ADVERTISEMENT

ಬಸವಜಯ ಮೃತ್ಯುಂಜಯ ಶ್ರೀ ಸಿದ್ದಾಂತ ಯಾವುದು?: ವಿಜಯಾನಂದ ಕಾಶಪ್ಪನವರ

ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಜಯಾನಂದ ಕಾಶಪ್ಪನವರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 3:08 IST
Last Updated 30 ಅಕ್ಟೋಬರ್ 2025, 3:08 IST
<div class="paragraphs"><p>ಕೂಡಲಸಂಗಮ ಪುನರ್ ವಸತಿ ಕೇಂದ್ರದ ಅಗಸಿಯ ಮುಂದೆ ಕಿತ್ತೂರ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಮಾಜಿ ಸಂಸದ ಸಂಗಣ್ಣ ಕರಡಿ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಎಂ.ಪಿ.ನಾಡಗೌಡ, ವಿಜಯಾನಂದ ಕಾಶಪ್ಪನವರ ಮುಂತಾದವರು ಪಾಲ್ಗೊಂಡಿದ್ದರು</p></div>

ಕೂಡಲಸಂಗಮ ಪುನರ್ ವಸತಿ ಕೇಂದ್ರದ ಅಗಸಿಯ ಮುಂದೆ ಕಿತ್ತೂರ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಮಾಜಿ ಸಂಸದ ಸಂಗಣ್ಣ ಕರಡಿ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಎಂ.ಪಿ.ನಾಡಗೌಡ, ವಿಜಯಾನಂದ ಕಾಶಪ್ಪನವರ ಮುಂತಾದವರು ಪಾಲ್ಗೊಂಡಿದ್ದರು

   

ಕೂಡಲಸಂಗಮ: ಒಂದು ವೇದಿಕೆಯಲ್ಲಿ ಲಿಂಗಾಯತ ಎಂದು, ಇನ್ನೊಂದು ವೇದಿಕೆಯಲ್ಲಿ ಹಿಂದೂ ಎಂದು ಹೇಳುವ ಬಸವಜಯಮೃತ್ಯುಂಜಯ ಸ್ವಾಮೀಜಿ ಯಾವ ಸಿದ್ದಾಂತದಲ್ಲಿ ಇದ್ದಾರೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟನ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಪ್ರಶ್ನೆ ಮಾಡಿದರು.

ಬುಧವಾರ ಕೂಡಲಸಂಗಮ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ ಹಾಗೂ ಹುನಗುಂದ, ಇಲಕಲ್ಲ ತಾಲ್ಲೂಕು ಆಡಳಿಯ ಸಹಯೋಗದಲ್ಲಿ ನಡೆದ ವೀರಮಾತೆ ಕಿತ್ತೂರು ರಾಣಿ ಚನ್ನಮ್ಮನವರ 247ನೇ ಜಯಂತೋತ್ಸವ, 201ನೇ ವಿಜಯೋತ್ಸವ, ವಿದ್ಯಾರ್ಥಿ ನಿಲಯ, ಕಲ್ಯಾಣ ಮಂಟಪ ಅಡಿಗಲ್ಲು, ದಾಸೋಹ ಪ್ರಾರಂಭೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ADVERTISEMENT

