ಕುಳಗೇರಿ ಕ್ರಾಸ್: ರಾಜ್ಯ ಹೆದ್ದಾರಿ 14 ಕ್ಕೆ ಹೊಂದಿಕೊಂಡಿರುವ ತಿಮ್ಮಾಪುರ ಎಸ್.ಎನ್ ಗ್ರಾಮದ ಹಲವು ರೈತರು ಜಮೀನಿನಲ್ಲಿ ಬೆಳೆದಿರುವ ಈರುಳ್ಳಿ ಬೆಳೆಗೆ ಮಜ್ಜಿಗೆ ರೋಗ ಬಾಧೆ ಕಂಡು ಬಂದಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ನೀಲಗುಂದ ಗ್ರಾಮದ ಸೀಮೆಯಲ್ಲಿ ರೈತ ಚಿದಾನಂದ ವೀರಭದ್ರಪ್ಪ ಅಂಗಡಿ ಅವರ 5 ಎಕರೆ ಜಮೀನಿನಲ್ಲಿ ಈರುಳ್ಳಿ ಬಿತ್ತನೆ ಮಾಡಿ ಎರಡು ತಿಂಗಳ ನಂತರ ಮಜ್ಜಿಗೆ ರೋಗ ಕಂಡು ಬಂದಿದೆ. ಇವರ ಜಮೀನಿನ ಸುತ್ತ ಮುತ್ತ ಈರುಳ್ಳಿ ಬೆಳದಿರುವ ಶಿವಪ್ಪ ಬನಪ್ಪನವರ, ಬಸಪ್ಪ ಓಜುಗ, ಬಸಪ್ಪ ಬನಪ್ಪನವರ ಸೇರಿದಂತೆ ಬಹುತೇಕ ಎಲ್ಲರ ಬೆಳೆಗೂ ರೋಗ ಕಂಡು ಬಂದಿದೆ. ತಗ್ಗು ಪ್ರದೇಶದಲ್ಲಿ ಹೆಚ್ಚು ನೀರು ಒಂದೆಡೆ ನಿಂತಿದ್ದರಿಂದ ತಂಪು ಹೆಚ್ಚಾಗಿ ಈ ರೋಗ ಕಂಡು ಬಂದಿದೆ.
‘ಪ್ರತಿ ಬಾರಿ ₹ 2,600 ರಂತೆ ಮೂರು ಬಾರಿ ಖರ್ಚು ಮಾಡಿ ಔಷಧ ಸಿಂಪಡಣೆ ಮಾಡಿದ್ದೇನೆ. ಆದರೂ, ರೋಗ ಹತೋಟಿಗೆ ಬಂದಿಲ್ಲ. ಬೀಜ, ರಸಗೊಬ್ಬರ ಹಾಗೂ ಔಷಧ ಸಿಂಪಡಣೆ ಸೇರಿ ₹ 1.50 ಲಕ್ಷ ಖರ್ಚು ಮಾಡಿರುವೆ. ಆದರೆ, ಬೆಳೆ ಕೈಗೆ ಬರುವುದೋ ಎಲ್ಲವೋ ಎಂಬ ಚಿಂತೆ ಮೂಡಿದೆ’ ಎಂದು ರೈತ ಚಿದಾನಂದ ಅಳಲು ತೋಡಿಕೊಂಡರು.
ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ರೋಗ ಹತೋಟಿಗೆ ಕ್ರಮ ಕೈಗೊಳ್ಳುವಂತೆ ರೈತರಿಗೆ ತಿಳಿಸಿದ್ದೇನೆ ಎಂದು ಕುಳಗೇರಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪರಶುರಾಮ ಗಣಿ ತಿಳಿಸಿದರು.
ಬೆಳೆ ಪರಿಶೀಲಿಸಿ ಕ್ರಮ
ಮಜ್ಜಿಗೆ ಕಂಡು ಬಂದಿರುವ ರೈತರ ಜಮೀನಿಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗುವುದು. ಔಷಧ ಸಿಂಪಡಣೆ ಬಗ್ಗೆ ಸೂಚಿಸಲಾಗುವುದು. ನಂತರವೂ ಈ ರೋಗ ನಿಯಂತ್ರಣಕ್ಕೆ ಬಾರದೇ ಹೋದರೆ ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಿಂದ ಈರುಳ್ಳಿ ಬೆಳೆ ತಜ್ಞರನ್ನು ಕರೆಯಿಸಿ ಮಾಹಿತಿ ಕೊಡಿಸಲಾಗುತ್ತದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿ ಹನುಮಂತ ತುಳಸೀಗೇರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.