ADVERTISEMENT

ಕಾಲಮಿತಿಯಲ್ಲಿ ಭೂಸ್ವಾಧೀನವಾಗಲಿ: ಸರನಾಯಕ

ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ಭರವಸೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 6:37 IST
Last Updated 21 ಸೆಪ್ಟೆಂಬರ್ 2025, 6:37 IST
ಅಜಯಕುಮಾರ ಸರನಾಯಕ
ಅಜಯಕುಮಾರ ಸರನಾಯಕ   

ಬಾಗಲಕೋಟೆ: ಯುಕೆಪಿ ಮೂರನೇ ಹಂತದ ಮುಳುಗಡೆ ಭೂಮಿಗೆ ಸರ್ಕಾರ ಸಮ್ಮತಿಯ ಬೆಲೆ ನಿಗದಿ ಮಾಡಿದೆ. ಭೂಸ್ವಾಧೀನವನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಯುಕೆಪಿ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಗೌರವಾಧ್ಯಕ್ಷ ಅಜಯಕುಮಾರ ಸರನಾಯಕ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯಿಂದ ನೀರಾವರಿಯ ಪ್ರತಿ ಎಕರೆಗೆ ₹50, ಒಣಬೇಸಾಯದ ಪ್ರತಿ ಎಕರೆಗೆ ₹40 ಲಕ್ಷ ನೀಡುವಂತೆ ಒತ್ತಾಯಿಸಲಾಗಿತ್ತು. ಸರ್ಕಾರ ರೈತರ, ಮುಖಂಡರ ಸಭೆಯಲ್ಲಿ ಚರ್ಚಿಸಿ, ನೀರಾವರಿಗೆ ₹40 ಲಕ್ಷ, ಒಣಬೇಸಾಯಕ್ಕೆ ₹30 ಲಕ್ಷ ನಿಗದಿ ಮಾಡಿದೆ ಎಂದರು.

ಮುಳುಗಡೆ ಭೂಮಿಯನ್ನು ಮೊದಲ ಆದ್ಯತೆ ಮೇಲೆ ತೆಗೆದುಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ನಂತರ ಪುನರ್‌ವಸತಿ ಹಾಗೂ ಕಾಲುವೆಗೆ ಬೇಕಾಗುವ ಭೂಮಿ ಸ್ವಾಧೀನ ಪಡಿಸಿಕೊಳ್ಳಲಿದೆ. ಇದಕ್ಕಾಗಿ ಶೀಘ್ರವೇ ಪ್ರಾಧಿಕಾರ ರಚನೆ ಮಾಡಲಿದೆ ಎಂದು ಹೇಳಿದರು.

ADVERTISEMENT

ಸಮಿತಿ ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ ಮಾತನಾಡಿ, ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ನೀರು ಹಂಚಿಕೆ ವಿಷಯದಲ್ಲಿ ಬಾಗಲಕೋಟೆ ಜಿಲ್ಲೆಗೆ ಹಿನ್ನಡೆಯಾಗಿದೆ. ಹೆಚ್ಚಿನ ಭೂಮಿ ಕಳೆದುಕೊಳ್ಳುವ ಬಾಗಲಕೋಟೆ ಜಿಲ್ಲೆಗೆ ನೀರು ಹಂಚಿಕೆಯಾಗಿಲ್ಲ ಎಂದು ದೂರಿದರು.

ವಿಜಯಪುರ ಜಿಲ್ಲೆಗೆ 80 ಟಿಎಂಸಿ ಅಡಿ ನೀರು ಹಂಚಿಕೆಯಾಗಿದ್ದರೆ, ಬಾಗಲಕೋಟೆ ಜಿಲ್ಲೆಗೆ 5 ಟಿಎಂಸಿ ಅಡಿಯಷ್ಟು ಮಾತ್ರ ಆಗಿದೆ. ಹೆಚ್ಚಿನ ನೀರು ನೀಡಬೇಕು ಎಂಬ ವಿಷಯವನ್ನು ಮುಖ್ಯಮಂತ್ರಿ ಮುಂದೆ ಪ್ರಸ್ತಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ನೀರಿಗೆ ಬೇಡಿಕೆ ಇಡಲಾಗುವುದು ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ ಮಾತನಾಡಿ, ಯುಕೆಪಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿತ್ತು. ಈಗ ಭೂಮಿಗೆ ಒಳ್ಳೆಯ ಬೆಲೆ ನಿಗದಿ ಮಾಡುವ ಮೂಲಕ ಮುಂದಡಿ ಇಟ್ಟಿದೆ. ಇದೇ ಅವಧಿಯಲ್ಲಿ ಅಗತ್ಯ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಯೋಜನೆ ಪೂರ್ಣಗೊಳಿಸಲು ಸರ್ಕಾರ ಮುಂದಾಗಿದೆ ಎಂದರು.

ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ, ಸಮಿತಿ ಸಂಚಾಲಕ ಪ್ರಕಾಶ ಅಂತರಗೊಂಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.