ADVERTISEMENT

ಬಾಗಲಕೋಟೆ: ಮದ್ಯ ಪಡೆಯಲು ಸುರಕ್ಷಿತ ಅಂತರ ಕಡ್ಡಾಯ

ಜಿಲ್ಲೆಯ 136 ಮದ್ಯದಂಗಡಿಗಳಲ್ಲಿ ಇಂದಿನಿಂದ ಮಾರಾಟ: ಅಬಕಾರಿ ಡಿಸಿ ಅರುಣ್‌ಕುಮಾರ

​ಪ್ರಜಾವಾಣಿ ವಾರ್ತೆ
Published 3 ಮೇ 2020, 16:18 IST
Last Updated 3 ಮೇ 2020, 16:18 IST
ಬಾಗಲಕೋಟೆಯ ನವನಗರದಲ್ಲಿ ಬಾರ್ ಎದುರು ಬ್ಯಾರಿಕೇಡ್ ಹಾಕುವ ಕಾರ್ಯ ಭಾನುವಾರ ಭರದಿಂದ ನಡೆದಿತ್ತು
ಬಾಗಲಕೋಟೆಯ ನವನಗರದಲ್ಲಿ ಬಾರ್ ಎದುರು ಬ್ಯಾರಿಕೇಡ್ ಹಾಕುವ ಕಾರ್ಯ ಭಾನುವಾರ ಭರದಿಂದ ನಡೆದಿತ್ತು   

ಬಾಗಲಕೋಟೆ:ಜಿಲ್ಲೆಯಲ್ಲಿ 36 ಎಂಎಸ್‌ಐಎಲ್ ಮಳಿಗೆಗಳು ಸೇರಿದಂತೆ 136 ಮದ್ಯದಂಗಡಿಗಳ ಮೂಲಕ ಮೇ 4ರಿಂದ ಮದ್ಯ ಮಾರಾಟ ಆರಂಭವಾಗಲಿದೆ. ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತ ಅರುಣ್‌ಕುಮಾರ ತಿಳಿಸಿದ್ದಾರೆ.

ಈ ಬಗ್ಗೆ ’ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ಮದ್ಯ ಖರೀದಿಗೆ ಆಧಾರ್ ಕಾರ್ಡ್ ತೋರಿಸುವ ಅಗತ್ಯವಿಲ್ಲ. ಒಬ್ಬರಿಗೆ ಒಂದೇ ಬಾಟಲಿ ಎಂಬ ನಿಯಮವೇನೂ ಇಲ್ಲ. ವಾರಕ್ಕೆ ಮೂರು ದಿನ ಮಾತ್ರ ಮಾರಾಟ ಎಂಬ ನಿಯಮವಿಲ್ಲ. ಎಲ್ಲ ದಿನವೂ ಲಭ್ಯ ಎಂದು ಸ್ಪಷ್ಟಪಡಿಸಿದರು.

ಬಾರ್‌ಗಳಲ್ಲಿ ಇನ್ನೂ ಒಂದು ವಾರಕ್ಕೆ ಆಗುವಷ್ಟು ಮದ್ಯ ದಾಸ್ತಾನು ಇರುತ್ತದೆ. ಜೊತೆಗೆ ಕೆಎಸ್‌ಬಿಎಸ್‌ಎಲ್‌ ಉಗ್ರಾಣ, ಡಿಸ್ಟಿಲರಿಗಳಲ್ಲೂ ದಾಸ್ತಾನು ಹಾಗೆಯೇ ಉಳಿದಿದೆ. ಹೀಗಾಗಿ ಮದ್ಯದ ಕೊರತೆ ಇಲ್ಲ. ಪ್ರತಿ ಗ್ರಾಹಕನಿಗೆ ನಿಯಮಾವಳಿಯಂತೆ 2.5 ಲೀಟರ್‌ನಷ್ಟು ಮದ್ಯ ಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ADVERTISEMENT

ಕೆಲವರು ಪರಿಸ್ಥಿತಿ ದುರುಪಯೋಗಪಡಿಸಿಕೊಂಡು ವದಂತಿಗಳನ್ನು ಹರಡಿಸಿ ಎಂಆರ್‌ಪಿಗಿಂತ ಹೆಚ್ಚಿನ ಹಣಕ್ಕೆ ಇಲ್ಲವೇ ಕಾಳಸಂತೆಯಲ್ಲಿ ಮದ್ಯ ಮಾರಾಟ ಮಾಡಿದಲ್ಲಿ ಸಹಿಸುವುದಿಲ್ಲ. ದಾಸ್ತಾನು ಕೊರತೆ ಇರುವ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡುವುದಿಲ್ಲ. ನೂಕು–ನುಗ್ಗಲಿಗೆ ಅವಕಾಶವಿಲ್ಲ ಎಂದು ಹೇಳಿದರು.

ಮದ್ಯ ಮಾರಾಟದ ವೇಳೆ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಎಲ್ಲ ಬಾರ್‌ಗಳ ಎದುರು ಭಾನುವಾರವೇ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ವೃತ್ತಗಳನ್ನು ರಚಿಸಿ ಅದರೊಳಗೆ ಸಾಲಾಗಿ ಸಾಗಿ ಬರಲು ಅವಕಾಶ ಕಲ್ಪಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.