
ರಬಕವಿ ಬನಹಟ್ಟಿ: ‘ಅಭಿವೃದ್ಧಿ ಕಾರ್ಯಗಳಲ್ಲಿ ಯಾವುದೇ ರಾಜಕೀಯ ಬೇಡ. ಎಲ್ಲರೂ ಜೊತೆಗೂಡಿ ಕೆಲಸ ಮಾಡೋಣ. ರಾಜಕಾರಣಕ್ಕಿಂತ ಕಾರ್ಯ ಮುಖ್ಯ. ಮಹೀಷವಾಡಗಿ ಸೇತುವೆ ಕಾಮಗಾರಿಯನ್ನು ಮುಂದಿನ ಡಿಸೆಂಬರ್ ಒಳಗಾಗಿ ಮುಕ್ತಾಯಗೊಳಿಸಲು ಎಲ್ಲರೂ ಜವಾಬ್ದಾರಿಯುತವಾಗಿ ಕಾರ್ಯ ಮಾಡೋಣ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ತಿಳಿಸಿದರು.
ರಬಕವಿ ಶಂಕರಲಿಂಗ ದೇವಸ್ಥಾನದಲ್ಲಿ ಶನಿವಾರ ಮುಂಭಾಗದಲ್ಲಿ ಐದು ದಿನಗಳಿಂದ ಮಹೀಷವಾಡಗಿ ಸೇತುವೆ ಕಾಮಗಾರಿಯ ಅಂಗವಾಗಿ ಡಾ.ರವಿ ಜಮಖಂಡಿ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ರಬಕವಿ ಬನಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮದ ಮುಖಂಡರು ಸೇತುವೆ ಕಾಮಗಾರಿಗೆ ಸಂಬಂಧಪಟ್ಟಂತೆ ಏಳು ಮನವಿಗಳನ್ನು ಮಾಡಿಕೊಂಡಿದ್ದಾರೆ. ಎಲ್ಲವುಗಳನ್ನು ಹಂತ ಹಂತವಾಗಿ ಮುಕ್ತಾಯಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಮಹೀಷವಾಡಗಿ ಗ್ರಾಮಸ್ಥರ ರೈತರ ಮುಳುಗಡೆಗೆ ಸಂಬಂಧಪಟ್ಟಂತೆ ಮೂರು ದಿನಗಳ ಒಳಗಾಗಿ ಪರಿಹಾರ ನೀಡಲಾಗುವುದು ಮತ್ತು ಮದನಮಟ್ಟಿ ಗ್ರಾಮದ ರೈತರ ಭೂಸ್ವಾಧೀನದ ಪರಿಹಾರವನ್ನು ಹದಿನೈದು ದಿನಗಳ ಒಳಗಾಗಿ ಮುಕ್ತಾಯಗೊಳಿಸಲಾಗುವುದು. ರೈತರು ಕೂಡಾ ಅಭಿವೃದ್ಧಿ ಕಾರ್ಯಗಳ ಸಂದರ್ಭದಲ್ಲಿ ಸಹಕಾರ ನೀಡಬೇಕು ಎಂದರು.
ಮಹೀಷವಾಡಗಿ ಸೇತುವೆ ಕಾಮಗಾರಿ ಕುರಿತು ಅಥಣಿ ಶಾಸಕ ಲಕ್ಷಣ ಸವದಿ ಮತ್ತು ತೇರದಾಳ ಶಾಸಕ ಸಿದ್ದು ಸವದಿ ಮೂವರು ಕುಳಿತುಕೊಂಡು ಚರ್ಚೆ ಮಾಡಿಕೊಂಡು ಆದಷ್ಟು ಬೇಗನೆ ಸೇತುವೆ ಕಾಮಗಾರಿಯನ್ನು ಮುಕ್ತಾಯಗೊಳಿಸಲು ಪ್ರಯತ್ನಿಸುತ್ತೇವೆ ಎಂದರು.
