ADVERTISEMENT

ಬಾಗಲಕೋಟೆ: ವಿದ್ಯಾರ್ಥಿನಿಯರಿಗೆ ಗಣಿತ ಕಿಟ್ ಕಾಣಿಕೆ

ಮನೆ ಮನೆಗೆ ತೆರಳಿ ಧೈರ್ಯ ತುಂಬುವ ಅಪರೂಪದ ಶಿಕ್ಷಕ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 7:27 IST
Last Updated 1 ಜನವರಿ 2026, 7:27 IST
ತೇರದಾಳದ ಜೆವಿ ಮಂಡಳದ ಎಸ್.ಜೆ ಪ್ರೌಢಶಾಲೆಯ ಶಿಕ್ಷಕ ನೇಮಿನಾಥ ಜಮಖಂಡಿ ಎಸ್ಎಸ್ಎಲ್ಸಿ ವಿದ್ಯಾಥರ್ಿಗಳ ಮನೆಗಳಿಗೆ ತೆರಳಿ ಅವರಿಂದ ಆರತಿ ಬೆಳಗಿಸಿಕೊಂಡು ಕಾಣಿಕೆ ರೂಪದಲ್ಲಿ ಗಣಿತ ಪಾಸಿಂಗ್ ಪ್ಯಾಕೇಜ್ ಕಿಟ್ ನೀಡಿದರು.
ತೇರದಾಳದ ಜೆವಿ ಮಂಡಳದ ಎಸ್.ಜೆ ಪ್ರೌಢಶಾಲೆಯ ಶಿಕ್ಷಕ ನೇಮಿನಾಥ ಜಮಖಂಡಿ ಎಸ್ಎಸ್ಎಲ್ಸಿ ವಿದ್ಯಾಥರ್ಿಗಳ ಮನೆಗಳಿಗೆ ತೆರಳಿ ಅವರಿಂದ ಆರತಿ ಬೆಳಗಿಸಿಕೊಂಡು ಕಾಣಿಕೆ ರೂಪದಲ್ಲಿ ಗಣಿತ ಪಾಸಿಂಗ್ ಪ್ಯಾಕೇಜ್ ಕಿಟ್ ನೀಡಿದರು.   

ತೇರದಾಳ: ಎಸ್ಎಸ್ಎಲ್‌ಸಿ ಪರೀಕ್ಷೆ ದಿನಾಂಕ ನಿಗದಿಯಾಗಿದ್ದು, ಪ್ರತಿ ಪ್ರೌಢಶಾಲೆಯಲ್ಲೂ ಪರೀಕ್ಷಾ ತಯಾರಿ ಭರದಿಂದ ಸಾಗಿದೆ. ಇನ್ನು ಸರಣಿ ಪರೀಕ್ಷೆಗಳು ಸಾಲುಗಟ್ಟಿ ತಯಾರಾಗಿವೆ. ಇದರ ಮಧ್ಯೆ ಹಲವು ಪ್ರೌಢಶಾಲೆಗಳ ಶಿಕ್ಷಕರು ತಂಡೋಪತಂಡವಾಗಿ ವಿದ್ಯಾರ್ಥಿಗಳ ಮನೆಗೆ ಭೇಟಿ ಮಾಡಿ ವಿದ್ಯಾರ್ಥಿಗಳ ಪರೀಕ್ಷಾ ತಯಾರಿ ಗಮನಿಸುತ್ತಿದ್ದಾರೆ. ಇವೆಲ್ಲದರ ನಡುವೆ ಇಲ್ಲಿನ ಶಿಕ್ಷಕರೊಬ್ಬರು ವಿದ್ಯಾರ್ಥಿನಿಯರ ಮನೆಗೆ ಭೇಟಿ ನೀಡಿ ಅವರಿಗೆ ಉಚಿತವಾಗಿ ಗಣಿತ ವಿಷಯದ ಪಾಸಿಂಗ್ ಪ್ಯಾಕೇಜ್, ಸ್ಕೋರಿಂಗ್ ಪ್ಯಾಕೇಜ್‌ಗಳನ್ನು ಕಿಟ್ ರೂಪದಲ್ಲಿ ನೀಡುತ್ತಿದ್ದಾರೆ.

