ADVERTISEMENT

ಮುಧೋಳ: ಮಳೆಗೆ ಸಂಪೂರ್ಣ ಹಾಳಾದ ಈರುಳ್ಳಿ

ಉದಯ ಕುಲಕರ್ಣಿ
Published 28 ಸೆಪ್ಟೆಂಬರ್ 2025, 3:19 IST
Last Updated 28 ಸೆಪ್ಟೆಂಬರ್ 2025, 3:19 IST
ಮುಧೋಳ ತಾಲ್ಲೂಕಿನ ಹಲಕಿ  ಗ್ರಾಮದ ರೈತರ ಹಾನಿಗೊಳಗಾದ ಈರುಳ್ಳಿ ಬೆಳೆ
ಮುಧೋಳ ತಾಲ್ಲೂಕಿನ ಹಲಕಿ  ಗ್ರಾಮದ ರೈತರ ಹಾನಿಗೊಳಗಾದ ಈರುಳ್ಳಿ ಬೆಳೆ   

ಮುಧೋಳ: ತಾಲ್ಲೂಕಿನಲ್ಲಿ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 16 ಸಾವಿರಕ್ಕೂ ಅಧಿಕ ರೈತರು ಈರುಳ್ಳಿ ಬೆಳೆದಿದ್ದಾರೆ. ಪ್ರಾಥಮಿಕ ವರದಿಯಂತೆ 9,727 ಹೆಕ್ಟೇರ್ ಪ್ರದೇಶದಲ್ಲಿ ಮಳೆಯಿಂದ ಬೆಳೆ ಹಾನಿಯಾಗಿದೆ.

ಮಳೆ ಮುಂದುವರೆದರೆ ಶೇ100ರಷ್ಟು ಹಾನಿಯಾಗಲಿದೆ. ಕಟಾವು ಹಂತದಲ್ಲಿ ಮಳೆಯಾಗಿರುವುದರಿಂದ ಈರುಳ್ಳಿ ಕೊಳೆಯುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹೊಲವೆಲ್ಲ ಕೆಸರಾಗಿದೆ. ಹೊಲದಲ್ಲಿ ಕೊಳೆತ ಈರುಳ್ಳಿ ವಾಸನೆ ಬರುತ್ತಿದೆ.

‘ಒಂದು ಎಕರೆ ಪ್ರದೇಶದಲ್ಲಿ 100 ರಿಂದ 150 ಚೀಲ ಈರುಳ್ಳಿ ಬರುತ್ತಿತ್ತು. ಬೀಜ, ರಸಗೊಬ್ಬರ  ಸೇರಿ ಎಕರೆಗೆ ₹35 ರಿಂದ ₹40 ಸಾವಿರ ವೆಚ್ಚವಾಗುತ್ತದೆ. ಹಾಕಿದ ಬೀಜ, ರಸಗೊಬ್ಬರದ ಹಣ ಬರುತ್ತಿಲ್ಲ’ ಎಂದು ರೈತರು ಗೋಳಾಡುತ್ತಿದ್ದಾರೆ.

ADVERTISEMENT

‘ತಾಲ್ಲೂಕಿನ ರೂಗಿ ಗ್ರಾಮದ ರೈತ ಸದಾಶಿವ ಬಟಕುರ್ಕಿ 15 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದಾರೆ. ಬೆಳೆ ಬಂಪರ್ ಬಂದಿತ್ತು. ಈಗ ಮಳೆಗೆ ಕೊಳೆತು ಹೋಗಿದೆ. ₹6 ಲಕ್ಷ ವೆಚ್ಚವಾಗಿದೆ’ ಎಂದರು.

‘10 ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೆ. ₹3 ಲಕ್ಷ ವೆಚ್ಚ ಮಾಡಿದ್ದೇನೆ. ಒಂದು ರೂಪಾಯಿ ಕೂಡಾ ಆದಾಯ ಇಲ್ಲದಂತಾಗಿದೆ’ ಎನ್ನುತ್ತಾರೆ ಮುದ್ದಾಪುರ ಗ್ರಾಮದ ಫಕೀರಪ್ಪ ಶಿರಸಂಗಿ.

ಈರುಳ್ಳಿ ಸಂಪೂರ್ಣವಾಗಿ ನಾಶವಾಗಿದೆ. ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ, ರೈತರ ಸಂಕಷ್ಟ ಹೆಚ್ಚುತ್ತದೆ ಎಂದು ತಾಲ್ಲೂಕಿನ ಬೊಮ್ಮನಬುದ್ನಿ ಗ್ರಾಮದ ಬಸವರಾಜ ಹ್ಯಾವಗಲ್‌ ಅಳಲು ತೋಡಿಕೊಂಡರು.

ಮುಧೋಳ ತಾಲ್ಲೂಕಿನ ನಿಂಗಾಪುರ  ಗ್ರಾಮದ ರೈತರ ಹಾನಿಗೊಳಗಾದ ಈರುಳ್ಳಿ ಬೆಳೆ
ಮುಧೋಳ ತಾಲ್ಲೂಕು ಕಸಬಾ ಜಂಬಗಿ ಗ್ರಾಮದ ಈರುಳ್ಳಿ ಹಾನಿಯ ಸಮೀಕ್ಷೆ ನಡೆಸುತ್ತಿರುವ ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು
ಮುಧೋಳ ತಾಲ್ಲೂಕು ಬೊಮ್ಮನಬುದ್ನಿ  ಗ್ರಾಮದ ಬಸವರಾಜ ಹ್ಯಾವಗಲ್ಲ ಹೊಲದ ನಾಶವಾಗಿರುವ ಈರುಳ್ಳಿ ಬೆಳೆ
ಈರುಳ್ಳಿ ಬೆಳೆ ಮಳೆಯಿಂದ ನಾಶವಾಗಿದೆ. ಹಾಕಿದ ಬಂಡವಾಳ ಮಳೆಯಲ್ಲಿ ಕೊಚ್ಚಿ ಹೋಗಿದೆ. ತೋಟಗಾರಿಕೆ ಇಲಾಖೆ ಸಮೀಕ್ಷೆ ನಡೆಸಿ ಶೀಘ್ರ ಪರಿಹಾರ ನೀಡಬೇಕು. ರೈತರ ನೆರವಿಗೆ ಧಾವಿಸಬೇಕು
ಬಸವರಾಜ ಹ್ಯಾವಗಲ್ ಕೃಷಿಕ ಬೊಮ್ಮನಬುದ್ನಿ ಗ್ರಾಮ
ಪ್ರಾಥಮಿಕ ವರದಿಯಂತೆ ಮಳೆಯಿಂದ 9727 ಹೆಕ್ಟೇರ್ ಬೆಳೆ ಹಾನಿಯಾಗಿದ್ದು ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಹಾನಿಯ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು
ಸಚಿನ್ ಪಂಚಗಾಂವಿ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.