ADVERTISEMENT

ಬಾಗಲಕೋಟೆಯಲ್ಲಿ ಯಾರಿಗೂ ಕೊರೊನಾ ಸೋಂಕು ಇಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

ಚೆಕ್‌ಪೋಸ್ಟ್‌ಗಳಲ್ಲಿ 20,385 ಮಂದಿ ತಪಾಸಣೆ:

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 14:22 IST
Last Updated 20 ಮಾರ್ಚ್ 2020, 14:22 IST
ಬಾಗಲಕೋಟೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಿಇಒ ಗಂಗೂಬಾಯಿ ಮಾನಕರ, ಡಿಎಚ್‌ಒ ಡಾ.ಅನಂತ ದೇಸಾಯಿ ಇದ್ದರು
ಬಾಗಲಕೋಟೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಿಇಒ ಗಂಗೂಬಾಯಿ ಮಾನಕರ, ಡಿಎಚ್‌ಒ ಡಾ.ಅನಂತ ದೇಸಾಯಿ ಇದ್ದರು   

ಬಾಗಲಕೋಟೆ: ಕೊರೊನಾ ವೈರಸ್ ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿ ಭಾಗದಲ್ಲಿ ಮೂರು ಕಡೆ ಜಿಲ್ಲಾಡಳಿತ ಆರಂಭಿಸಿರುವ ಚೆಕ್‌ಪೋಸ್ಟ್‌ಗಳಲ್ಲಿ ಇಲ್ಲಿಯವರೆಗೆ ಒಟ್ಟು 20,385 ಜನರನ್ನು ಪ್ರಾಥಮಿಕ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.

ಹೀಗೆ ತಪಾಸಣೆಗೆ ಒಳಪಡಿಸಿದವರಲ್ಲಿ ಯಾರಿಗೂ ಕೊರೊನಾ ಸೋಂಕು ಕಂಡುಬಂದಿಲ್ಲ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಶ್ರೀಶೈಲದಿಂದ ಮರಳಿ ಬರುವ ಯಾತ್ರಿಗಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲು ಹುನಗುಂದ ತಾಲ್ಲೂಕಿನ ನಂದವಾಡಗಿಯಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದೆ ಎಂದು ತಿಳಿಸಿದರು.

ವಿದೇಶದಿಂದ ಮರಳಿದವರನ್ನು 14 ದಿನಗಳವರೆಗೆ ಮನೆಯಿಂದ ಹೊರಗೆ ಹೋಗದಂತೆ (ಕ್ವಾರಂಟೈನ್) ನಿಗಾ ವಹಿಸಲಾಗುತ್ತಿದೆ. ಅವರಲ್ಲಿ 11 ಜನರ ನಿರೀಕ್ಷಣಾ ಅವಧಿ ಪೂರ್ಣಗೊಂಡಿದೆ. ಕೊಪ್ಪಳ ಜಿಲ್ಲೆಯ ಕೊರೊನಾ ಶಂಕಿತವ್ಯಕ್ತಿಯೊಬ್ಬರು ಬಾಗಲಕೋಟೆಯ ನವನಗರದ ಸೆಕ್ಟರ್ ನಂ.15 ರಲ್ಲಿರುವ ತಮ್ಮ ಮಗಳ ಮನೆ ಬಂದು ಹೋಗಿರುವುದು ಗೊತ್ತಾಗಿದೆ. ಅವರ ಮೇಲೆ ನಿಗಾ ಇಡಲಾಗಿದೆ. ಆದರೆ ಕೊಪ್ಪಳದ ವ್ಯಕ್ತಿಗೆ ಸೋಂಕು ಇನ್ನೂ ಖಚಿತಗೊಂಡಿಲ್ಲ. ಪರೀಕ್ಷೆಗೆ ಗಂಟಲು ದ್ರವದ ಮಾದರಿ ಕಳುಹಿಸಲಾಗಿದೆ ಎಂದರು.

ADVERTISEMENT

ಕೊರೊನಾ ವೈರಸ್ ಬಾಧಿತರ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ 13, ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ ಐದರಂತೆ ಪ್ರತ್ಯೇಕ ವಾರ್ಡ್‌ಗಳನ್ನು ತೆರೆಯಲಾಗಿದೆ. ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನಲ್ಲಿ 10 ಹಾಗೂ ಕೆರೂಡಿ ಆಸ್ಪತ್ರೆಯಲ್ಲಿ ಐದು ಹಾಸಿಗೆಯುಳ್ಳ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ಒಟ್ಟು 3800 ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ವಾರದ ಸಂತೆಗಳಿಗೆ ನಿಷೇಧ: ಜಿಲ್ಲೆಯಲ್ಲಿ ಜರುಗುವ ಎಲ್ಲ ವಾರದ ಸಂತೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ತೆರಳುವ ಎಲ್ಲ ಬಸ್‌ಗಳ ಓಡಾಟ ರದ್ದುಪಡಿಸಲಾಗಿದೆ.

ಸಣ್ಣ ಸಣ್ಣ ವಿಷಯಕ್ಕೂ ಅನಗತ್ಯವಾಗಿ ಆಸ್ಪತ್ರೆಗಳಿಗೆ ಹೋಗಬೇಡಿ.ಮನೆಯಲ್ಲಿಯೇ ಇದ್ದು ವೈದ್ಯರನ್ನು ಮೊಬೈಲ್ ಫೋನ್ ಮೂಲಕ ಸಂಪರ್ಕಿಸಿ ಸಲಹೆ ಪಡೆಯಬೇಕು. ಸಾರ್ವಜನಿಕರು ಅನವಶ್ಯಕವಾಗಿ ಓಡಾಡುವದನ್ನು ಸ್ವಯಂ ನಿಷೇಧ ಮಾಡಿಕೊಳ್ಳಬೇಕು. ವೃದ್ದರು, ಚಿಕ್ಕ ಮಕ್ಕಳು ಅವಶ್ಯವಿದ್ದಾಗ ಮಾತ್ರ ಹೊರಗಡೆ ಬರಬೇಕು. ಅವಶ್ಯಕತೆ ಇದ್ದಲ್ಲಿ ಮಾತ್ರ ಆಸ್ಪತ್ರೆಗೆ ತೆರಳಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗೂಬಾಯಿ ಮಾನಕರ, ಡಿಎಚ್‌ಒ ಡಾ.ಎ.ಎನ್.ದೇಸಾಯಿ, ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ಬಿರಾದಾರ್, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವಿಜಯ ಕಂಠಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.