ADVERTISEMENT

ಮಹಾಲಿಂಗಪುರ | ಅನುದಾನ ಬಿಡುಗಡೆ ಮಾಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 6:49 IST
Last Updated 18 ಜನವರಿ 2026, 6:49 IST
ಮಹಾಲಿಂಗಪುರದಲ್ಲಿ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ರಾಜ್ಯ ನೇಕಾರ ಸೇವಾ ಸಂಘದ ವತಿಯಿಂದ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು
ಮಹಾಲಿಂಗಪುರದಲ್ಲಿ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ರಾಜ್ಯ ನೇಕಾರ ಸೇವಾ ಸಂಘದ ವತಿಯಿಂದ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು   

ಮಹಾಲಿಂಗಪುರ: ಬಜೆಟ್‍ನಲ್ಲಿ ನೇಕಾರರಿಗೆ ಶಾಶ್ವತ ಪರಿಹಾರಕ್ಕಾಗಿ ಸರ್ಕಾರದ ಮಟ್ಟದಲ್ಲಿ ಸಭೆ ನಡೆಸಿ ಕೈಮಗ್ಗ ಮತ್ತು ಜವಳಿ ಅಭಿವೃದ್ಧಿ ಇಲಾಖೆಗೆ ₹ 1500 ಕೋಟಿ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ರಾಜ್ಯ ನೇಕಾರ ಸೇವಾ ಸಂಘದ ವತಿಯಿಂದ ಪಟ್ಟಣದ ಪುರಸಭೆ ಮುಖ್ಯಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, ‘ಇಲಾಖೆಯಲ್ಲಿ ಖಾಲಿ ಇರುವ 55 ಹುದ್ದೆಗಳನ್ನು ಭರ್ತಿ ಮಾಡಿ ರಾಜ್ಯದ ಕಟ್ಟಕಡೆಯ ವೃತ್ತಿಪರ ನೇಕಾರರಿಗೆ ಸೇವೆಯನ್ನು ಒದಗಿಸಬೇಕು ಹಾಗೂ ಹಕ್ಕೊತ್ತಾಯಗಳನ್ನು ಈಡೇರಿಕೆ ಮಾಡಬೇಕೆಂದು ಒತ್ತಾಯಿಸಿ ಜ.19 ರಿಂದ ಬೆಂಗಳೂರಿನ ಕೈಮಗ್ಗ ಮತ್ತು ಜವಳಿ ಅಭಿವೃದ್ಧಿ ಆಯುಕ್ತರ ಕಚೇರಿ ಎದುರು ಅನಿರ್ದಿಷ್ಟ ಧರಣಿಯನ್ನು ಹಮ್ಮಿಕೊಂಡಿದ್ದೇವೆ. ಇದಕ್ಕೆ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟಕ್ಕೆ ಸಿದ್ಧತೆ ಮಾಡಲಾಗುವುದು’ ಎಂದು ಎಚ್ಚರಿಸಿದರು.

‘ವೃತ್ತಿಪರ ನೇಕಾರರಿಗೆ ಕಟ್ಟಡ ಕಾರ್ಮಿಕ ಮಾದರಿಯ ಕಾರ್ಮಿಕ ಸೌಲಭ್ಯ ಒದಗಿಸುವುದು, 55 ವರ್ಷ ವಯಸ್ಸಿನ ಮೇಲ್ಪಟ್ಟ ನೇಕಾರರಿಗೆ ಮಾಸಿಕ ಕನಿಷ್ಟ ₹ 5 ಸಾವಿರ ಮಾಸಾಶನ ಜಾರಿ ಮಾಡುವುದು ಸೇರಿದಂತೆ ನೇಕಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಚರ್ಚಿಸಲು ತಮಗೆ ಅವಕಾಶ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಮುಖ್ಯಾಧಿಕಾರಿ ಪರವಾಗಿ ವ್ಯವಸ್ಥಾಪಕ ಎಸ್.ಎನ್.ಪಾಟೀಲ ಮನವಿ ಸ್ವೀಕರಿಸಿದರು. ರಾಜೇಂದ್ರ ಮಿರ್ಜಿ, ರಮೇಶ ನಾಗರಾಳ, ಮಹಾಲಿಂಗಪ್ಪ ನಂದಿಕೋಲ, ಬಸವರಾಜ ಅಮ್ಮಣಗಿ, ಜಯವಂತ ಮೂಡಲಗಿ, ರಾಘವೇಂದ್ರ ಬೆಳಗಲಿ ಇದ್ದರು.