ADVERTISEMENT

ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸಿ: ಆಡಳಿತ ಸೌಧದ ಮುಂದೆ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 4:17 IST
Last Updated 17 ಸೆಪ್ಟೆಂಬರ್ 2025, 4:17 IST
ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ತಹಶೀಲ್ದಾರ್ ವಿನೋದ ಹತ್ತಳ್ಳಿ ಅವರಿಗೆ ಮನವಿ ಸಲ್ಲಿಸಿದರು
ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ತಹಶೀಲ್ದಾರ್ ವಿನೋದ ಹತ್ತಳ್ಳಿ ಅವರಿಗೆ ಮನವಿ ಸಲ್ಲಿಸಿದರು   

ಬೀಳಗಿ: ಪಟ್ಟಣದಲ್ಲಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಬಾಗಲಕೋಟ ಜಿಲ್ಲಾ ಘಟಕ ಹಾಗೂ ಬೀಳಗಿ ತಾಲ್ಲೂಕು ಘಟಕದ ಸಹಯೋಗದಲ್ಲಿ ಈರುಳ್ಳಿ ಬೆಳೆಗಾರರಿಗೆ ನ್ಯಾಯಯುತ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ತಾಲ್ಲೂಕು ಆಡಳಿತ ಸೌಧದ ಮುಂದೆ ರೈತರು ಪ್ರತಿಭಟನೆ ನಡೆಸಿದರು.

ಭಾರತೀಯ ಕಿಸಾನ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ, ಸತತ ಮಳೆಯಿಂದಾಗಿ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ಬೀಜ, ರಸಗೊಬ್ಬರ, ಕೀಟನಾಶಕ ಔಷದ, ಕಳೆ ತೆಗೆಯಲು ಸೇರಿದಂತೆ ಒಂದು ಎಕರೆ ಈರುಳ್ಳಿ ಬೆಳೆಗೆ ಕನಿಷ್ಠ ₹40 ಸಾವಿರ ಖರ್ಚು ಮಾಡಿದ್ದರು. ಬೆಳೆಗಳು ನೀರು ಪಾಲಾಗಿದ್ದು, ರೈತರಿಗೆ ನಷ್ಟವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಶೀಘ್ರ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

‘ಅಳಿದುಳಿದ ಈರುಳ್ಳಿ ಬೆಳೆಯನ್ನು ಮಾರಾಟ ಮಾಡಬೇಕೆಂದರೆ ಅದರ ಬೆಳೆಯೂ ಕುಸಿದಿದೆ. ರೈತರು ಮಾಡಿದ ಸಾಲ ತೀರಿಸಲಾಗದೇ ಕಂಗಾಲಾಗಿದ್ದಾರೆ. ಸರ್ಕಾರ ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ನಿಗದಿಗೊಳಿಸಬೇಕು’ ಎಂದರು.

ADVERTISEMENT

ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ಬರಾಯಗೌಡ ಪಾಟೀಲ ಮಾತನಾಡಿ, ಬೆಳೆ ವಿಮೆ ಕಟ್ಟಿದ ರೈತರಿಗೆ ವಿಮಾ ಕಂಪನಿ, ಕೃಷಿ ಇಲಾಖೆ, ತೋಟಗಾರಿಕೆ, ರೇಷ್ಮೆ, ಕಂದಾಯ ಇಲಾಖೆಯವರು ಪರಿಶೀಲನೆ ನಡೆಸದೇ ಇರುವುದರಿಂದ ರೈತರು ವಿಮಾ ಕಂಪನಿ ನೀಡುವ ಕ್ಲೇಮ್‌ನಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ರೈತರಿಗೆ ಅನ್ಯಾಯವಾಗದಂತೆ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು’ ಎಂದು ತಿಳಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಪ್ರಧಾನ ಕಾರ್ಯದರ್ಶಿ ಗುರು ಅನಗವಾಡಿ, ಜಿಲ್ಲಾ ಕೋಶ್ಯಾಧ್ಯಕ್ಷ ಮುದುಕಪ್ಪ ವಡವಾಣಿ, ಜಿಲ್ಲಾ ಮಹಿಳಾ ಪ್ರಮುಖರಾದ ರೇಣುಕಾ ಹುಲ್ಲಿಕೇರಿ, ರೈತ ಮುಖಂಡರಾದ ಶಿವನಗೌಡ ಪಾಟೀಲ, ಡೊಂಗ್ರಿಸಾಬ ನದಾಫ್, ಚಂದ್ರಶೇಖರ ಕಾಖಂಡಕಿ ಬಸವಂತಪ್ಪ ಸಂಕಾನಟ್ಟಿ, ಸುರೇಶ ಹೂಗಾರ, ಮಂಜು ಬಾವಿ, ಹಣಮಂತ ದೊರೆಗೊಳ, ಶಾಂತಯ್ಯ ಪಂಚಗಟ್ಟಿಮಠ, ಲಕ್ಷ್ಮಣ್ಣ ಸವನಾಳ, ಯಲ್ಲಾಲಿಂಗ ಕುರಿ, ಸಿದ್ದಪ್ಪ ಕೂಗಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.