ADVERTISEMENT

ಬಾದಾಮಿ | ವಾಹನಗಳ ನಿಲುಗಡೆಗೆ ಇಲ್ಲ ಜಾಗ: ಚಾಲುಕ್ಯರ ಸ್ಮಾರಕಗಳಲ್ಲಿ ಚಾಲಕರ ಪರದಾಟ

ಎಸ್.ಎಂ.ಹಿರೇಮಠ
Published 14 ನವೆಂಬರ್ 2025, 3:42 IST
Last Updated 14 ನವೆಂಬರ್ 2025, 3:42 IST
ಬಾದಾಮಿ ಸಮೀಪದ ವಿಶ್ವ ಪರಂಪರೆಯ ತಾಣ ಪಟ್ಟದಕಲ್ಲಿನ ರಸ್ತೆಯಲ್ಲಿಯೇ ನಿಲುಗಡೆಯಾದ ವಾಹನಗಳು.
ಬಾದಾಮಿ ಸಮೀಪದ ವಿಶ್ವ ಪರಂಪರೆಯ ತಾಣ ಪಟ್ಟದಕಲ್ಲಿನ ರಸ್ತೆಯಲ್ಲಿಯೇ ನಿಲುಗಡೆಯಾದ ವಾಹನಗಳು.   

ಬಾದಾಮಿ: ವಿಶ್ವ ಪರಂಪರೆ ತಾಣ ಪಟ್ಟದಕಲ್ಲು ಸ್ಮಾರಕ ಮತ್ತು ಬಾದಾಮಿ ಮೇಣಬಸದಿ ಆವರಣದಲ್ಲಿ ವಾಹನಗಳ ನಿಲುಗಡೆಗೆ ಚಾಲಕರು ನಿತ್ಯ ಪರದಾಡುವಂತಾಗಿದೆ.

ಬಾದಾಮಿ ಮತ್ತು ವಿಶ್ವ ಪರಂಪರೆಯ ತಾಣ ಪಟ್ಟದಕಲ್ಲಿನಲ್ಲಿ ಪ್ರವಾಸಿಗರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ನವೆಂಬರ್‌ನಿಂದ ಜನವರಿಯವರೆಗೆ ಪ್ರವಾಸಿಗರು ಮತ್ತು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ.

ಪಟ್ಟದಕಲ್ಲಿನಲ್ಲಿ ವಾಹನ ನಿಲುಗಡೆಗೆ ಪ್ರವಾಸೋದ್ಯಮ ಇಲಾಖೆ ಎರಡು ಎಕರೆ ಖರೀದಿಸಿ ದಶಕಗಳು ಕಳೆದಿವೆ. ಕಾರು ಪಾರ್ಕಿಂಗ್ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಚಾಲಕರು ರಸ್ತೆಯಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡುವರು. ದಟ್ಟಣೆಯಿಂದ ವಾಹನಗಳ ಸಂಚಾರ ಇಲ್ಲಿ ಅಸ್ತವ್ಯಸ್ತವಾಗಿರುವುದನ್ನು ಕಾಣಬಹುದು.

ADVERTISEMENT

’ಪಟ್ಟದಕಲ್ಲಿನಲ್ಲಿ ವಾಹನ ನಿಲುಗಡೆಗೆ ಪ್ರವಾಸೋದ್ಯಮದ ನಿವೇಶನ ಖಾಲಿ ಇದೆ. ಮುಳ್ಳುಗಳು ಬೆಳೆದಿವೆ. ಚಾಲಕರು ನಿತ್ಯ ಪರದಾಡುವರು. ಅವರಿಗೊಂದು ಸೂಕ್ತ ಪಾರ್ಕಿಂಗ್ ವ್ಯವಸ್ಥೆಯನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಲ್ಪಿಸಬೇಕು ’ ಎಂದು ಸ್ಥಳೀಯರಾದ ಸಿದ್ದಪ್ಪ ಒತ್ತಾಯಿಸಿದರು.

ಬಾದಾಮಿಯಲ್ಲಿ ವಾಹನಗಳ ನಿಲುಗಡೆಗೆ ಪ್ರವಾಸೋದ್ಯಮ ಇಲಾಖೆಯು 9 ಎಕರೆ ಜಮೀನು ಖರೀದಿಸಿ ಎರಡು ವರ್ಷಗಳಾಗಿವೆ. ಆದರೆ ಕಾರ್ ಪಾರ್ಕಿಂಗ್ ಕಾಮಗಾರಿ ಆರಂಭವಾಗದೇ ಇಲ್ಲಿಯು ಸಹ ವಾಹನ ಚಾಲಕರು ಪರದಾಡುವಂತಾಗಿದೆ.