ಪಟ್ಟಣದ ಜೆವಿ ಮಂಡಳದ ಅನುದಾನಿತ ಎಸ್.ಜೆ ವಿದ್ಯಾಲಯದ ಗಣಿತ ಶಿಕ್ಷಕ ನೇಮಿನಾಥ ಜಮಖಂಡಿ ಈ ನೂತನ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಗಣಿತ ವಿಷಯ ಕೆಲವು ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿರುತ್ತದೆ. ಅಂತಹ ವಿದ್ಯಾರ್ಥಿಗಳಿಗೆ ಪಾಸಿಂಗ್ ಪ್ಯಾಕೇಜ್, ಉಳಿದವರಿಗೆ ಸ್ಕೋರಿಂಗ್ ಪ್ಯಾಕೇಜ್ ಹಾಗೂ ಗಣಿತ ಪರಿಕರಗಳನ್ನೊಳಗೊಂಡ ಕಿಟ್ ಮಾಡಿಕೊಂಡು ವಿದ್ಯಾರ್ಥಿಗಳ ಮನೆಗೆ ತೆರಳಿ ವಿತರಿಸುತ್ತಿದ್ದಾರೆ.

ವಿದ್ಯಾರ್ಥಿಯರ ಮನೆಗೆ ಹೋದಾಗ ಅವರು ಶಿಕ್ಷಕರಿಗೆ ಆರತಿ ಬೆಳಗಿ ಸ್ವಾಗತಿಸುತ್ತಾರೆ. ಆರತಿ ಬೆಳಗಿದಾಗ ಅದರಲ್ಲಿ ಕಾಣಿಕೆ ಹಾಕುವುದು ಸಂಪ್ರದಾಯ. ಕಾಣಿಕೆ ಬದಲಾಗಿ ಈ ಕಿಟ್ ಇಟ್ಟು ಅವರಿಗೆ ಹರಸುವ ಮೂಲಕ ಆಲ್ ದಿ ಬೆಸ್ಟ್ ಹೇಳುತ್ತ ಮುಂದಿನ ವಿದ್ಯಾರ್ಥಿ ಮನೆಗೆ ಹೊರಡುತ್ತಾರೆ. ಹೀಗೆ ಶನಿವಾರ ಹಾಗೂ ಭಾನುವಾರ 17 ವಿದ್ಯಾರ್ಥಿಗಳಿಗೆ ಕಿಟ್‌ ನೀಡಿದ್ದಾರೆ. 140-150 ವಿದ್ಯಾರ್ಥಿಗಳಿಗೆ ಈ ಕಿಟ್ ಕೊಡುವ ಯೋಜನೆ ಹಾಕಿಕೊಂಡಿದ್ದಾರೆ.

ADVERTISEMENT

ಇದರಲ್ಲಿ ಇವರು ಬೋಧಿಸುತ್ತಿರುವ ಶಾಲೆಯ ವಿದ್ಯಾರ್ಥಿಗಳು ಮಾತ್ರವಲ್ಲದೆ ಪಟ್ಟಣದ ಇತರೆ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆಂಬುದು ಮತ್ತೊಂದು ವಿಶೇಷ. ವಿದ್ಯಾರ್ಥಿನಿಯರು ಆರತಿ ಬೆಳಗಿ ಕಿಟ್ಟು ಪಡೆದು ಹಬ್ಬಕ್ಕೆ ಅಣ್ಣ ಬಂದನೆಂಬ ಭಾವದಿಂದ ಓದಲು ಸಿದ್ದರಾಗುವರು, ವಿದ್ಯಾರ್ಥಿಗಳು ತಮ್ಮ ಮನೆಗೆ ಸ್ವಾಗತಿಸಿ ಕಿಟ್ ಪಡೆಯುತ್ತಾರೆ. ಮಕ್ಕಳ ಮನೆಯಲ್ಲಿ ಅರ್ಧ ಗಂಟೆಯಷ್ಟು ಸಮಯವನ್ನು ಅವರು ಹೇಗೆ ಓದಬೇಕು, ಪರೀಕ್ಷೆ ಎದುರಿಸುವ ರೀತಿ ಬಗ್ಗೆ ಧೈರ್ಯ ನೀಡಿ ಮರಳಲಾಗುತ್ತದೆ. ಇದರಿಂದ ಪಾಲಕರಿಗೂ ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮತ್ತಷ್ಟು ಕಾಳಜಿ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ಪಾಲಕರು ಸಹಕರಿಸುತ್ತಿದ್ದಾರೆ ಎನ್ನುತ್ತಾರೆ ಶಿಕ್ಷಕರು.

