್ಚಿನಮಠದ ಅಮರೇಶ್ವರ ದೇವರು, ಎನ್ಎಫ್ಐಡಿ ರಾಷ್ಟ್ರೀಯ ಅಧ್ಯಕ್ಷ ವೆಂಕಟೇಶ ವರದರಾಜ, ಮೃತ್ಯುಂಜಯ ಮುನುವಳ್ಳಿಮಠ, ಕರ್ನಾಟಕ ಯೂನಿಯನ್ ರಾಜ್ಯ ಅಧಕ್ಷ ಸಂಗಮೇಶ ಗೌಡರ, ವಿಶ್ವೇಶ್ವರಯ್ಯ ಸಂಘಟಿತ ಮತ್ತು ಅಸಂಘಟಿತ ಕಟ್ಟಡ ಕೂಲಿ ಕಾರ್ಮಿಕರ ಸಂಘಟನೆ ತಾಲ್ಲೂಕು ಅಧ್ಯಕ್ಷ ಮಹಬೂಬ್ ಧನ್ನೂರ, ಇಳಕಲ್ ನಗರ ಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ, ಜಿಲ್ಲಾ ಕಾರ್ಮಿಕ ಕಲ್ಯಾಣಾಧಿಕಾರಿ ರಮೇಶ ಸುಂಬಡ,ವಿ ಎಂ. ಮುಖಂಡರಾದ ಸಿದ್ದು ಕೊಣ್ಣೂರ, ನಾಗರಾಜ ಎಚ್ ಎಸ್, ತಿಪ್ಪೇಸ್ವಾಮಿ, ಶಕುಂತಲಾ ಗಂಜಿಹಾಳ, ಮಹಾಂತೇಶ ಅವಾರಿ, ಶಿವಾನಂದ ಕಂಠಿ ಉಪಸ್ಥಿತರಿದ್ದರು.
ಕೇಂದ್ರ ಸರ್ಕಾರ ಮನರೇಗಾ ಯೋಜನೆಯಲ್ಲಿ ಗಾಂಧೀಜಿ ಹೆಸರು ತೆಗೆದು ಹಾಕುವ ಮೂಲಕ ನೀಚ ರಾಜಕಾರಣ ಮಾಡುತ್ತಿದೆವಿಜಯಾನಂದ ಕಾಶಪ್ಪನವರ, ಶಾಸಕ, ಹುನಗುಂದ
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ
ಹುನಗುಂದ : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 11 ವರ್ಷಗಳಿಂದ ಆಡಳಿತ ನಡೆಸುತ್ತಿದ್ದು, ಈ ಅವಧಿಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ತೀರಾ ಕೆಳಮಟ್ಟಕ್ಕೆ ಹೋಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಎಸ್ ಟಿ ಜಾರಿಗೆ ತರುವುದನ್ನು ರಾಹುಲ್ ಗಾಂಧಿ ವಿರೋಧಿಸಿದರು. ಶೇ 80ರಷ್ಟು ಬಡವರು ಜಿ ಎಸ್ ಟಿ ಕಟ್ಟುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಆದಾನಿ, ಅಂಬಾನಿ ಆದಾಯ ಹೆಚ್ಚುತ್ತಿದೆ ಎಂದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬಡವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ. 600 ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಶಕ್ತಿ ಯೋಜನೆ ಅಡಿ ಪ್ರಯಾಣಿಸಿದ್ದಾರೆ. ಗೃಹಲಕ್ಷ್ಮಿ, ಯುವನಿಧಿ, ಗೃಹಜ್ಯೋತಿ, ಹಾಗೂ ಅನ್ನ ಭಾಗ್ಯ ಯೋಜನೆ ಸೇರಿದಂತೆ ಗ್ಯಾರಂಟಿ ಯೋಜನೆಗಳಿಗೆ ₹56 ಸಾವಿರ ದಿಂದ ₹60 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಇದರೊಂದಿಗೆ ₹80 ಸಾವಿರ ಕೋಟಿ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸುತ್ತದೆ. ಇದು ಅಭಿವೃದ್ಧಿ ಅಲ್ಲವೇ? ಎಂದು ಪ್ರಶ್ನಿಸಿದ ಅವರು ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ ಎಂದು ಆರೋಪ ಮಾಡುವ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.