‘ಬಸವತತ್ವದ ಅಡಿಯಲ್ಲಿಯೇ ಪಂಚಮಸಾಲಿ ಸಮಾಜ ನಡೆಯಬೇಕು ಎಂಬ ಉದ್ದೇಶದಿಂದ ಈ ಟ್ರಸ್ಟ್‌, ಪೀಠ ಸ್ಥಾಪನೆಯಾಗಿದ್ದು. ನನಗೆ ಓರ್ವ ಮಾಜಿ ಸಚಿವರು ಬಸವಣ್ಣನ ಹಿಂದೆ ಹೋದರೆ ಒಂಟಿಯಾಗುತ್ತಿಯಾ ಎಂದು ಹೇಳಿದರು. ನನ್ನ ಉಸಿರು ಇರುವವರೆಗೆ, ನಾನು ಒಟ್ಟಿಯಾದರೂ ಸರಿ ಬಸವಣ್ಣನ ಸಿದ್ದಾಂತ, ತತ್ವದಲ್ಲಿಯೇ ಬದುಕುತ್ತೇನೆ. ಇಲ್ಲಿಯವರೆಗೂ ಎಲ್ಲವನ್ನೂ ನೋಡಿ ಈ ನಿರ್ಧಾರ ಮಾಡಿದ್ದೇನೆ. ನನಗೆ ಯಾವ ಗುರುವಿನ ಆಶೀರ್ವಾದ ಬೇಡ, ನನಗೆ ಬಸವಣ್ಣನೇ ಗುರು’ ಎಂದರು.

‘ಬೆಳಿಗ್ಗೆ ಜನರು ಕಾರ್ಯಕ್ರಮಕ್ಕೆ ಬರದಂತೆ ತಡೆಯುವ ಕಾರ್ಯವನ್ನು ಕೆಲವರು ಮಾಡಿದರು, ಮುಂದಿನ ದಿನದಲ್ಲಿ ಅವರಿಗೆ ತಕ್ಕ ಉತ್ತರ ಕೊಡುತ್ತೇನೆ. ಸಮಾಜದ ಹಣವನ್ನು ಯಾರು ಎಷ್ಟು ಕದ್ದಿದ್ದಾರೆ. ಎಲ್ಲಿ ಮನೆ ಮಾಡಿದ್ದಾರೆ, ಎಲ್ಲಿ ಎಲ್ಲಿ ಶಿಕ್ಷಣ ಸಂಸ್ಥೆ ಮಾಡಿದ್ದಾರೆ ಎಂಬುದನ್ನು ಮುಂದಿನ ದಿನದಲ್ಲಿ ಸಾಕ್ಷಿ ಸಮೇತ ಸಮಾಜದ ಮುಂದೆ ಇಡುತ್ತೇನೆ’ ಎಂದರು.

‘ಇಂದಿನಿಂದ ಟ್ರಸ್ಟನಲ್ಲಿ ದಾಸೋಹ ಆರಂಭಗೊಂಡಿದೆ. ವಿದ್ಯಾರ್ಥಿ ನಿಲಯ, ಕಲ್ಯಾಣ ಮಂಟಪ ನಿರ್ಮಾಣ ಕಾಮಗಾರಿ ಒಂದು ವರ್ಷದಲ್ಲಿ ಮುಗಿಯುವುದು, ಮುಂದಿನ ವರ್ಷದಿಂದ ಎಲ್ಲ ಸಮುದಾಯದ ಬಡ ಮಕ್ಕಳಿಗೆ ವಸತಿ ನಿಲಯ ಆರಂಭಗೊಳ್ಳುವುದು’ ಎಂದರು.

ಕೊಪ್ಪಳ ಮಾಜಿ ಲೋಕಸಭಾ ಸದಸ್ಯ ಸಂಗಣ್ಣ ಕರಡಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ವೇದಿಕೆಯ ಮೇಲಿನ ಎಲ್ಲ ಮುಖಂಡರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಎಲ್ಲ ಲಿಂಗಾಯತರನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವಂತೆ ರಾಜ್ಯ ಸರ್ಕಾರದಿಂದ  ಶಿಫಾರಸ್ಸು ಮಾಡಿಸುವ ಕಾರ್ಯ ಮಾಡಬೇಕು. ಇದರಿಂದ ಎಲ್ಲ ಸಮುದಾಯದ ಮಕ್ಕಳಿಗೆ ಅನುಕೂಲವಾಗುವುದು. ವಿಜಯಾನಂದ ಕಾಶಪ್ಪನವರ ಅಹಂ ಬಿಡಬೇಕು, ಎಲ್ಲ ಹಿರಿಯರಿಗೆ ಗೌರವ ಕೊಡುವ ಗುಣ ಬೆಳೆಸಿಕೊಳ್ಳಬೇಕು’ ಎಂದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ ಮಾತನಾಡಿದರು.

ಸಮಾರಂಭದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟನ ಗೌರವ ಅಧ್ಯಕ್ಷ ಪ್ರಭಣ್ಣ ಹುಣಸಿಕಟ್ಟಿ, ಮಾಜಿ ವಿಧಾನ ಪರಿಷತ್ತ ಸದಸ್ಯ ಎಂ.ಪಿ.ನಾಡಗೌಡ, ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಹಿರಿಯ ಮುಖಂಡ ಜಿ.ಜಿ.ಪಾಟೀಲ, ರಾಜಶೇಖರ ಮೆಣಸಿನಕಾಯಿ, ಎಂ.ಎಸ್.ಮಲ್ಲಾಪೂರ, ವೆಂಕಟೇಶ ಸಾಕಾ ಮುಂತಾದವರು ಇದ್ದರು. ಎಸ್.ಕೆ.ಕೊನೆಸಾಗರ ಸ್ವಾಗತಿಸಿದರು, ಎನ್.ಪಿ.ನಾಡಗೌಡ ವಂದಿಸಿದರು.

ಸಮಾರಂಭಕ್ಕೂ ಮೊದಲು ವಿದ್ಯಾರ್ಥಿ ನಿಲಯ, ಕಲ್ಯಾಣ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿದರು. ಸಮಾರಂಭದಲ್ಲಿ ಕಿತ್ತೂರ ರಾಣಿ ಚನ್ನಮ್ಮ, ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿದರು.

ಮೂರ್ತಿ ಅನಾವರಣ: ಸಮಾರಂಭಕ್ಕೆ ಪೂರ್ವದಲ್ಲಿ ಕೂಡಲಸಂಗಮ ಪುನರ್ ವಸತಿ ಕೇಂದ್ರದ ಅಗಸಿಯ ಮುಂದೆ ಕಿತ್ತೂರ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ಮೂರ್ತಿಯ ಅನಾವರಣವನ್ನು ಮಾಜಿ ಲೋಕಸಭಾ ಸದಸ್ಯ ಸಂಗಣ್ಣ ಕರಡಿ, ವಿಧಾನ ಪರಿಷತ್ತ ಸದಸ್ಯ ಎಂ.ಪಿ.ನಾಡಗೌಡ, ವಿಜಯಾನಂದ ಕಾಶಪ್ಪನವರ ಮಾಡಿದರು. ನಂತರ ಕೂಡಲಸಂಗಮ ಪುನರ್ ವಸತಿ ಕೇಂದ್ರದಿಂದ ಲಿಂಗಾಯತ ಪಂಚಮಸಾಲಿ ಪೀಠದವರೆಗೆ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ 2 ಕಿ.ಮೀ ವರೆಗೆ ವಿವಿಧ ಕಲಾ ತಂಡಗಳ ಮೂಲಕ ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ಭಾವಚಿತ್ರ ಮೆರವಣಿಗೆ ನಡೆಯಿತು.

ಇಂದಿನಿಂದ ಟ್ರಸ್ಟ್‌ನಲ್ಲಿ ದಾಸೋಹ ಆರಂಭಗೊಂಡಿದೆ. ವಿದ್ಯಾರ್ಥಿ ನಿಲಯ, ಕಲ್ಯಾಣ ಮಂಟಪ ನಿರ್ಮಾಣ ಕಾಮಗಾರಿ ಒಂದು ವರ್ಷದಲ್ಲಿ ಮುಗಿಯಲಿದೆ
ವಿಜಯಾನಂದ ಕಾಶಪ್ಪನವರ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.