ಮಹಾಲಿಂಗಪುರ: ಕಾಲು ಕೆರೆದು ಮುನ್ನುಗ್ಗಿ ಪರಸ್ಪರ ಮುಖಾಮುಖಿ ಡಿಚ್ಚಿ ಹೊಡೆಯುತ್ತಿರುವ ಟಗರುಗಳು, ದೂಳಿನ ಅಬ್ಬರದಲ್ಲಿ ಟಗರುಗಳನ್ನು ನಿಯಂತ್ರಿಸುವ ಮಾಲೀಕರು, ಕೇಕೆ ಹೊಡೆಯುವ ಜನ, ಶಿಳ್ಳೆ, ಚಪ್ಪಾಳೆ ತಟ್ಟುತ್ತಾ ಹುರಿದುಂಬಿಸುವ ಝಲಕ್..
ಪಟ್ಟಣದ ಕರಿಸಿದ್ಧೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಕರಿಸಿದ್ಧೇಶ್ವರ ಹಾಗೂ ಭರಮಲಿಂಗೇಶ್ವರ ಜಾತ್ರೆ ಅಂಗವಾಗಿ ಮಾರುತೇಶ್ವರ ದೇವಸ್ಥಾನದ ಹತ್ತಿರ ಶನಿವಾರ ತಡರಾತ್ರಿ ಆಯೋಜಿಸಿದ್ದ ಟಗರಿನ ಕಾಳಗ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯಗಳಿವು.
ಎರಡು ಮತ್ತು ನಾಲ್ಕು ಹಲ್ಲಿನ ವಿಭಾಗದಲ್ಲಿ ನಡೆದ ಕಾಳಗದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ 30ಕ್ಕೂ ಹೆಚ್ಚು ಟಗರುಗಳು ಪಾಲ್ಗೊಂಡಿದ್ದವು. ಟಗರುಗಳು ಒಂದಕ್ಕೊಂದು ಗುದ್ದುವುದರ ಮೂಲಕ ಕಾಳಗ ನಡೆಸಿ ಜನರಲ್ಲಿ ರೋಮಾಂಚನ ಮೂಡಿಸಿದವು. ಟಗರು ಕಾಳಗ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿತ್ತು.
ಎರಡು ಹಲ್ಲಿನ ವಿಭಾಗದಲ್ಲಿ ಪ್ರಥಮ ಕೆಸರಗೊಪ್ಪ, ದ್ವಿತೀಯ ಒಂಟಗೋಡಿ, ತೃತೀಯ ತಿಮ್ಮಾಪುರ, ಚತುರ್ಥ ಅರಳಿಮಟ್ಟಿ ಗ್ರಾಮದ ಟಗರುಗಳು ಹಾಗೂ ನಾಲ್ಕು ಹಲ್ಲಿನ ವಿಭಾಗದಲ್ಲಿ ಪ್ರಥಮ ಮೂರು ಸ್ಥಾನ ರನ್ನಬೆಳಗಲಿ ಹಾಗೂ ಚತುರ್ಥ ಮದಭಾಂವಿ ಗ್ರಾಮದ ಟಗರುಗಳು ಸ್ಥಾನ ಪಡೆದವು.
ವಿಜೇತ ಟಗರುಗಳ ಮಾಲೀಕರಿಗೆ ಪ್ರಥಮ ಸ್ಥಾನಕ್ಕೆ ಸೈಕಲ್, ದ್ವಿತೀಯ ಸ್ಥಾನಕ್ಕೆ ಕೂಲರ್, ತೃತೀಯ ಸ್ಥಾನಕ್ಕೆ ಫ್ಯಾನ್ ಹಾಗೂ ಚತುರ್ಥ ಸ್ಥಾನಕ್ಕೆ ಡಾಲ್ ಬಹುಮಾನವಾಗಿ ನೀಡಲಾಯಿತು. ಗಣಿಯ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಚಿನ್ಮಯಾನಂದ ಸ್ವಾಮೀಜಿ ಸ್ಪರ್ಧೆಗೆ ಚಾಲನೆ ನೀಡಿದರು. ಮುಖಂಡರಾದ ಮಹಾಲಿಂಗಪ್ಪ ಜಕ್ಕನ್ನವರ, ಸತ್ಯಪ್ಪ ಹುದ್ದಾರ, ಶ್ರೀಶೈಲ ಅವಟಿ, ಮುತ್ತಪ್ಪ ದಿವಾಣ, ಸುನೀಲ ಮೇಟಿ, ಬಲವಂತಗೌಡ ಪಾಟೀಲ, ಮುಸ್ತಾಕ ಚಿಕ್ಕೋಡಿ, ಮಹಾಲಿಂಗ ಮಾಳಿ, ಶಿವಲಿಂಗ ಟಿರಕಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.