ಬಾದಾಮಿ: ಚರಂಡಿಗಳ ಅಸಮರ್ಪಕ ನಿರ್ವಹಣೆ, ಜೆಜೆಎಂ ಕಳಪೆ ಕಾಮಗಾರಿ, ಸ್ವಚ್ಛತೆ ಕಾಣದ ಬಸ್ ನಿಲ್ದಾಣ.. ಹೀಗೆ ಹಲವು ಸಮಸ್ಯೆಗಳ ಆಗರವಾಗಿದೆ ಸಮೀಪದ ಕೆಂದೂರ ಗ್ರಾಮ.
ಬಸ್ ನಿಲ್ದಾಣದ ಸುತ್ತಲೂ ಗಿಡಗಂಟಿಗಳು ಬೆಳೆದಿದ್ದು, ಒಳಗೆ ಕಸ ತುಂಬಿಕೊಂಡು ಕಸದ ತೊಟ್ಟಿಯಂತಾಗಿದೆ. ಇದರಿಂದ ಬಸ್ ತಂಗುದಾಣದ ಒಳಗೆ ಪ್ರಯಾಣಿಕರು ಕಾಲಿಡಲೂ ಬಾರದ ಸ್ಥಿತಿಯಲ್ಲಿದೆ.
‘ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ನಳ ಅಡವಡಿಸಲಾಗಿದೆ. ವರ್ಷ ಕಳೆದರೂ ಈವರೆಗೂ ಹನಿ ನೀರೂ ಬಂದಿಲ್ಲ. ನಳ ಅಳವಡಿಸಲು ತೆಗೆದ ಗುಂಡಿಗಳನ್ನು ಮುಚ್ಚದೆ ಹಾಗೆಯೇ ಬಿಡಲಾಗಿದ್ದು, ರಸ್ತೆಯಲ್ಲಿ ಜನರು ಪ್ರಯಾಸಪಟ್ಟು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಗ್ರಾಮಸ್ಥ ಜಗದೀಶ ಅಳಲು ತೋಡಿಕೊಂಡರು.
‘ಈ ಭಾಗದ ಜನರ ಜೀವನಾಡಿ ಆಗಿರುವ ಕೆಂದೂರ ಗ್ರಾಮದ ಕೆರೆಯು ನಿರ್ವಹಣೆ ಕೊರತೆಯಿಂದ ಬತ್ತಿಹೋಗಿದೆ. ಮಲಪ್ರಭಾ ನದಿಯಿಂದ ಕೆರೆಗೆ ನೀರು ಹರಿಸಲು ಸರ್ಕಾರದಿಂದ ₹5 ಕೋಟಿ ವೆಚ್ಚ ಮಾಡಲಾಗಿದೆಯಾದರೂ ಈವರೆಗೂ ಕೆರೆಗೆ ಹನಿ ನೀರೂ ಬಂದಿಲ್ಲ.
ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಜೆಜೆಎಂ ಕಾಮಗಾರಿ ಪರಿಶೀಲಿಸಲಾಗುವುದು. ಮಕ್ಕಳಿಗೆ ತೊಂದರೆಯಾಗದಂತೆ ಶಾಲೆಯ ಆವರಣದ ನೀರಿನ ಟ್ಯಾಂಕಿಗೆ ಗ್ರಿಲ್ ಅಳವಡಿಸುವುದು.ಪಿ.ಬಿ. ಮುಳ್ಳೂರ, ಪಿಡಿಒ
‘ಬಾದಾಮಿ ಮತ್ತು ಗುಳೇದಗುಡ್ಡ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಂದ ಕೆರೆ ಹೂಳೆತ್ತಲು ಜೆವೈಆರ್ ಯೋಜನೆ ಅಡಿ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೆ, ಕೆರೆಯಲ್ಲಿ ತೆಗೆದ ಹೂಳನ್ನು ಪಕ್ಕದಲ್ಲಿಯೇ ಹಾಕಲಾಗಿದೆ. ಕೆರೆಯಲ್ಲಿ ಎಲ್ಲೆಡೆ ಮುಳ್ಳು ಕಂಟಿಗಳು ಬೆಳೆದಿವೆ’ ಎಂದು ರೈತ ಸಿದ್ದಪ್ಪ ನೋವಿನಿಂದಲೇ ಹೇಳಿದರು.
