ಬಾಗಲಕೋಟೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಉಪನ್ಯಾಸಕರ ಕೊರತೆಯಿಂದಾಗಿ ಕಾಲೇಜು ಆರಂಭವಾಗಿ ಎರಡು ತಿಂಗಳಾದರೂ ವಿವಿಧ ವಿಷಯಗಳಲ್ಲಿ ಬೋಧನೆ ಆರಂಭವಾಗಿಲ್ಲ.
ಜಿಲ್ಲೆಯಲ್ಲಿ 18 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಸಾವಿರಾರು ವಿದ್ಯಾರ್ಥಿಗಳು ಈ ಕಾಲೇಜುಗಳಲ್ಲಿ ಓದುತ್ತಿದ್ದಾರೆ. ಹಲವಾರು ವರ್ಷಗಳಿಂದ ಈ ಕಾಲೇಜುಗಳ ವಿವಿಧ ವಿಷಯಗಳಿಗೆ ಉಪನ್ಯಾಸಕರ ನೇಮಕವಾಗಿಲ್ಲ. ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು, ಅವರಿಂದಲೇ ಬೋಧನೆ ಮಾಡಿಸಿಕೊಂಡು ಬಂದಿದೆ ಸರ್ಕಾರ.
ಅತಿಥಿ ಉಪನ್ಯಾಸಕರ ಅರ್ಹತೆಗೆ ಸಂಬಂಧಿಸಿದಂತೆ ನಡೆದಿರುವ ಹಗ್ಗಜಗ್ಗಾಟದಿಂದಾಗಿ ಕಾಲೇಜುಗಳು ಆರಂಭವಾಗಿ ಎರಡು ತಿಂಗಳಾದರೂ ನೇಮಕಾತಿಯಾಗಿಲ್ಲ. ಅತ್ತ ನೇಮಕಾತಿಗಾಗಿ ಅತಿಥಿ ಉಪನ್ಯಾಸಕ ಆಕಾಂಕ್ಷಿಗಳು ಕಾಯುತ್ತಿದ್ದರೆ, ಇತ್ತ ಪಾಠ ಕೇಳುವುದಕ್ಕಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ.
ಜಿಲ್ಲೆಯ ಬಹುತೇಕ ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇದೆ. ಅಂದಾಜು 500 ಅತಿಥಿ ಉಪನ್ಯಾಸಕರ ನೇಮಕ ಆಗಬೇಕಿದೆ. ಬೋಧನೆ ಇಲ್ಲದಿದ್ದರೂ ನಿತ್ಯ ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಬೇಕಿದೆ.
ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಬಿ.ಕಾಂ ವಿಭಾಗದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಬಿ.ಕಾಂ. ವಿಭಾಗಕ್ಕೆ ಸಂಬಂಧಿಸಿದ ಯಾವುದೇ ವಿಷಯಕ್ಕೂ ಕಾಯಂ ಉಪನ್ಯಾಸಕರಿಲ್ಲ. ಪೂರ್ತಿ ವಿಭಾಗವೇ ಅತಿಥಿ ಉಪನ್ಯಾಸಕರ ಬೋಧನೆ ಮೇಲೆ ನಡೆಯುತ್ತಿತ್ತು. ಈಗ ಅವರ ನೇಮಕವಾಗದ್ದರಿಂದ ಬೋಧನೆ ಮಾಡುವವರೇ ಇಲ್ಲದಂತಾಗಿದೆ.
ಇತಿಹಾಸ ವಿಷಯ ಆಯ್ಕೆ ಮಾಡಿಕೊಂಡ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇತಿಹಾಸ ಬೋಧನೆ ಮಾಡುವ ಒಬ್ಬರೇ ಒಬ್ಬರು ಕಾಯಂ ಶಿಕ್ಷಕರಿಲ್ಲ. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಅಲ್ಲಿ ವಾಣಿಜ್ಯ ಹಾಗೂ ಸಮಾಜ ವಿಜ್ಞಾನ ವಿಷಯ ಉಪನ್ಯಾಸಕರಿಲ್ಲ. ಇದು ಜಿಲ್ಲೆಯಲ್ಲಿನ ಬಹುತೇಕ ಕಾಲೇಜುಗಳ ಸ್ಥಿತಿಯಾಗಿದೆ.
‘ಉನ್ನತಿ ಫೌಂಡೇಷನ್ ಹಾಗೂ ಅತಿಥಿ ಉಪನ್ಯಾಸಕರ ನೆರವಿನಿಂದ ಬೋಧನೆ ಮಾಡಿಸಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ’ಗೀತಾಂಜಲಿ ಶ್ರೀನಿವಾಸರಾವ್, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.