ಉಪವಾಸ ಸತ್ಯಾಗ್ರಹದಿಂದ ಡಾ.ಜಮಖಂಡಿ, ಡಾ.ನಾಡಗೌಡಪಾಟೀಲ, ಮಹಾದೇವ ಬಾಪೂರೆ, ಶಂಕರ ಸೋರಗಾವಿ, ಸಂಜಯ ಅಮ್ಮಣಗಿಮಠ, ಸಂಜಯ ಜೋತಾವರ ಮತ್ತು ಅವರನ್ನು ಬೆಂಬಲಿಸಿದ ಎಲ್ಲರೂ ಸರ್ಕಾರ ಮತ್ತು ಅಧಿಕಾರಿಗಳ ಕಣ್ಣು ತೆರೆಸುವ ಕಾರ್ಯವನ್ನು ಮಾಡಿದ್ದೀರಿ.
ಸ‍್ಥಳದಲ್ಲಿದ್ದ ಅಧಿಕಾರಿಗಳಿಗೆ ಶೀಘ್ರವೇ ಕಾರ್ಯವನ್ನು ಆರಂಭಿಸುವಂತೆ ಮತ್ತು ಹೆಚ್ಚುವರಿ ಅನುದಾನಕ್ಕೂ ಪ್ರಸ್ತಾವನೆಯನ್ನು ಸಲ್ಲಿಸಲು ಸಚಿವ ಆರ್.ಬಿ. ತಿಮ್ಮಾಪುರ ತಿಳಿಸಿದರು.
ಸಚಿವ ತಿಮ್ಮಾಪುರ ಸತ್ಯಾಗ್ರಹಿಗಳಿಗೆ ಎಳೆನೀರು ಕುಡಿಸುವುದರ ಮೂಲಕ ಸತ್ಯಾಗ್ರಹವನ್ನು ಕೊನೆಗೊಳಿಸಿದರು.
ಶಾಸಕ ಸಿದ್ದು ಸವದಿ ಮಾತನಾಡಿ, ಏಳು ಸಮಸ್ಯೆಗಳ ಕುರಿತು ಸಚಿವರ ಜೊತೆಗೆ ಚರ್ಚೆ ಮಾಡಲಾಗಿದೆ. ಎಲ್ಲವನ್ನು ನೀಡುವುದಾಗಿ ತಿಳಿಸಿದ್ದಾರೆ ಎಂದರು.
ಡಾ.ಮಹಾವೀರ ದಾನಿಗೊಂಡ, ನೀಲಕಂಠ ಮುತ್ತೂರ, ರಾಮಣ್ಣ ಹುಲಕುಂದ, ಸಂಜಯ ತೆಗ್ಗಿ, ನೀಲಕಂಠ ಮುತ್ತೂರ, ಆನಂದ ಕಂಪು, ಗೌರಿ ಮಿಳ್ಳಿ, ರೇಣುಕಾ ಮಡ್ಡಿಮನಿ ಮಾತನಾಡಿದರು.
ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್, ರಬಕವಿ ಬನಹಟ್ಟಿ ತಹಶೀಲ್ದಾರ್ ಗಿರೀಶ ಸ್ವಾದಿ, ಡಾ. ಪೂರ್ಣಿಮಾ ಜಮಖಂಡಿ, ಧರೆಪ್ಪ ಉಳ್ಳಾಗಡ್ಡಿ, ಜಗಾನನ ತೆಗ್ಗಿ, ಮಲ್ಲಿಕಾರ್ಜುನ ನಾಶಿ, ಸಿದ್ದನಗೌಡ ಪಾಟೀಲ, ಸಂಗಯ್ಯ ಅಮ್ಮಣಗಿಮಠ, ಶ್ರೀಶೈಲ ಗೊಂಬಿ, ಸಿದ್ರಾಮ ಸವದತ್ತಿ, ಶ್ರೀಮಂತ ಕಾನಗೊಂಡ ಸೇರಿದಂತೆ ರಬಕವಿ ಬನಹಟ್ಟಿ ರಾಂಪುರ, ಹೊಸೂರ, ಮದನಮಟ್ಟಿ, ಹಳಿಂಗಳಿ, ತಮದಡ್ಡಿ, ಮಹೀಷವಾಡಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.