ADVERTISEMENT

ಬಾಗಲಕೋಟೆ | ಇಂಧನ ಸಂರಕ್ಷಣೆ ನಾಗರಿಕರ ಹೊಣೆ: ಮಡಿವಾಳಪ್ಪ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 5:09 IST
Last Updated 22 ಡಿಸೆಂಬರ್ 2025, 5:09 IST
ಬಾಗಲಕೋಟೆ ಬಸವೇಶ್ವರ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಹೆಸ್ಕಾಂ ಸಹಾಯಕ ಎಂಜಿನಿಯರ್ ಮಡಿವಾಳಪ್ಪ ಇಂಡಿ ಮಾತನಾಡಿದರು
ಬಾಗಲಕೋಟೆ ಬಸವೇಶ್ವರ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಹೆಸ್ಕಾಂ ಸಹಾಯಕ ಎಂಜಿನಿಯರ್ ಮಡಿವಾಳಪ್ಪ ಇಂಡಿ ಮಾತನಾಡಿದರು   

ಬಾಗಲಕೋಟೆ: ಇಂದಿನ ಯುಗದಲ್ಲಿ ವಿದ್ಯುತ್, ಇಂಧನ ಮತ್ತು ಇತರ ಶಕ್ತಿ ಸಂಪನ್ಮೂಲಗಳು ಜೀವನದ ಅವಿಭಾಜ್ಯ ಭಾಗವಾಗಿವೆ. ಅವುಗಳ ರಕ್ಷಣೆ ಸರ್ಕಾರದ ಜೊತೆಗೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ ಎಂದು ಹೆಸ್ಕಾಂ ಬಾಗಲಕೋಟೆ ಸಹಾಯಕ ಎಂಜಿನಿಯರ್ ಮಡಿವಾಳಪ್ಪ ಇಂಡಿ ಹೇಳಿದರು.

ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅವುಗಳ ಅತಿಯಾದ ಬಳಕೆಯಿಂದ ಪರಿಸರ ಹಾನಿ, ಜಾಗತಿಕ ತಾಪಮಾನ ಹೆಚ್ಚಳ, ಇಂಧನ ಕೊರತೆಯಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಇಂಧನ ಸಂರಕ್ಷಣೆ ಎಂದರೆ ಕೇವಲ ಬಳಕೆ ಕಡಿಮೆ ಮಾಡುವುದು ಮಾತ್ರವಲ್ಲ, ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸುವುದೂ ಆಗಿದೆ. ಅಗತ್ಯವಿಲ್ಲದ ಸಂದರ್ಭಗಳಲ್ಲಿ ವಿದ್ಯುತ್ ಉಪಕರಣಗಳನ್ನು ಆಫ್ ಮಾಡುವುದು, ಎಲ್‌ಇಡಿ ದೀಪಗಳು ಮತ್ತು ಇಂಧನ-ಕಾರ್ಯಕ್ಷಮ ಸಾಧನಗಳನ್ನು ಬಳಸುವುದು, ಸಾರ್ವಜನಿಕ ಸಾರಿಗೆ ಉತ್ತೇಜಿಸುವುದು ಹಾಗೂ ಸೌರಶಕ್ತಿ, ಗಾಳಿಶಕ್ತಿಯಂತಹ ನವೀಕರಿಸಬಹುದಾದ ಇಂಧನ ಮೂಲಗಳನ್ನು ಅಳವಡಿಸಿಕೊಳ್ಳಬೇಕು  ಎಂದರು.

ADVERTISEMENT

ಕಾಲೇಜಿನ ಪ್ರಾಚಾರ್ಯ ಬಿ.ಆರ್. ಹಿರೇಮಠ ಮಾತನಾಡಿ, ಪ್ರತಿ ದಿನವೂ ಶಕ್ತಿ ಸಂರಕ್ಷಣೆಯ ದಿನವಾಗಬೇಕು. ವಿದ್ಯಾರ್ಥಿಗಳು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ವಿಭಾಗದ ಮುಖ್ಯಸ್ಥರಾದ ಆರ್.ಎಲ್. ನಾಯಕ ಮಾತನಾಡಿ, ವಿದ್ಯಾರ್ಥಿಗಳು ನಡೆಸಿದ ಶಕ್ತಿ ಸಂರಕ್ಷಣಾ ಅಧ್ಯಯನಗಳ ಕುರಿತು ವಿವರಿಸಿ, ನೂತನ ಹಾಗೂ ಅರ್ಥಪೂರ್ಣ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಸಂಯೋಜಕ ಬಸನಗೌಡ ರೋಣದ ಮಾತನಾಡಿದರು. ಪೋಸ್ಟರ್ ರಚನೆ ಸ್ಪರ್ಧೆಯಲ್ಲಿ 28 ಪೋಸ್ಟರ್‌ಗಳನ್ನು ಪ್ರದರ್ಶಿಸಲಾಯಿತು. ಮಹಾಬಲೇಶ್ವರ ಎಸ್.ಕೆ, ಪಿ.ಎನ್. ಕುಲಕರ್ಣಿ, ಕೆ. ಚಂದ್ರಶೇಖರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.