‘ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸಲು ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಟ್ಯಾಂಕ್ ನಿರ್ಮಿಸಲಾಗಿದೆ. ಇದು ಮಕ್ಕಳ ಜೀವಕ್ಕೆ ಅಪಾಯವಾಗಿದೆ. ಟ್ಯಾಂಕ್ ಅನ್ನು ಬೇರೆಡೆ ಸ್ಥಳಾಂತರಿಸಬೇಕು’ ಎಂಬುದು ಶಿಕ್ಷಕರ ಆಗ್ರಹವಾಗಿದೆ.
‘ದಶಕದಿಂದ ಗ್ರಾಮ ಪಂಚಾಯಿತಿಗಿಲ್ಲ ಅಧ್ಯಕ್ಷ, ಉಪಾಧ್ಯಕ್ಷ’
ಕೆಂದೂರ ಗ್ರಾಮ ಪಂಚಾಯಿತಿಯಲ್ಲಿ ದಶಕಗಳಿಂದ ಜನಪ್ರತಿನಿಧಿಗಳ ಆಡಳಿತ ಇಲ್ಲ. ಅಭಿವೃದ್ಧಿ ಕಾಮಗಾರಿಗಳು ಸರಿಯಾಗಿ ನಡೆಯದಿರುವುದಕ್ಕೆ ಇದುವೇ ಕಾರಣ ಎನ್ನುವುದು ಗ್ರಾಮಸ್ಥರು ದೂರು.
ಕೆಂದೂರು ಗ್ರಾಮ ಪಂಚಾಯಿತಿಗೆ ಕೆಂದೂರು ಕುಟಕನಕೇರಿ ಕೆಂದೂರ ತಾಂಡಾ ಸೇರುತ್ತವೆ. ಒಟ್ಟು 14 ಸದಸ್ಯರ ಬಲ ಹೊಂದಿರುವ ಕೆಂದೂರ ಗ್ರಾಮ ಪಂಚಾಯಿತಿಗೆ ಕೆಂದೂರ ಮತ್ತು ಕೆಂದೂರ ತಾಂಡೆ ಸೇರಿ ಏಳು ಹಾಗೂ ಕುಟಕನಕೇರಿ ಗ್ರಾಮದಿಂದ ಏಳು ಸದಸ್ಯರನ್ನು ಚುನಾವಣೆ ಮೂಲಕ ಆಯ್ಕೆ ಮಾಡಬೇಕಾಗುತ್ತದೆ. ಆದರೆ ಕುಟಕನಕೇರಿ ಗ್ರಾಮಕ್ಕೆ ಗ್ರಾಮ ಪಂಚಾಯಿತಿ ನೀಡಬೇಕೆಂದು ಹಠ ಹಿಡಿದಿರುವ ಗ್ರಾಮಸ್ಥರು ಕಳೆದ 10 ವರ್ಷಗಳಿಂದ ಚುನಾವಣೆ ಬಹಿಷ್ಕರಿಸುತ್ತಾ ಬಂದಿದ್ದಾರೆ. ಹೀಗಾಗಿ ಅಲ್ಲಿಂದ ಈವರೆಗೂ ತಾಲ್ಲೂಕು ಪಂಚಾಯಿತಿ ಇಒ ಮತ್ತು ಪಿಡಿಒ ಅವರೇ ಆಡಳಿತ ನಿರ್ವಹಿಸುತ್ತಿದ್ದಾರೆ. ‘10 ವರ್ಷದಿಂದ ನಮ್ಮ ಪಂಚಾಯಿತಿಗೆ ಅಧ್ಯಕ್ಷ ಉಪಾಧ್ಯಕ್ಷ ಇಲ್ಲ. ಒಂದ ಬಾರಿಯೂ ಗ್ರಾಮ ಸಭೆ ಕರಿದಿಲ್ಲ. ಗ್ರಾಮ ಪಂಚಾಯಿತಿ ಬೇಲಿ ಇಲ್ಲದ ಹೊಲ ಆಗೈತಿ ಊರಾಗ ಯಾವ್ದೂ ಕೆಲಸ ಆಗ್ತಿಲ್ಲ’ ಎಂದು ಕೆಂದೂರ ಗ್ರಾಮಸ್ಥ ಬಸವರಾಜ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.