ADVERTISEMENT

ಸ್ಮಶಾನದಲ್ಲಿ ಮರಣವೇ ಮಹಾನವಮಿ!

ಬದುಕು ಅನುಭವಿಸಿ, ಸಾವನ್ನು ಪ್ರೀತಿಸಿ: ನಿಜಗುಣಪ್ರಭು ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2018, 16:21 IST
Last Updated 25 ಜೂನ್ 2018, 16:21 IST
ಬಾದಾಮಿಯ ಹಿಂದೂ ರುದ್ರಭೂಮಿಯಲ್ಲಿ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ‘ ಮರಣವೇ ಮಹಾನವಮಿ’ ವಿಷಯದ ಕುರಿತು ಉಪನ್ಯಾಸ ನೀಡಿದರು. ಎನ್.ಎಚ್. ಗುಡಿ, ಹನುಮಂತಪ್ಪ ಹೆಬ್ಬಳ್ಳಿ ಇದ್ದಾರೆ.
ಬಾದಾಮಿಯ ಹಿಂದೂ ರುದ್ರಭೂಮಿಯಲ್ಲಿ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ‘ ಮರಣವೇ ಮಹಾನವಮಿ’ ವಿಷಯದ ಕುರಿತು ಉಪನ್ಯಾಸ ನೀಡಿದರು. ಎನ್.ಎಚ್. ಗುಡಿ, ಹನುಮಂತಪ್ಪ ಹೆಬ್ಬಳ್ಳಿ ಇದ್ದಾರೆ.   

ಬಾದಾಮಿ: ‘ಮನುಷ್ಯ ತನ್ನ ಬದುಕಿನ ನಂತರದ ದಿನಗಳಲ್ಲಿ ಕಳೆಯುವುದು ಸ್ಮಶಾನದಲ್ಲಿ ಎಂಬುದನ್ನು ತಿಳಿಯಬೇಕು. ಸ್ಮಶಾನವು ಮನೆಗಿಂತ ಪವಿತ್ರ. ಎಲ್ಲಿಯೂ ಜಾಗ ಸಿಗದಿದ್ದಾಗ ಕೊನೆಗೆ ದೊರಕುವುದು ಸ್ಮಶಾನ ಮಾತ್ರ’ ಎಂದು ಮುಂಡರಗಿ ತೋಂಟದಾರ್ಯ ಶಾಖಾ ಮಠದ ನಿಜಗುಣಪ್ರಭು ಸ್ವಾಮೀಜಿ ಹೇಳಿದರು.

ಇಲ್ಲಿನ ವಿಶ್ವಚೇತನ ಆಶ್ರಯದಲ್ಲಿ ಭಾನುವಾರ ರಾತ್ರಿ ಹಿಂದೂ ಸ್ಮಶಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ‘ಮರಣವೇ ಮಹಾನವಮಿ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

‘ಮನುಷ್ಯ ನಿಸರ್ಗ ಮತ್ತು ಬದುಕನ್ನು ಅನುಭವಿಸಬೇಕು. ಸಾವನ್ನು ಪ್ರೀತಿಸಬೇಕು. 12 ನೇ ಶತಮಾನದಲ್ಲಿ ಶರಣರು ವಚನ ಸಾಹಿತ್ಯದಲ್ಲಿ ಮರಣವೇ ಮಹಾನವಮಿ ಎಂದು ಬರೆದಿದ್ದಾರೆ. ಅದರಂತೆ ಅವರು ಮರಣದಲ್ಲಿ ಸಂತಸ ಕಂಡಿದ್ದರು’ ಎಂದರು.

ADVERTISEMENT

‘ಮನೆ ಕಟ್ಟುವ ಬದಲು ಊರಿನಲ್ಲಿ ಒಂದು ಸುಂದರವಾದ ಸ್ಮಶಾನ ಕಟ್ಟಿದ್ದೀರಿ. ಹಿಂದೂ, ಮುಸ್ಲಿಂ, ಕ್ರೈಸ್ತ ,ಪಾರಸಿ ಯಾರೇ ಮರಣ ಹೊಂದಿದರೂ ಸಹ ಶವ ಸ್ಮಶಾನಕ್ಕೆ ಒಯ್ಯಬೇಕು. ಭಾರತೀಯ ಸಂಸ್ಕೃತಿ ಪರಂಪರೆಯ ಹಿಂದೂ ಸಮಾಜದಲ್ಲಿ ಸೌಹಾರ್ದತೆ ಮತ್ತು ಗೌರವ ದೊರೆಯಲು ಸಾಧ್ಯ’ ಎಂದರು.

