ಜಮಖಂಡಿ (ಬಾಗಲಕೋಟೆ): ‘ಮಂಡ್ಯ ದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಮಾಡಿದ ವೆಚ್ಚವೂ ಸೇರಿ ಲೋಕಾಯುಕ್ತದಿಂದ ತನಿಖೆ ಮಾಡಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹಿಸಿದ್ದು, ಈ ಕುರಿತು ಕಾರ್ಯಕಾರಿಣಿ ಸರ್ವಾನುಮತದಿಂದ ತೀರ್ಮಾನಿಸಿದೆ.
ಜಮಖಂಡಿಯ ಅನ್ನಪೂರ್ಣೇಶ್ವರ ಹೋಟೆಲ್ ಸಭಾಂಗಣದಲ್ಲಿ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ.
‘ಮಂಡ್ಯದ ಸಮ್ಮೇಳನಕ್ಕೆ ಸರ್ಕಾರ ದಿಂದ ಅಲ್ಲಿನ ಜಿಲ್ಲಾಡಳಿತಕ್ಕೆ ಬಿಡುಗಡೆ ಯಾದ ₹30 ಕೋಟಿ ಅನುದಾನದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ₹2.5 ಕೋಟಿ ಮಾತ್ರ ಪಡೆದಿದೆ. ವೇದಿಕೆ, ಆಹಾರದಿಂದ ಹಿಡಿದು ಪೊರಕೆ ಖರೀದಿಯವರೆಗೆ ಹಣ ದುರ್ಬಳಕೆಯಾದ ಬಗ್ಗೆ ಆರೋಪಗಳಿವೆ. ಪರಿಷತ್ತು ತನ್ನ ಸ್ವಚ್ಚ ಆಡಳಿತ, ರುಜುತ್ವ ಮತ್ತು ಪಾರದರ್ಶಕತೆ ಸಾಬೀತು ಮಾಡಲು ತನಿಖೆಗೆ ಕೋರಲು ನಿರ್ಧರಿಸಿದೆ’ ಎಂದು ಪರಿಷತ್ತಿನ ಮಾಧ್ಯಮ ಸಂಚಾಲಕ ಎನ್.ಎಸ್. ಶ್ರೀಧರ ಮೂರ್ತಿ ತಿಳಿಸಿದ್ದಾರೆ.
‘ಪ್ರೊ.ಜಯಪ್ರಕಾಶ ಗೌಡ, ಮೀರಾ ಶಿವಲಿಂಗಯ್ಯ, ಕೆ.ಟಿ.ಶ್ರೀಕಂಠೇಗೌಡ ಮತ್ತಿತರರು ವಿವಿಧ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಸರ್ಕಾರದಿಂದ ಅನುದಾನ ಪಡೆಯುತ್ತಿದ್ದಾರೆ. ಅವರ ಸಂಸ್ಥೆಗಳ ಮೇಲೆ ಕೂಡ ಹಣಕಾಸು ದುರ್ಬಳಕೆ, ಆಡಳಿತದಲ್ಲಿ ಅಕ್ರಮ, ಸ್ವಜನ ಪಕ್ಷಪಾತದಂತಹ ಗಂಭೀರ ಆರೋಪ ಗಳಿವೆ. ಅವರೂ ಪರಿಷತ್ತಿನಂತೆ ಸ್ವಯಂ ಪ್ರೇರಣೆಯಿಂದ ಲೋಕಾಯುಕ್ತ ತನಿಖೆಗೆ ಒಳಪಟ್ಟು ಸ್ವಚ್ಛರಾಗಿ ಹೊರಬರುವ ಮೂಲಕ ಮಾದರಿಯಾಗುತ್ತಾರೆ ಎಂದು ಕಾರ್ಯಕಾರಿಣಿ ಅಪೇಕ್ಷಿಸಿದೆ’ ಎಂದಿದ್ದಾರೆ.
ಪರಿಷತ್ತಿನ ಬಗ್ಗೆ ನಿರಂತರ ಅಪಾದನೆ ಮಾಡುವವರಲ್ಲಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ಕೂಡ ಸೇರಿದ್ದಾರೆ. ಈಗ ಅವರ ಮೇಲೆ ಅವರ ಪದಾಧಿಕಾರಿ ಗಳೇ ಸರ್ವಾಧಿಕಾರ, ಆರ್ಥಿಕ ಅಶಿಸ್ತಿನಂತಹ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಕಾರಣದಿಂದ ಲೇಖಕಿಯರ ಸಂಘದ ಅವ್ಯವಹಾರ ಕುರಿತೂ ಸಂಘ ಸಂಸ್ಥೆಗಳ ನಿಬಂಧಕರು, ಕಸಾಪದಂತೆ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದ್ದಾರೆ.
‘ಪರಿಷತ್ತಿನ ವಿರುದ್ಧ ನಿರಂತರ ಆರ್ಥಿಕ ಅಶಿಸ್ತಿನ ಅಪಾದನೆ ಮಾಡಿ ಆಡಳಿತಾಧಿಕಾರಿ ನೇಮಕಕ್ಕೆ ಒತ್ತಾಯಿಸುತ್ತಿರುವವರಲ್ಲಿ ವಸುಂಧರಾ ಭೂಪತಿ, ಪುಷ್ಪ ಅವರ ಪತಿ ಆರ್.ಜಿ. ಹಳ್ಳಿ ನಾಗರಾಜ್, ಲೇಖಕಿಯರ ಸಂಘದ ಮಂಡ್ಯ ಜಿಲ್ಲಾ ಪ್ರತಿನಿಧಿ ಮೀರಾ ಶಿವಲಿಂಗಯ್ಯ, ಎನ್.ಹನುಮೇಗೌಡ, ಬಿ. ಜಯಪ್ರಕಾಶ ಗೌಡ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ, ಸಿ.ಕೆ.ರಾಮೇಗೌಡ ಮತ್ತಿತರರು ಇದ್ದಾರೆ. ಇವರೆಲ್ಲರೂ ಲೇಖಕಿಯರ ಸಂಘದ ಆರ್ಥಿಕ ಅವ್ಯವಹಾರಗಳ ತನಿಖೆಗೆ ಸರ್ಕಾರವನ್ನು ಒತ್ತಾಯಿಸಿ ಕನ್ನಡದ ಮೇಲಿನ ಬದ್ಧತೆ, ನಿಷ್ಪಕ್ಷಪಾತವನ್ನು ಸಾಬೀತು ಪಡಿಸಬೇಕು’ ಎಂದಿದ್ದಾರೆ.
‘ಪರಿಷತ್ತಿನ ಕುರಿತು ಅತೃಪ್ತರು, ಅಸಂತುಷ್ಟರು, ನಿರಂತರವಾಗಿ ನಡೆಸುತ್ತಿರುವ ಅಪಪ್ರಚಾರ ಮತ್ತು ಪರಿಷತ್ತಿನ ಆಡಳಿತದಲ್ಲಿ ಹಿಂಬಾಗಿಲ ಪ್ರವೇಶದ ಪ್ರಯತ್ನಗಳನ್ನು ಕಾನೂನು ಮೂಲಕ ಎದುರಿಸಲು ನಿರ್ಧರಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.