ADVERTISEMENT

ಬಾಗಲಕೋಟೆ | ಮಕ್ಕಳಿಗೆ ವಾಟ್ಸ್ಆ್ಯಪ್ ಪಾಠ

ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರದಿಂದ ಬೇಸಿಗೆ ಶಿಬಿರ ಆಯೋಜನೆ

ವೆಂಕಟೇಶ್ ಜಿ.ಎಚ್
Published 23 ಏಪ್ರಿಲ್ 2020, 19:30 IST
Last Updated 23 ಏಪ್ರಿಲ್ 2020, 19:30 IST
ಬಾಗಲಕೋಟೆಯ ನವನಗರದ ಕೋರ್ ವಿಜ್ಞಾನ ಕೇಂದ್ರದ ಬೇಸಿಗೆ ಶಿಬಿರದಲ್ಲಿ ಮಕ್ಕಳಿಂದ ಕಲಿಕೆ..
ಬಾಗಲಕೋಟೆಯ ನವನಗರದ ಕೋರ್ ವಿಜ್ಞಾನ ಕೇಂದ್ರದ ಬೇಸಿಗೆ ಶಿಬಿರದಲ್ಲಿ ಮಕ್ಕಳಿಂದ ಕಲಿಕೆ..   

ಬಾಗಲಕೋಟೆ: ಪ್ರತಿ ವರ್ಷ ಬೇಸಿಗೆಯಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ವಿಜ್ಞಾನ ಶಿಬಿರ ಆಯೋಜಿಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತಿದ್ದ ಇಲ್ಲಿನ ನವನಗರದ ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರ ಈ ಬಾರಿ ಲಾಕ್‌ಡೌನ್ ಕಾರಣ ತುಸು ಭಿನ್ನವಾಗಿಯೇ ಮಕ್ಕಳನ್ನು ತಲುಪುತ್ತಿದೆ.

ಸಮಗ್ರ ಶಿಕ್ಷಣ-ಕರ್ನಾಟಕ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಯುತ್ತಿರುವ ಈ ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರವು ಏಪ್ರಿಲ್ 2ರಿಂದ ಉಚಿತ ಬೇಸಿಗೆ ಶಿಬಿರ ಆರಂಭಿಸಿದೆ. ಮಕ್ಕಳನ್ನು ತಲುಪಲು ಡಿಜಿಟಲ್ ತಂತ್ರಜ್ಞಾನದ ನೆರವು ಪಡೆದಿದೆ.

ಚಟುವಟಿಕೆ ಹೇಗೆ?: ಮಕ್ಕಳ ಹಾಗೂ ಪಾಲಕರ ಮೊಬೈಲ್ ಸಂಖ್ಯೆ ಸಂಗ್ರಹಿಸಿ ವಾಟ್ಸ್ಆ್ಯಪ್ ಗ್ರೂಪ್ ರಚಿಸಿ ಅದರ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂವಹನ ಸಾಧಿಸಲಾಗಿದೆ. ಮಕ್ಕಳು ಮನೆಯಲ್ಲಿಯೇ ಕುಳಿತು ವಿಜ್ಞಾನದ ಪ್ರಾಯೋಗಿಕ ಚಟುವಟಿಕೆಗಳು ವಿಜ್ಞಾನ,
ಗಣಿತದ ಕಡಿಮೆ ವೆಚ್ಚದ ಮಾದರಿ ತಯಾರಿಕೆ, ಪೇಪರ್ ಕಟಿಂಗ್, ಮೋಜಿನ ವಿಜ್ಞಾನ ಹಾಗೂ ಓರಿಗಾಮಿ, ಕಿರಿಗಾಮಿ ಚಟುವಟಿಕೆಯ ವಿಡಿಯೊಗಳನ್ನು ವಾಟ್ಸ್‌ಆ್ಯಪ್ ಗುಂಪಿಗೆ ನಿತ್ಯ ಕಳುಹಿಸಲಾಗುತ್ತಿದೆ.

ADVERTISEMENT

ವಿಡಿಯೊಗಳ ವೀಕ್ಷಣೆ ಮಾಡುವ ಮಕ್ಕಳು ಆ ಚಟುವಟಿಕೆಗಳನ್ನು ತಾವೂ ಮನೆಯಲ್ಲಿ ಪಾಲಕರ ನೆರವಿನಿಂದ ಪ್ರಾಯೋಗಿಕವಾಗಿ ಮಾಡುವರು. ಹೀಗೆ ಸಿದ್ಧಪಡಿಸಿದ ಮಾದರಿ ಮತ್ತು ಪೇಪರ್ ಕ್ರಾಫ್ಟ್‌, ಛಾಯಾಚಿತ್ರಗಳನ್ನು ಮತ್ತೆ ಗ್ರೂಪ್‌ಗೆ ಹಾಕುವರು. ಹೀಗೆ ಮಕ್ಕಳಲ್ಲಿ ವಿಜ್ಞಾನ ವಿಷಯದೆಡೆಗೆ ಆಸಕ್ತಿ, ಪ್ರಶ್ನಾರ್ಥಕ ಮನೋಭಾವ ಹಾಗೂ ಸೃಜನಶೀಲತೆ ಬೆಳೆಸಲಾಗುತ್ತಿದೆ.

ಮೂರು ವಾಟ್ಸ್‌ಆ್ಯಪ್ ಗುಂಪು: ಬಾಗಲಕೋಟೆ ತಾಲ್ಲೂಕಿನ 145 ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಿಗೆ ಒಂದು ಗುಂಪು, ಬಾದಾಮಿ ಮತ್ತು ಬೀಳಗಿ ತಾಲ್ಲೂಕಿನ 125 ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳು ಹಾಗೂಬಿ.ವಿ.ವಿ.ಎಸ್ ಬಿ.ಇಡಿ ಕಾಲೇಜಿನ 68 ವಿದ್ಯಾರ್ಥಿಗಳಿಗೆ ತಲಾ ಒಂದೊಂದು ಸೇರಿ ಮೂರುವಾಟ್ಸ್‌ಆ್ಯಪ್ ಗುಂಪುಗಳನ್ನು ರಚಿಸಲಾಗಿದೆ.

ಆಸಕ್ತ ವಿದ್ಯಾರ್ಥಿ ಹಾಗೂ ಶಿಕ್ಷಕರು ತಮ್ಮ ಹೆಸರು, ಶಾಲೆಯ ಹೆಸರು ಹಾಗೂ ತರಗತಿ ವಿವರವನ್ನುವಾಟ್ಸ್ಆ್ಯಪ್ ಸಂಖ್ಯೆ: 7795771883/9902375790 ಗೆ ಸಂಪರ್ಕಿಸಿ ಉಚಿತವಾಗಿ ದಾಖಲಾತಿ ಮಾಡಿಸಬಹುದಾಗಿದೆ.

*
ಮಕ್ಕಳು ಹಾಗೂ ಶಿಕ್ಷಕರು ಮನೆಯಲ್ಲಿಯೇ ಕುಳಿತು ಈ ಡಿಜಿಟಲ್ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡು, ಇದರ ಉಪಯೋಗ ಪಡೆದುಕೊಳ್ಳಬೇಕು.
-ಸಂತೋಷಕುಮಾರ ಬೆಳಮಕರ್, ಕೋರ್ ವಿಜ್ಞಾನ ಚಟುವಟಿಕೆಕೇಂದ್ರದ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.