‘ಪಾರ್ಕಿಂಗ್ ಮಾಡಲು ಜಾಗವಿಲ್ಲದ ಕಾರಣದಿಂದ ಅಟೊ ಚಾಲಕರು ಪ್ರವಾಸಿಗರನ್ನು ಆಟೊದಲ್ಲಿ ಕರೆದೊಯ್ದು ಅವರಿಂದ ಹೆಚ್ಚಿನ ಹಣವನ್ನು ವಸೂಲಿ ಮಾಡುವರು.ಆಟೊ ಚಾಲಕರಿಗೆ ದರದ ನಿಗದಿಯಿಲ್ಲ. ಅಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಳ್ಳಬೇಕಿದೆ ’ ಎಂದು ನಗರ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ ನರೇಗಲ್ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

‘ಬಾದಾಮಿ ಮತ್ತು ಪಟ್ಟದಕಲ್ಲಿನಲ್ಲಿ ಕಾರ್ ನಿಲ್ಲಿಸಲು ಜಾಗವಿಲ್ಲ ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಅಭಿವೃದ್ಧಿ ಮಾಡಲು ಇಚ್ಛಾ ಶಕ್ತಿ ಬೇಕಿದೆ ’ ಎಂದು ತುಮಕೂರ ಪ್ರವಾಸಿ ಕೊಟ್ರೇಶ್ ಪ್ರತಿಕ್ರಿಯಿಸಿದರು.

ಪಟ್ಟದಕಲ್ಲಿನಲ್ಲಿ ವಾಹನಗಳ ನಿಲುಗಡೆಗೆ ಮೀಸಲಾಗಿರಿಸಿದ್ದ ನಿವೇಶನದಲ್ಲಿ ಮುಳ್ಳುಕಂಟಿ ಕಸ ಕಟ್ಟಿ ಬೆಳೆದಿದೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಚಾಲುಕ್ಯರ ಪ್ರವಾಸಿ ತಾಣಗಳಾದ ಬಾದಾಮಿ, ಮಹಾಕೂಟ, ಪಟ್ಟದಕಲ್ಲು, ಐಹೊಳೆ , ಹುಲಿಗೆಮ್ಮನಕೊಳ್ಳ ಮತ್ತು ಧಾರ್ಮಿಕ ಕ್ಷೇತ್ರಗಳಾದ ಬನಶಂಕರಿ ಮತ್ತು ಶಿವಯೋಗಮಂದಿರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ್ತು ವಿದೇಶಿ ಪ್ರವಾಸಿಗರು ನಿತ್ಯ ಆಗಮಿಸುತ್ತಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಳ್ಳುವರೇ ಎಂದು ಪ್ರವಾಸಿಗರು ನಿರೀಕ್ಷೆಯಲ್ಲಿದ್ದಾರೆ.

‘ ಪಟ್ಟದಕಲ್ಲಿನಲ್ಲಿರುವ ಎರಡು ಎಕರೆ ಜಮೀನನ್ನು ಕೆ.ಎಸ್.ಟಿ.ಡಿ.ಸಿ ಗೆ ಹಸ್ತಾಂತರ ಮಾಡಲಾಗಿದೆ.ಅವರೇ ಕಾರ್ ಪಾರ್ಕಿಂಗ್ ಮಾಡುವರು. ಬಾದಾಮಿಯಲ್ಲಿ ಪಾರ್ಕಿಂಗ್ ಪ್ಲಾಜಾ ನಿರ್ಮಿಸಲು ಎಪಿಎಂಸಿಯ 9 ಎಕರೆ ಪ್ರವಾಸೋದ್ಯಮ ಇಲಾಖೆ ಖರೀದಿಸಿದೆ. ಎಂಜಿನಿಯರ್ ಬಂದು ವೀಕ್ಷಣೆ ಮಾಡಿದ್ದಾರೆ ’ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಜಿ.ಎಸ್. ಹಿತ್ತಲಮನಿ ಪ್ರತಿಕ್ರಿಯಿಸಿದರು.

ಬಾದಾಮಿ ಮೇಣಬಸದಿ ಆವರಣದಲ್ಲಿ ವಾಹನಗಳ ದಟ್ಟಣೆಯಿಂದ ವಾಹನ ನಿಲುಗಡೆಗೆ ಜಾಗೆಯ ಕೊರತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.