ಈ ಗಣಿತ ಕಿಟ್ಟಿನಲ್ಲಿ ಇಲಾಖೆ ವೆಬ್‌ಸೈಟ್‌ನಲ್ಲಿ ಅಪಲೋಡ್ ಮಾಡಲಾದ ಪಾಸಿಂಗ್ ಪ್ಯಾಕೇಜ್, ನಾಡಿನ ಹೆಸರಾಂತ ಗಣಿತ ಸಂಪನ್ಮೂಲ ವ್ಯಕ್ತಿಗಳು ಸಿದ್ದಪಡಿಸಿದ ನೋಟ್ಸ್ ಹಾಗೂ ಗಣಿತ ಪರಿಕರಗಳು ಇವೆ. ಇಲಾಖೆ ವೆಬ್‌ಸೈಟ್‌ನಿಂದ ಮುದ್ರಣ ಮಾಡಿಸಿಕೊಳ್ಳಲು ಕೆಲವರಿಗೆ ಸಾಧ್ಯವಾಗದಿರಬಹುದು ಅದನ್ನು ಮುದ್ರಿಸಿ, ಉಚಿತವಾಗಿ ಕೊಡಲಾಗುತ್ತಿದೆ.

‘ಇನ್ನೇನು ಸರಣಿ ಪರೀಕ್ಷೆಗಳು ಆರಂಭವಾಗಲಿವೆ. ಪರೀಕ್ಷಾ ಭಯ ಮಾತ್ರ ಕಡಿಮೆಯಾಗಿರಲಿಲ್ಲ. ಅದರಲ್ಲೂ ಗಣಿತ ಸ್ವಲ್ಪ ಕಷ್ಟವಾಗಿತ್ತು. ಜಮಖಂಡಿ ಸರ್ ನಮ್ಮ ಮನೆಗೆ ಬಂದು ಪಾಸಿಂಗ್ ಪ್ಯಾಕೇಜ್ ನೀಡಿ ಧೈರ್ಯ ತುಂಬಿದ್ದಾರೆ. ಇದರಿಂದ ಓದುವ ಬಗ್ಗೆ ಮತ್ತಷ್ಟು ಆಸಕ್ತಿ ಮೂಡಿದೆ. ಈ ಕಿಟ್ ಪಡೆದ ನಾವು ಉತ್ತಮ ಅಂಕಗಳನ್ನು ಪಡೆಯುವ ವಿಶ್ವಾಸ ಇದೆ’ ಎನ್ನುತ್ತಾರೆ ವಿದ್ಯಾರ್ಥಿನಿಯರಾದ ಪೂರ್ಣಿಮಾ ರೋಡಕರ, ಪ್ರೀತಿ ಮಾಸ್ತಿ ಹಾಗೂ ಸಹನಾ ರೋಡಕರ.

ಬೋಧನೆ ಹಾಗೂ ವಿದ್ಯಾರ್ಥಿಗಳ ಜೊತೆಯಲ್ಲಿಯೇ ಹೆಚ್ಚಿನ ಸಮಯ ವ್ಯಯಿಸುವ ನೇಮಿನಾಥ ಜಮಖಂಡಿ ಅವರನ್ನು ಶಿಕ್ಷಣ ಇಲಾಖೆ ಕಳೆದ ಬಾರಿಯ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.