ಮುಧೋಳ: ‘ಅತಿಯಾದ ಮಳೆಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ನಮ್ಮ ಸರ್ಕಾರ ಸಶಕ್ತವಾಗಿದೆ. ಯಾರೂ ಭಯಪಡಬೇಕಾದ ಅಗತ್ಯ ಇಲ್ಲ’ ಎಂದು ಜಿಲ್ಲಾ ಉಸ್ತವಾರಿ ಸಚಿವ ಆರ್.ಬಿ ತಿಮ್ಮಾಪುರ ಹೇಳಿದರು.
ತಾಲ್ಲೂಕಿನ ಪ್ರವಾಹಪೀಡಿತ ಗ್ರಾಮಗಳಾದ ಜಾಲಿಬೇರಿ, ಉತ್ತೂರ, ಚನ್ನಾಳ, ರಂಜನಗಿ,ಒಂಟಗೋಡಿ, ಮಿರ್ಜಿ ಮಲ್ಲಾಪುರ ಗ್ರಾಮಗಳಿಗೆ ಶನಿವಾರ ಭೇಟಿ ಪರಿಶೀಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಘಟಪ್ರಭಾ ನದಿ ಪ್ರವಾಹದಿಂದಾಗಿ ತಾಲ್ಲೂಕಿನ ಮಿರ್ಜಿ ಗ್ರಾಮದ 12 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ನದಿಗೆ ಇನ್ನೂ 26 ಸಾವಿರ ಕ್ಯುಸೆಕ್ ನೀರು ಬಿಟ್ಟಿರುವುದರಿಂದ ನದಿಯ ಮಟ್ಟ ಹೆಚ್ಚಾಗಲಿದೆ. ಗ್ರಾಮಸ್ಥರು ಜಾಗೃತರಾಗಿಬೇಕು. ಜಮಖಂಡಿ ತಾಲ್ಲೂಕಿನ ಮುತ್ತೂರು, ಮೈಗೂರ ನಡುಗಡ್ಡೆಯಾಗಿದ್ದು ಅಲ್ಲಿನ ಕುಟುಂಬಗಳನ್ನು ಸ್ಥಳಾಂತರಿಸುವ ಕೆಲಸ ನಡೆದಿದೆ’ ಎಂದರು.
‘ಅಧಿಕಾರಿಗಳು ಈಗಾಗಲೇ ಎರಡು ಬಾರಿ ಪ್ರವಾಹ ಉಲ್ಬಣಿಸಬಹುದಾದ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಅಧಿಕಾರಿಗಳಿಗೆ ಬೇಕಾದ ಎಲ್ಲ ರೀತಿಯ ಸೌಲಭ್ಯ ಹಾಗೂ ಸಹಕಾರ ನೀಡಲಾಗುತ್ತಿದೆ’ ಎಂದರು.
‘ಕೆಲ ಗ್ರಾಮಗಳಲ್ಲಿ ಶಾಶ್ವತ ಪರಿಹಾರದ ಕೂಗು ಕೇಳಿಬಂದಿದೆ. ಆದರೆ ಸ್ಥಳಾಂತರಕ್ಕೆ ಭೂಮಿ ಸಿಗುತ್ತಿಲ್ಲ. ಹಿಂದಿನ ಸರ್ಕಾರ ಏನು ಮಾಡಿದೆ ಎಂಬುದು ಈಗ ಅಪ್ರಸ್ತುತ. ಇದೀಗ ನಮ್ಮ ಗಮನ ಪ್ರವಾಹದಿಂದ ಸಂಕಷ್ಟಕ್ಕೊಳಗಾದವರಿಗೆ ಸಹಾಯ ಮಾಡುವುದು. ಅ ಕಾರ್ಯದಲ್ಲಿ ನಿರತರಾಗಿದ್ದೇವೆ’ ಎಂದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಮತ್ತು ಪ್ರವಾಹ ಪರಿಹಾರ ನೀಡುತ್ತಿಲ್ಲ. ದೇಶದ ಪ್ರಧಾನಿ ಆದವರಿಗೆ ಮಾತೃ ಹೃದಯ ಇರಬೇಕು. ಪಕ್ಷದ ಧೋರಣೆಗೆ ಅಂಟಿಕೊಳ್ಳುವುದನ್ನು ಬಿಟ್ಟು ದೇಶಕ್ಕೆ ಆದ್ಯತೆ ನೀಡಬೇಕು’ ಎಂದು ಟೀಕಿಸಿದರು.
ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.