ADVERTISEMENT

ಸಿದ್ದರಾಮಯ್ಯನವರಿಂದ ಮುಸ್ಲಿಮರ ಓಲೈಕೆ: ಸಚಿವ ಈಶ್ವರಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2022, 6:45 IST
Last Updated 27 ಮಾರ್ಚ್ 2022, 6:45 IST
ಕೆ.ಎಸ್‌.ಈಶ್ವರಪ್ಪ
ಕೆ.ಎಸ್‌.ಈಶ್ವರಪ್ಪ   

ಬಾಗಲಕೋಟೆ: ಸ್ವಾಮೀಜಿಗಳು ತಲೆಯ ಮೇಲೆ ಮುಸುಕು ಹಾಕುತ್ತಾರೆ ಎಂಬ ನನ್ನ ಹೇಳಿಕೆಗೆ ರಾಜ್ಯದ ಯಾವುದೇ ಹಿರಿಯ ಮಠಾಧೀಶರು ವಿರೋಧ ಮಾಡಿಲ್ಲ ಎನ್ನುವ ಮೂಲಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹಿಂದೂ ಸಮಾಜ ಒಡೆಯುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವರು, ಲಿಂಗಾಯತರನ್ನು ಒಡೆದು ಈಗಾಗಲೇ ಶಿಕ್ಷೆ ಅನುಭವಿಸಿರುವ ಸಿದ್ದರಾಮಯ್ಯ, ಈಗ ಸಾಧು–ಸಂತರನ್ನು ಹಿರಿಯರು, ಕಿರಿಯರು ಎಂದು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅದರ ಫಲ ಉಣ್ಣಲಿದ್ದಾರೆ ಎಂದರು.

ಹಿರಿಯ, ಕಿರಿಯ ಸ್ವಾಮೀಜಿಗಳು ಎಂಬುದಕ್ಕೆ ಏನು ಮಾನದಂಡ. ಸರ್ವವನ್ನು ಯಾರು ತ್ಯಾಗ ಮಾಡಿ ಬಂದಿರುತ್ತಾರೋ ಅವರನ್ನು ನಾವು ಸ್ವಾಮೀಜಿಗಳು ಎನ್ನುತ್ತೇವೆ. ಸಿದ್ದರಾಮಯ್ಯ ಹೇಳಿಕೆಯನ್ನು ಅವರ ಪುತ್ರ ಯತೀಂದ್ರ ಬಿಟ್ಟರೆ ಕಾಂಗ್ರೆಸ್‌ನ ಯಾವೊಬ್ಬ ನಾಯಕ ಕೂಡ ಸಮರ್ಥಿಸಿಕೊಂಡಿಲ್ಲ ಎಂದರು.

ADVERTISEMENT

ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪು ವಿರೋಧಿಸಿ ಮುಸ್ಲಿಮರು ಪ್ರತಿಭಟನೆ ಮಾಡುತ್ತಾರೆ. ಶಿಕ್ಷಣ ಪಡೆಯುವುದು ಬಿಡುತ್ತೇವೆ, ಹೊರತು ಧರ್ಮ ಬಿಡುವುದಿಲ್ಲ ಎಂದು ಮುಸ್ಲಿಂ ಹೆಣ್ಣುಮಕ್ಕಳು ಹೇಳುತ್ತಾರೆ. ಅವರಿಗೆ ಬುದ್ಧಿ ಹೇಳುವುದು ಬಿಟ್ಟು ಸಿದ್ದರಾಮಯ್ಯ ಓಲೈಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಬಾದಾಮಿಯಲ್ಲಿ ಮತ್ತೆ ಗೆಲ್ಲುವುದಿಲ್ಲ. ಚಾಮುಂಡೇಶ್ವರಿಯಲ್ಲೂ ಮತ್ತೆ ಗೆಲುವು ಸಾಧ್ಯವಿಲ್ಲ. ಅಂತಿಮವಾಗಿ ಜಮೀರ್ ಅಹಮದ್ ಪ್ರತಿನಿಧಿಸುವ ಚಾಮರಾಜಪೇಟೆ ಕ್ಷೇತ್ರವೇ ದಿಕ್ಕು. ಅಲ್ಲಿ ಚುನಾವಣೆಗೆ ನಿಲ್ಲಬೇಕು ಎಂಬ ಕಾರಣಕ್ಕೆ ಮುಸ್ಲಿಮರನ್ನು ಓಲೈಸಲು ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

’ಮುಸ್ಲಿಮರ ಅತಿಯಾದ ಓಲೈಕೆಯಿಂದಾಗಿಯೇ ದೇಶದಲ್ಲಿ ಕಾಂಗ್ರೆಸ್ ನಿರ್ನಾಮದತ್ತ ಸಾಗಿದೆ. ನ್ಯಾಯಾಲಯಕ್ಕೆ ಗೌರವ ಕೊಡುವುದು ಕಲಿತುಕೊಳ್ಳಿ. ಸಾಧು–ಸಂತರ ಬಗ್ಗೆ ನೀವು ಮಾತಾಡಿರುವುದು ಅಕ್ಷಮ್ಯ. ನಿಮ್ಮಿಂದ (ಸಿದ್ದರಾಮಯ್ಯ) ನೂರು ತಪ್ಪು ಆಗಿದೆ. ಇನ್ನು ಸಾಕು. ರಾಜಕೀಯ ನಿವೃತ್ತಿ ತೆಗೆದುಕೊಳ್ಳಿ‘ ಎಂದು ಈಶ್ವರಪ್ಪ ಸಲಹೆ ನೀಡಿದರು.

‘ಶಕ್ತಿ ಇದ್ದರೆ ಸಿದ್ದರಾಮಯ್ಯ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದಿಂದ ಕಿತ್ತು ಹಾಕಲಿ. ಇಲ್ಲದಿದ್ದರೆ ಹೈಕಮಾಂಡ್‌ಗೆ ಶಿಫಾರಸು ಮಾಡಲಿ’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.