ADVERTISEMENT

ಬಾಗಲಕೋಟೆ| ಎರಡೇ ದಿನದಲ್ಲಿ ಈರುಳ್ಳಿ ಕ್ವಿಂಟಲ್‌ಗೆ ₹5000 ಕುಸಿತ

ಈರುಳ್ಳಿಗೆ ದಶಕದಲ್ಲಿಯೇ ದಾಖಲೆ ಬೆಲೆ

ವೆಂಕಟೇಶ್ ಜಿ.ಎಚ್
Published 12 ಡಿಸೆಂಬರ್ 2019, 19:31 IST
Last Updated 12 ಡಿಸೆಂಬರ್ 2019, 19:31 IST
ಬಾಗಲಕೋಟೆ ತಾಲ್ಲೂಕಿನ ಬೆನಕಟ್ಟಿ ಬಳಿ ಹೊಲದಲ್ಲಿ ಈರುಳ್ಳಿ ಸಂಸ್ಕರಿಸುತ್ತಿರುವ ಕಾರ್ಮಿಕರು
ಬಾಗಲಕೋಟೆ ತಾಲ್ಲೂಕಿನ ಬೆನಕಟ್ಟಿ ಬಳಿ ಹೊಲದಲ್ಲಿ ಈರುಳ್ಳಿ ಸಂಸ್ಕರಿಸುತ್ತಿರುವ ಕಾರ್ಮಿಕರು   

ಬಾಗಲಕೋಟೆ: ದಶಕದಲ್ಲಿಯೇ ಅತಿ ಹೆಚ್ಚು ಬೆಲೆ ಪಡೆದ ಸಂಭ್ರಮದಲ್ಲಿದ್ದ ಜಿಲ್ಲೆಯ ಈರುಳ್ಳಿ ಬೆಳೆಗಾರರು, ಕಳೆದ ಎರಡು ದಿನಗಳಿಂದ ದಿಢೀರನೆ ಕುಸಿದ ಬೆಲೆಯಿಂದಾಗಿ ಕಂಗಾಲಾಗಿದ್ದಾರೆ.

ಬಾಗಲಕೋಟೆಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈರುಳ್ಳಿ ದರ ನಾಲ್ಕು ದಿನಗಳ ಹಿಂದೆ ಕ್ವಿಂಟಲ್‌ಗೆ ಕನಿಷ್ಠ ₹900ರಿಂದ ಗರಿಷ್ಠ ₹12,000ದವರೆಗೆ ಮಾರಾಟವಾಗಿತ್ತು. ಆದರೆ ಡಿಸೆಂಬರ್ 11ರಂದು ಕ್ವಿಂಟಲ್‌ಗೆ ಗರಿಷ್ಠ ₹7,000ಕ್ಕೆ ಕುಸಿದಿದೆ.

ಈಜಿಪ್ಟ್‌ನಿಂದ ಆಮದು ಮಾಡಿಕೊಂಡು ಈರುಳ್ಳಿ ಮಾರುಕಟ್ಟೆಗೆ ಬಂದಿರುವುದು ಈ ರೀತಿ ದಿಢೀರನೆ ಬೆಲೆ ಕುಸಿತಕ್ಕೆ ಕಾರಣ. ಬಾಗಲಕೋಟೆಯಿಂದ ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರಿಗೆ ಈರುಳ್ಳಿ ಹೆಚ್ಚು ಆವಕಗೊಳ್ಳುತ್ತದೆ. ಅಲ್ಲಿಗೆ ಈಜಿಪ್ಟ್ ಹಾಗೂ ಟರ್ಕಿ ದೇಶಗಳಿಂದ ಈರುಳ್ಳಿ ಬರುತ್ತಿದ್ದಂತೆಯೇ ಇಲ್ಲಿಂದ ಕಳುಹಿಸುತ್ತಿದ್ದ ಮಾಲಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ವ್ಯಾಪಾರಸ್ಥರೊಬ್ಬರು ಹೇಳುತ್ತಾರೆ.

ADVERTISEMENT

ದಶಕದಲ್ಲಿಯೇ ದಾಖಲೆಯ ಬೆಲೆ:

2009ರಿಂದ ಇಲ್ಲಿಯವರೆಗೆ ಅತಿ ಹೆಚ್ಚು ಬೆಲೆ ಈ ಬಾರಿ ಈರುಳ್ಳಿಗೆ ದೊರೆತಿದೆ. ಈ ವರ್ಷ ಅಕ್ಟೋಬರ್ 1ರಿಂದ ಡಿಸೆಂಬರ್ 12ರವರೆಗೆ ಬಾಗಲಕೋಟೆ ಎಪಿಎಂಸಿಗೆ ಒಟ್ಟು 71,006 ಕ್ವಿಂಟಲ್ ಈರುಳ್ಳಿ ಆವಕಗೊಂಡಿದೆ. ಕನಿಷ್ಠ ₹300ರಿಂದ ಗರಿಷ್ಠ ₹12,000ಕ್ಕೆ ಮಾರಾಟವಾಗಿದೆ. ಇದೇ ಅವಧಿಯಲ್ಲಿ ಜಮಖಂಡಿ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ಗರಿಷ್ಠ ₹12,500ಕ್ಕೆ ಮಾರಾಟವಾಗಿದೆ. ಬಾಗಲಕೋಟೆ ಮಾರುಕಟ್ಟೆಯಲ್ಲಿ 2013ರಲ್ಲಿ ಕ್ವಿಂಟಲ್‌ಗೆ ₹4950 ದೊರೆತದ್ದೇ ಇಲ್ಲಿಯವರೆಗೆ ಮಾರುಕಟ್ಟೆಯಲ್ಲಿ ಗರಿಷ್ಠ ಬೆಲೆ ಆಗಿತ್ತು. ಆಗ ಮಾರುಕಟ್ಟೆಗೆ ಒಟ್ಟು 77,678 ಕ್ವಿಂಟಲ್ ಆವಕಗೊಂಡಿತ್ತು.

ಆವಕ ಅರ್ಧಕ್ಕರ್ಧ ಕುಸಿತ:

ಪ್ರವಾಹ, ಅತಿಯಾದ ಮಳೆಯಿಂದಾಗಿ ಬೆಳೆ ಹಾನಿಗೀಡಾಗಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾರುಕಟ್ಟೆಗೆ ಈರುಳ್ಳಿ ಆವಕಗೊಂಡಿರುವ ಪ್ರಮಾಣ ಅರ್ಧಕ್ಕರ್ಧ ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬಾಗಲಕೋಟೆ ಮಾರುಕಟ್ಟೆಗೆ 1.70,749 ಕ್ವಿಂಟಲ್ ದಾಖಲೆಯ ಪ್ರಮಾಣದ ಈರುಳ್ಳಿ ಆವಕಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.