ಬಾಗಲಕೋಟೆ: ‘ಹಬ್ಬಗಳು ನಾಡಿನ ಸಂಸ್ಕೃತಿಯ ಅಸ್ಮಿತೆಯ ಪ್ರತೀಕವಾಗಿವೆ. ಓಣಂ ಕೇರಳದ ಸಾಂಪ್ರದಾಯಿಕ ಸುಗ್ಗಿ ಹಬ್ಬವಾಗಿದೆ. ಹಬ್ಬಗಳು ಭಾಷೆಗಳ ನಡುವಣ ಸೌಹಾರ್ದ ಸೇತುವೆಗಳಾಗಿ ಕಾರ್ಯ ನಿರ್ವಹಿಸುತ್ತವೆ’ ಎಂದು ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಸಿ. ಚರಂತಿಮಠ ಹೇಳಿದರು.
ನಗರದ ಬಿ.ವಿ.ವಿ ಸಂಘದ ಎಸ್. ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನ ಶಿವಾಲಯ ಆವರಣದಲ್ಲಿ ಸೋಮವಾರ ಕೇರಳದ ಸಾಂಪ್ರದಾಯಿಕ ಓಣಂ ಹಬ್ಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಸಂಘದ ನರ್ಸಿಂಗ್ ಕಾಲೇಜುಗಳಲ್ಲಿ ಕೇರಳದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಬಾಗಲಕೋಟೆಯಲ್ಲಿಯೇ ಓಣಂ ಹಬ್ಬ ಅದ್ದೂರಿಯಾಗಿ ಆಚರಿಸುವ ವ್ಯವಸ್ಥೆ ಮಾಡಲಾಗಿದೆ’ ಎಂದರು.
‘ಕೇರಳದ ಚಂಡಮದ್ದಳೆ ತಂಡ, ಬಾಣಸಿಗರ ತಂಡಗಳು ಭಾಗವಹಿಸಿವೆ. ಇಂತಹ ಆಚರಣೆಗಳ ಮೂಲಕ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯರಾಜ್ಯದ ಸಂಪ್ರದಾಯ ಮತ್ತು ಸಂಸ್ಕೃತಿಯ ಪರಿಚಯ ಮಾಡಿಸಿದಂತಾಗುತ್ತದೆ. ಅದೇ ರೀತಿ ಈ ನೆಲದ ಹಬ್ಬಗಳ ಮೂಲಕ ಅನ್ಯಭಾಷಿಕರಿಗೆ ಕನ್ನಡದ ವೈಶಿಷ್ಟ್ಯ ಪರಿಚಯಿಸಲಾಗುತ್ತಿದೆ’ ಎಂದು ಹೇಳಿದರು.
ಸಜ್ಜಲಶ್ರೀ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಓಣಂ ನೃತ್ಯ ಪ್ರದರ್ಶಿಸಿದರು. ಕಾವಾಡಿ ದ್ರುವಂಕ ಸ್ಮತಿ ಕಲಾವಿದರ ತಂಡದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಹಾಸ್ಟೆಲ್ ಕಮೀಟಿ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಸದಸ್ಯ ಮಹೇಶ ಅಂಗಡಿ, ಅಶೋಕ ಕಲ್ಯಾಣಶೆಟ್ಟರ್, ಡಾ.ಸುಭಾಷ ಪಾಟೀಲ, ನರ್ಸಿಂಗ್ ಕಾಲೇಜುಗಳ ಪ್ರಾಚಾರ್ಯ ಡಾ.ದಿಲೀಪ್ ನಾಟೆಕರ್, ಡಾ.ಜಯಶ್ರೀ ಮತ್ತು ಡಾ.ಪ್ರವೀಣ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.