ADVERTISEMENT

ಮುಧೋಳ | ವಚನಗಳು ಉತ್ಕೃಷ್ಟ ಸಾಹಿತ್ಯ: ಸಂಗಮೇಶ ಮಾಟೊಳ್ಳಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 7:12 IST
Last Updated 19 ಜನವರಿ 2026, 7:12 IST
ಮುಧೋಳದಲ್ಲಿ ಭಾನುವಾರ ನಡೆದ ವಚನ ಸಾಹಿತ್ಯ ಸಮ್ಮೇಳನದ ಅಂಗವಾಗಿ ವಚನ ಕಟ್ಟುಗಳ ಮೆರವಣಿಗೆ ನಡೆಯಿತು
ಮುಧೋಳದಲ್ಲಿ ಭಾನುವಾರ ನಡೆದ ವಚನ ಸಾಹಿತ್ಯ ಸಮ್ಮೇಳನದ ಅಂಗವಾಗಿ ವಚನ ಕಟ್ಟುಗಳ ಮೆರವಣಿಗೆ ನಡೆಯಿತು   

ಮುಧೋಳ: ಕನ್ನಡ ಸಾರಸ್ವತ ಲೋಕದಲ್ಲಿ ವಚನ ಸಾಹಿತ್ಯ ಬಹು ಅಪರೂಪದ ಉತ್ಕೃಷ್ಟ ಸಾಹಿತ್ಯವಾಗಿದೆ. ಮಾನವೀಯತೆ, ಸಮಾನತೆಯ ಸಾರುವ ವಚನಗಳು ಮನುಕುಲದ ಏಳಿಗೆ ಬಯಸುತ್ತಿವೆ ಎಂದು ಸಾಹಿತಿ ಸಂಗಮೇಶ ಮಾಟೊಳ್ಳಿ ಹೇಳಿದರು.

ಭಾನುವಾರ ನಗರದ ರನ್ನ ಭವನದಲ್ಲಿ ಜರುಗಿದ ನಾಲ್ಕನೇ ವಚನ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, 10ನೇ ಶತಮಾನದಲ್ಲಿ ರಾಜಾಶ್ರಯ ಪಡೆದ ಕವಿಗಳು ರಾಜಾಶ್ರಯ ನೀಡಿದವರನ್ನು ಕೊಂಡಾಡಿದ್ದೇ ಹೆಚ್ಚು. ಆದರೆ, ವಚನಕಾರರಿಗೆ ರಾಜಾಶ್ರಯಕ್ಕೆ ಆಸೆಪಡದೇ ಕಾಯಕ ಹಾಗೂ ದಾಸೋಹ ಮಾಡುತ್ತಾ ಶರಣರ ಪರಂಪರೆ ಕಟ್ಟಿದರು ಎಂದರು.

 ವಿಭೂತಿ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಾಹಿತಿ ಪ್ರಕಾಶ ಖಾಡೆ, ರನ್ನನಾಡು ಮುಧೋಳ‌ದಲ್ಲಿ‌ ವಚನ ಸಾಹಿತ್ಯ ಸಮ್ಮೇಳನ ಹಬ್ಬದಂತೆ ಉತ್ಸುಕತೆಯಿಂದ ಜರುಗುತ್ತಿರುವುದು ಸಂತಸದ ಸಂಗತಿ ಎಂದರು.

ADVERTISEMENT

ಪತ್ರಕರ್ತ ಕಿರಣ ಬಾಳಗೋಳ ಮಾತನಾಡಿ, ಸಂಸ್ಕೃತಿಯ ಅಧಃಪತನದ ಕಾಲಘಟ್ಟದಲ್ಲಿ ಶರಣರ ಆಚಾರ–ವಿಚಾರಗಳ ಚರ್ಚಿಸುವ ವಾತಾವರಣ ಸೃಷ್ಟಿಸಿರುವ ಮುಧೋಳದ ಶರಣ ಸಂಸ್ಕೃತಿಯ ಭಕ್ತರ ಕಾರ್ಯ ಅನುಕರಣೀಯ‌ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಶ್ರೀಶೈಲ ಕರಿಶಂಕರಿ, ಸಮ್ಮೇಳನ ಅಧ್ಯಕ್ಷ ಕಲ್ಲಪ್ಪಣ್ಣ ಸಬರ ಮಾತನಾಡಿದರು.  ಲೋಕಾಪುರ ಹಿರೇಮಠದ ಚಂದ್ರಶೇಖರ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಅಧ್ಯಕ್ಷ ಕಲ್ಲಪ್ಪಣ್ಣ ಸಬರದ ಹಾಗೂ ವಚನ ಕಟ್ಟುಗಳ‌ ಭವ್ಯ ಮೆರವಣಿಗೆ ನಡೆಯಿತು. ಜಮಖಂಡಿಯ ಮಹೇಶ ಚಿತ್ರಕಲಾ‌ ಕಾಲೇಜಿನ ವಿದ್ಯಾರ್ಥಿಗಳಾದ ಉಮೇಶ ಗುರವ, ಸಯ್ಯದ್ ಪಿಂಜಾರ, ಸೃಷ್ಟಿ‌ ವಜ್ಜರಮಟ್ಟಿ, ಲಾಯಪ್ಪ ಹಡಪದ, ಹುಸೇನ ದಡೇದ, ಸುಧಾ ಪೋಳ, ರಕ್ಷಿತಾ, ನಾರಾಯಣ, ಉಮೇಶ ಸೇರಿದಂತೆ ವಿವಿಧ ವಿದ್ಯಾರ್ಥಿಗಳು ಬಿಡಿಸಿದ ಚಿತ್ರಗಳು ನೋಡುಗರ ಗಮನ ಸೆಳೆದವು.

ಮಹಾದೇವಿ ಸಬರದ, ನಿಕಟಪೂರ್ವ ಅಧ್ಯಕ್ಷ ನಿವೃತ್ತ ಉಪನಿರ್ದಶಕ ಎಂ.ಜಿ. ದಾಸರ, ರನ್ನ ಪ್ರತಿಷ್ಠಾನ ಸದಸ್ಯ ಡಾ.ಕೆ.ಎಲ್. ಉದುಪುಡಿ,‌ ವಿ.ಎಚ್. ಮೂಲಿಮನಿ, ಚಂದ್ರಶೇಖರ ದೇಸಾಯಿ, ಮಹಾಂತೇಶ ಗಜೇಂದ್ರಗಡ, ವಿರೇಶ ಆಸಂಗಿ, ಎಂ.ಆರ್. ದೇಸಾಯಿ, ಸಾಹಿತಿ ಶಿವಾನಂದ‌ ಕುಬಸದ, ವಕೀಲ ಪ್ರಕಾಶ ವಸ್ತ್ರದ, ವಚನ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಸಿದ್ದಣ್ಣ ಬಾಡಗಿ ಇದ್ದರು.

ಬಸವ ಯುಗಕ್ಕಿಂತಲೂ ಪೂರ್ವದಲ್ಲೂ ವಚನ ಸಾಹಿತ್ಯ ಇತ್ತು. ಆದರೆ ಬಸವಣ್ಣನವರು ವಚನ ಸಾಹಿತ್ಯದ ಮುಂದಾಳತ್ವ ವಹಿಸಿಕೊಂಡು ವಚನ ಸಾಹಿತ್ಯಕ್ಕೆ‌ ಹೊಸರೂಪ ತಂದುಕೊಟ್ಟರು
ಸಂಗಮೇಶ ಮಾಟೊಳ್ಳಿ ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.