‘ಶವ ಒಯ್ಯುವಾಗ ಪಟಾಕಿ ಸಿಡಿಸುವುದು ಬಿಡಿ. ತಂದೆ-ತಾಯಿ ಅಥವಾ ಸಂಬಂಧಿಕರು ಮರಣ ಹೊಂದಿದಾಗ ಪಂಚಾಗ ಕೇಳಲು ಹೋಗುವಿರಿ. ಅವರು ಮೂರು ತಿಂಗಳು ಮನೆ ಬಿಡಬೇಕು ಎನ್ನುತ್ತಾರೆ. ನೀವು ಮೂರು ತಿಂಗಳು ಮನೆ ಬಿಡಬೇಕಾಗುತ್ತದೆ. ಇದು ಯಾವ ಪದ್ಧತಿ. ಅದು ಪೋಷಕರಿಗೆ ದ್ರೋಹ ಮಾಡಿದಂತೆ. ಮನೆ ಬಿಡಬೇಡಿ. ನಿಮಗೆ ಏನೂ ಆಗುವುದಿಲ್ಲ. ಮೂಢನಂಬಿಕೆ ತ್ಯಜಿಸಿ’ ಎಂದು ಸ್ವಾಮೀಜಿ ಹೇಳಿದರು.

‘ನಮಗೆ ಸಾವು ಯಾವಾಗ ಬರುತ್ತದೆ ? ಹೇಗೆ ಬರುತ್ತದೆ ಎಂಬುದು ಗೊತ್ತಿಲ್ಲ. ದೊಡ್ಡವರು,ಸಣ್ಣವರು, ಮೇಲ್ಜಾತಿ, ಕೆಳಜಾತಿ, ಸಿರಿವಂತರು ಮತ್ತು ಬಡವರು ಹೀಗೆ ಎಲ್ಲರನ್ನು ಸಮಾನವಾಗಿ ಅಲ್ಲಾಡಿಸುವ ಶಕ್ತಿ ಮರಣದಲ್ಲಿದೆ’ ಎಂದರು.

‘ದೇವರು ಕೊಟ್ಟ ದೇಹ ಸರಿಯಾಗಿ ರಕ್ಷಿಸಿಕೊಳ್ಳಿ. ಯುವಕರು ವ್ಯಸನದಿಂದ ಮುಕ್ತರಾಗಿ ಹೊರಬನ್ನಿ. ವ್ಯಸನಿಗಳಾಗಿ ಪೋಷಕರಿಗೆ, ಸಮಾಜಕ್ಕೆ ಹೊರೆಯಾಗಬೇಡಿ’ ಎಂದರು.

ಬಾದಾಮಿ ಪಟ್ಟಣದ ಹಿಂದೂ ರುದ್ರಭೂಮಿ ಹಸಿರಿನ ಸಿರಿಯಿಂದ ಕಂಗೊಳಿಸುತ್ತಿದೆ. ಇಲ್ಲಿ ಸುಂದರ ಪರಿಸರವಿದೆ ಎಂದು ಶ್ಲಾಘಿಸಿದ ಸ್ವಾಮೀಜಿ ಸ್ಮಶಾನದ ಆವರಣದಲ್ಲಿ ಗಿಡ ನೆಟ್ಟರು. ಹಿಂದೂ ರುದ್ರಭೂಮಿ ಅಧ್ಯಕ್ಷ ಹನುಮಂತ ಹೆಬ್ಬಳ್ಳಿ, ಕಾರ್ಯದರ್ಶಿ ಎನ್.ಎಚ್. ಗುಡಿ ಇದ್ದರು. ಇಷ್ಟಲಿಂಗ ಶಿರಸಿ ಸ್ವಾಗತಿಸಿದರು. ಉಜ್ವಲಾ ಬಸರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.