ADVERTISEMENT

ಶ್ರೀಗಳು ಕಾವಿ ತೊರೆದು ಖಾದಿ ಹಾಕಿಕೊಳ್ಳಲಿ: ವಿಜಯಾನಂದ ಕಾಶಪ್ಪನವರ

ಸ್ವಾಮೀಜಿಗಳಿಗೆ ಬಿಜೆಪಿ ಟಿಕೆಟ್ ಕೊಟ್ಟು ಕಣಕ್ಕಿಳಿಸಲಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 16:15 IST
Last Updated 6 ಏಪ್ರಿಲ್ 2025, 16:15 IST
<div class="paragraphs"><p>ವಿಜಯಾನಂದ ಕಾಶಪ್ಪನವರ</p></div>

ವಿಜಯಾನಂದ ಕಾಶಪ್ಪನವರ

   

ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ‘ಸಮಾಜದಿಂದ ಸ್ವಾಮೀಜಿ ಇದ್ದಾರೆ, ಸ್ವಾಮೀಜಿಯಿಂದ ಸಮಾಜ ಇಲ್ಲ. ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬೇಕಿದ್ದರೆ ಸ್ವಾಮೀಜಿಯನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ಪಂಚಮಸಾಲಿ ಪೀಠ ಮಾಡಲಿ. ಶ್ರೀಗಳು ಕಾವಿ ತೊರೆದು ಖಾದಿ ಹಾಕ್ಕೊಂಡು ಯತ್ನಾಳ ಜೊತೆ ರಾಜಕಾರಣ ಮಾಡಲಿ’ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಆಕ್ರೋಶ ವ್ಯಕ್ತಪಡಿಸಿದರು.

ಕೂಡಲಸಂಗಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸ್ವಾಮೀಜಿಗಳು ಹೇಗಿದ್ದರೂ ರಾಜಕಾರಣಕ್ಕೆ ಬರುವ ತಯಾರಿಯಲ್ಲಿ ಇದ್ದಾರೆ. ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟು ಯಾವುದಾದರೂ ಕ್ಷೇತ್ರದಲ್ಲಿ ನಿಲ್ಲಿಸಲಿ’ ಎಂದು ಲೇವಡಿ ಮಾಡಿದರು. 

ADVERTISEMENT

‘ಸಮಾಜಕ್ಕೆ ಯತ್ನಾಳ ಕೊಡುಗೆ ಏನು? ಎರಡು ವರ್ಷದಿಂದ ಸಮಾಜ ಎನ್ನುವ ಈತ ಸಮಾಜಕ್ಕೆ ಯಾವ ಕೊಡುಗೆ ನೀಡಿಲ್ಲ. ಸಮಾಜದ ಬಗ್ಗೆ ಕೂಡಲಸಂಗಮ ಪೀಠದ ಬಗ್ಗೆ ಮಾತನಾಡುವ ನೈತಿಕ ಹಕ್ಕೇ ಈತನಿಗೆ ಇಲ್ಲ. ಇನ್ನೊಂದು ಪೀಠದವರು ಈತನನ್ನು ಒಳಗೆ ಕರೆದುಕೊಂಡೇ ಇಲ್ಲ. ಕೂಡಲಸಂಗಮ ಪೀಠದವನ್ನು ಆರಂಭಿಸಿದವರು ಪ್ರಭಣ್ಣ ಹುಣಸಿಕಟ್ಟಿ, ನೀಲಕಂಠ ಅಸೂಟಿ, ನಾನು. ಸ್ವಾಮೀಜಿಗಳಿಗೆ ಅನ್ನ, ಆಶ್ರಯ ಕಲ್ಪಿಸಿದವರು ನಾವು, ಯತ್ನಾಳ ಅಲ್ಲ. ಟ್ರಸ್ಟ್‌ಗೆ ಭೂಮಿ ಖರೀದಿಸುವಾಗ ಕಾನೂನಿನ ತೊಡಕುಗಳಿಂದ ಟ್ರಸ್ಟಿಗಳ ಹೆಸರಿನಲ್ಲಿ ಖರೀದಿಸಿದೆ. ಇದರಲ್ಲಿ ರಾಜಕಾರಣ ಮಾಡುವ ಕಾರ್ಯವನ್ನು ಯತ್ನಾಳ ಮಾಡುತ್ತಿದ್ದಾನೆ. ಸಮಾಜವನ್ನು ತನ್ನ ರಾಜಕಾರಣ, ಮತಗಳಿಕೆಯಾಗಿ ಮಾಡಿಕೊಳ್ಳುತ್ತಿದ್ದಾನೆ’ ಎಂದು ಯತ್ನಾಳ ವಿರುದ್ಧ ಏಕವಚನದಲ್ಲಿ ಹರಿಹಾಯ್ದರು.

‘ಎಲ್ಲರಿಗೂ ಕೊನೆ ಅಂತ ಇರುತ್ತೆ, ಹಾಗೆಯೇ ಯತ್ನಾಳಗೂ. ಸುನಾಮಿ ಬಂದಾಗ ಏನೆಲ್ಲ ಆಗುತ್ತೆ ಗೊತ್ತಲ್ಲ... ಹಾಗೇ ಸಮಾಜ ಕೂಡ ಬದಲಾವಣೆ ಬಯಸಿದಾಗ ಈ ಸ್ವಾಮೀಜಿ ಎಲ್ಲಿ ಇರುತ್ತಾರೆ ನೋಡ್ತಾ ಇರಿ. ಅದನ್ನು ಯಾರೂ ತಡೆಯಲು ಆಗಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.