ADVERTISEMENT

ನೇಹಾ, ಫಯಾಜ್ ಪ್ರೀತಿಸಿದ್ದು ನಿಜ: ಸಚಿವ ಆರ್‌.ಬಿ. ತಿಮ್ಮಾಪುರ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 16:24 IST
Last Updated 22 ಏಪ್ರಿಲ್ 2024, 16:24 IST
ಆರ್‌.ಬಿ. ತಿಮ್ಮಾಪುರ
ಆರ್‌.ಬಿ. ತಿಮ್ಮಾಪುರ   

ಬಾಗಲಕೋಟೆ: ‘ನೇಹಾ ಮತ್ತು ಫಯಾಜ್ ನಡುವೆ ಪ್ರೀತಿ ಇದ್ದದ್ದು ನಿಜ. ನೇಹಾ ಕೊಲೆ ಪ್ರಕರಣ ಮತ್ತು ಆರೋಪಿ ಫಯಾಜ್‌ಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ’ ಎಂದು ಸಚಿವ ಆರ್‌.ಬಿ. ತಿಮ್ಮಾಪುರ ತಿಳಿಸಿದರು.

‘ನೇಹಾ ಮತ್ತು ಫಯಾಜ್ ಇಬ್ಬರೂ ಪ್ರೇಮಿಗಳು ಆಗಿದ್ದರು ಎಂಬುದನ್ನು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ ಹೊರತು ಪ್ರೀತಿ ಮಾಡಿದ್ದು ತಪ್ಪೆಂದು ಹೇಳಿಲ್ಲ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ಎಂ.ಎಂ. ಜೋಶಿ, ಎಲ್‌.ಕೆ. ಅಡ್ವಾಣಿ, ಸುಬ್ರಮಣ್ಯ, ಪ್ರವೀಣ ತೊಗಾಡಿಯಾ, ಅಶೋಕ ಸಿಂಘಾಲ್‌ ಅವರ ಮಕ್ಕಳು ಮುಸ್ಲಿಮರನ್ನು ಮದುವೆಯಾಗಿದ್ದಾರೆ. ಅವರ ಮಕ್ಕಳು ಮತಾಂತರವಾಗಿದ್ದಾರೋ, ಅವರನ್ನು ಮತಾಂತರ ಮಾಡಿದ್ದಾರೋ’ ಎಂದು ಪ್ರಶ್ನಿಸಿದರು.

ADVERTISEMENT

‘ಬಿಜೆಪಿ ಹೇಳಿದ್ದೆಲ್ಲವನ್ನೂ ಕೇಳಿಕೊಂಡು ಮಾಡಲು ಆಗಲ್ಲ. ಕೊಲೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಪೂರ್ಣಪ್ರಮಾಣದ ತನಿಖೆ ನಂತರವಷ್ಟೇ ಸತ್ಯಾಂಶ ಗೊತ್ತಾಗಲಿದೆ’ ಎಂದರು. 

ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ‘ಅವರಿಬ್ಬರೂ ಕೇಕ್‌ ತಿನ್ನಿಸುವುದು, ಹೆಗಲ ಮೇಲೆ ಕೈ ಹಾಕಿರುವ ಫೋಟೊಗಳು ಬಹಿರಂಗವಾಗಿವೆ. ಇಬ್ಬರೂ ಪ್ರೀತಿ ಮಾಡುತ್ತಿರುವುದು ನೇಹಾ ಅವರ ಅಪ್ಪ, ಅವ್ವನಿಗೆ ಗೊತ್ತಿತ್ತು. ಅವರು ಯಾಕೆ ಪೊಲೀಸ್ ಕಂಪ್ಲೆಟ್‌ ಕೊಡಲಿಲ್ಲ? ದೂರು ಕೊಟ್ಟಿದ್ದರೆ ಸಾವು ತಪ್ಪಿಸಬಹುದಿತ್ತಿಲ್ಲವೇ? ಕೊಲೆ ಮಾಡಿದವನಿಗೆ ಶಿಕ್ಷೆ ಆಗಬೇಕು’ ಎಂದರು.

ಸಿಎಂ ಮತಾಂತರವಾಗಲಿ

‘ರಾಜ್ಯದಲ್ಲಿ ಮುಸ್ಲಿಮರ ಓಲೈಕೆ ಹೆಚ್ಚಾಗಿದೆ. ಅಷ್ಟು ಪ್ರೀತಿ ಇದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತಾಂತರವಾಗಲಿ’ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆಗ್ರಹಿಸಿದರು. ಬಿಜೆಪಿ ವತಿಯಿಂದ ನೇಹಾ ಹಿರೇಮಠ ಕೊಲೆ ಖಂಡಿಸಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ‘ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆ ಎನ್ನುವ ಬದಲು ಈಗಲೇ ಅವರು ಮತಾಂತರಾಗಲಿ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.