ADVERTISEMENT

ಮಲಪ್ರಭಾ ಪ್ರವಾಹಕ್ಕೆ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಮಣ್ಣು ಕುಸಿತ, ಸಂಚಾರ ಬಂದ್

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 6:00 IST
Last Updated 23 ಆಗಸ್ಟ್ 2020, 6:00 IST
ಭೂಕುಸಿತದಿಂದಾಗಿ ರಸ್ತೆಯಲ್ಲಿ ಸಿಲುಕಿಕೊಂಡ ಲಾರಿಗಳು
ಭೂಕುಸಿತದಿಂದಾಗಿ ರಸ್ತೆಯಲ್ಲಿ ಸಿಲುಕಿಕೊಂಡ ಲಾರಿಗಳು    

ಬಾಗಲಕೋಟೆ: ಮಲಪ್ರಭಾ ನದಿ ಪ್ರವಾಹದಿಂದ ಬಾಧಿತವಾಗಿದ್ದ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಮಣ್ಣು ಕುಸಿದು ಭಾನುವಾರ ಮುಂಜಾನೆ ಎರಡು ಲಾರಿಗಳು ಸಿಲುಕಿಕೊಂಡಿವೆ. ಇದರಿಂದ ಹೆದ್ದಾರಿಯಲ್ಲಿ ಭಾರಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ಕಾರು, ಟಂಟಂ, ಬೈಕ್ ನಂತಹ ಲಘು ವಾಹನಗಳು ಮಾತ್ರ ಓಡಾಟ ನಡೆಸಿವೆ.

ಮಲಪ್ರಭಾ ನದಿ ನೆರೆಯಿಂದ ಆವೃತವಾಗಿದ್ದ ಹೆದ್ದಾರಿಯಲ್ಲಿ ಕಳೆದ ಮಂಗಳವಾರ ನಸುಕಿನಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಎರಡು ದಿನಗಳ ನಂತರ ನೆರೆ ಇಳಿದಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿತ್ತು. ಶನಿವಾರದಿಂದ ಮತ್ತೆ ಸಂಚಾರ ಆರಂಭವಾಗಿತ್ತು.

ADVERTISEMENT

ಗ್ರಾಮಸ್ಥರ ಆಕ್ರೋಶ: ಗದಗ ಜಿಲ್ಲೆಯ ಕೊಣ್ಣೂರು ಹಾಗೂ ಬಾದಾಮಿ ತಾಲ್ಲೂಕಿನ ಗೋವನಕೊಪ್ಪ ನಡುವಿನ ರಾಷ್ಟ್ರೀಯ ಹೆದ್ದಾರಿ ಹಳೆಯ ಸೇತುವೆ ಪದೇ ಪದೇ ಮುಳುಗಡೆಯಾಗುತ್ತಿದ್ದ ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ₹37 ಕೋಟಿ ವೆಚ್ಚದಲ್ಲಿ 2017ರಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಿದೆ. ಅವೈಜ್ಞಾನಿಕ ಕಾಮಗಾರಿ ಪರಿಣಾಮ ಸೇತುವೆಯಿಂದ ಸಂಚಾರ ಸಮಸ್ಯೆ ಪರಿಹಾರವಾಗುವ ಬದಲಿಗೆ ಉಲ್ಬಣಗೊಂಡಿದೆ. ಪ್ರವಾಹದ ನೀರು ಕೊಣ್ಣೂರು ಗ್ರಾಮದೊಳಗೆ ನುಗ್ಗಿ ಹಾವಳಿ ಮಾಡುತ್ತಿದೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಹೊಸ ಸೇತುವೆಯನ್ನು ಗ್ರಾಮದ ಹಳೆಯ ಬಸ್ ನಿಲ್ದಾಣದವರೆಗೂ ವಿಸ್ತರಿಸಲು ಆಗ್ರಹಿಸಿ ಶನಿವಾರ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.