ಬಾಗಲಕೋಟೆ: ’ಸಿದ್ದರಾಮಯ್ಯ ಅವರಿಗೆ ಬಾದಾಮಿಯಲ್ಲಿ ಗೆಲ್ಲುವುದೇ ಅಜೆಂಡಾ ಆಗಿತ್ತೇ ಹೊರತು ಕ್ಷೇತ್ರದಅಭಿವೃದ್ಧಿಯ ಬಗ್ಗೆ ಯಾವುದೇ ಕಾಳಜಿ ಇಲ್ಲ. ಹಾಗಾಗಿ ಇಲ್ಲಿನ ಜನ ತಿಂಗಳಿಗೊಮ್ಮೆ ಅವರನ್ನು ನೋಡುವಂತಾಗಿದೆ’ ಎಂದು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಟೀಕಿಸಿದರು.
ಗುಳೇದಗುಡ್ಡದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಸಿದ್ದರಾಮಯ್ಯ ಬಾದಾಮಿಗೆ ಕಾಟಾಚಾರಕ್ಕೆ ಬಂದು ಹೋಗುತ್ತಿದ್ದಾರೆ. ಶಾಸಕರಿಲ್ಲದೇ ತಾಲ್ಲೂಕಿನಲ್ಲಿ ಸರ್ಕಾರಿ ಯಂತ್ರ ಸಂಪೂರ್ಣ ಸ್ತಬ್ಧವಾಗಿದೆ. ರೈತಾಪಿ ವರ್ಗಕ್ಕೆ ಸರಿಯಾಗಿ ಸವಲತ್ತು ಸಿಗುತ್ತಿಲ್ಲ. ನೇಕಾರರು ಸಂಕಷ್ಟದಲ್ಲಿದ್ದಾರೆ. ಅವರ ಈ ನಿರ್ಲಕ್ಷ್ಯಕ್ಕೆ ಬಾದಾಮಿ ಕ್ಷೇತ್ರದ ಜನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ’ ಎಂದರು.
’ಶಾಸಕರು ಕೆಲವೇ ಮಂದಿಗೆ ಮಾತ್ರ ಲಭ್ಯರಾಗುತ್ತಿದ್ದಾರೆ. ಮಳೆ–ಬೆಳೆ ಇಲ್ಲದೇ ಬಾದಾಮಿ ತಾಲ್ಲೂಕಿನಲ್ಲಿ ಬರದ ಛಾಯೆ ಆವರಿಸಿದೆ. ಇಂತಹ ಸಂದರ್ಭದಲ್ಲಿ ಅವರು ಸ್ಥಳೀಯರ ನೆರವಿಗೆ ನಿಲ್ಲುತ್ತಿಲ್ಲ’ ಎಂದು ಆರೋಪಿಸಿದ ಶ್ರೀರಾಮುಲು, ’ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿನ ಜನ ವಿಶೇಷ ಪ್ರೀತಿ ತೋರಿದ್ದಾರೆ. ಹಾಗಾಗಿ ಗದುಗಿನ ರೀತಿಯೇ ಬಾದಾಮಿಯೊಂದಿಗೆ ವಿಶೇಷ ಸಂಬಂಧ ಉಳಿಸಿಕೊಳ್ಳುವೆ’ ಎಂದರು.
ರೋಡ್ ಷೋ: ಮುಂಜಾನೆ ಬನಶಂಕರಿಯ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದ ಶ್ರೀರಾಮುಲು, ನೇರವಾಗಿ ಗುಳೇದಗುಡ್ಡಕ್ಕೆ ಬಂದು ಪುರಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಬಿರು ಮಳೆಯ ನಡುವೆಯೇ ರೋಡ್ ಷೋ ನಡೆಸಿದ ಅವರು, ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ನೋಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಈ ವೇಳೆ ಮಾಜಿ ಶಾಸಕರಾದ ಎಂ.ಕೆ.ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತರ, ಮಲ್ಲಿಕಾರ್ಜುನ ಬನ್ನಿ, ಮುಖಂಡ ಮಹಾಂತೇಶ ಮಮದಾಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.