ADVERTISEMENT

ಪಟ್ಟದಕಲ್ಲು, ಐಹೊಳೆ ಇನ್ನು ಆದರ್ಶ ತಾಣ!

ಕೇಂದ್ರದಿಂದ ರಾಜ್ಯದ ಎಂಟು ಸ್ಮಾರಕಗಳ ಆಯ್ಕೆ; ಮೂಲ ಸೌಕರ್ಯ ಕಲ್ಪಿಸಲು ಒತ್ತು

ವೆಂಕಟೇಶ್ ಜಿ.ಎಚ್
Published 25 ಜೂನ್ 2018, 16:19 IST
Last Updated 25 ಜೂನ್ 2018, 16:19 IST
ಬಾದಾಮಿ ತಾಲ್ಲೂಕು ಪಟ್ಟದಕಲ್ಲಿನ ದೇವಾಲಯ ಸಮುಚ್ಛಯ
ಬಾದಾಮಿ ತಾಲ್ಲೂಕು ಪಟ್ಟದಕಲ್ಲಿನ ದೇವಾಲಯ ಸಮುಚ್ಛಯ   

ಬಾಗಲಕೋಟೆ: ದೇಶದ ಸಂಸ್ಕೃತಿ ಪರಂಪರೆ ಎತ್ತಿ ಹಿಡಿಯುವ ಜೊತೆಗೆ ಯುವ ಜನತೆಯಲ್ಲೂ ಆ ಬಗ್ಗೆ ಅರಿವು ಮೂಡಿಸಲು 100 ಪುರಾತನ ಸ್ಮಾರಕಗಳನ್ನು ಆದರ್ಶ ತಾಣಗಳು ಎಂದು ಕೇಂದ್ರ ಸರ್ಕಾರ ಗುರುತಿಸಿದೆ. ಅದರಲ್ಲಿ ಜಿಲ್ಲೆಯಲ್ಲಿ ಚಾಲುಕ್ಯ ಸಾಮ್ರಾಜ್ಯದ ನೆಲೆಗಳಾದ ಐಹೊಳೆ ಹಾಗೂ ಪಟ್ಟದಕಲ್ಲು ದೇವಾಲಯ ಸಮುಚ್ಛಯಗಳೂ ಸೇರಿವೆ.

‘ಈ ತಾಣಗಳಲ್ಲಿ ಎರಡು ಹಂತದಲ್ಲಿ ಪ್ರವಾಸಿ ಕೇಂದ್ರೀಕೃತ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಕೇಂದ್ರದ ಸಂಸ್ಕೃತಿ ಸಚಿವಾಲಯ ₹350 ಕೋಟಿ ಮೀಸಲಿಟ್ಟಿದೆ. ಮೊದಲ ಹಂತದಲ್ಲಿ ರಾಜ್ಯದಲ್ಲಿ ಹಂಪಿಯ ಸ್ಮಾರಕಗಳ ಸಮುಚ್ಛಯದ ಜೊತೆ ಪಟ್ಟದಕಲ್ಲು ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ಕಾಮಗಾರಿ ಆರಂಭವಾಗಿದೆ. ಎರಡನೇ ಹಂತದಲ್ಲಿ ಉಳಿದ ಏಳು ಸ್ಮಾರಕಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ’ ಎಂದು ಭಾರತೀಯ ಪುರಾತತ್ವ ಇಲಾಖೆ ಧಾರವಾಡ ವೃತ್ತದ ಸಹಾಯಕ ನಿರ್ದೇಶಕ ಪ್ರಮೋದ ಬಿಂಗಿ ಹೇಳುತ್ತಾರೆ.

ಪ್ಲಾಸ್ಟಿಕ್ ಮುಕ್ತ ವಲಯ:

ADVERTISEMENT

ಆದರ್ಶ ತಾಣಗಳ ಪರಿಸರದಲ್ಲಿ ಮೊದಲಿಗೆ ಸ್ವಚ್ಛತೆಗೆ ಆದ್ಯತೆ. ಹಾಗಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ, ಪ್ಲಾಸ್ಟಿಕ್ ಮುಕ್ತ ವಲಯ ಗುರುತಿಸಲಾಗುತ್ತದೆ. ಕಸದ ತೊಟ್ಟಿ, ಸ್ಮಾರಕಗಳ ಮಾಹಿತಿ ಫಲಕಗಳ ಅಳವಡಿಕೆ ಜೊತೆಗೆ ಪ್ರವಾಸಿಗರಿಗೆ ಸ್ನಾನ, ಶೌಚಾಲಯ ಸಂಕೀರ್ಣ, ಶುದ್ಧ ಕುಡಿಯುವ ನೀರಿನ ಘಟಕದ ವ್ಯವಸ್ಥೆ ಮಾಡಲಾಗುತ್ತಿದೆ.

ಎರಡನೇ ಹಂತದಲ್ಲಿ ಟಿಕೆಟ್ ಕೌಂಟರ್, ಪ್ರವಾಸಿ ಮಾಹಿತಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಜೊತೆಗೆ ಅಲ್ಲಿ ಧ್ವನಿ–ಬೆಳಕಿನ ಕೇಂದ್ರ, ಪಾರ್ಕಿಂಗ್ ಝೋನ್, ಲ್ಯಾಂಡ್‌ ಸ್ಕೇಪಿಂಗ್ ಮಾಡಲಾಗುತ್ತಿದೆ. ಅಗತ್ಯ ಬಿದ್ದರೆ ಖಾಸಗಿ ಸಹಭಾಗಿತ್ವ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಮೂರನೇ ಹಂತದಲ್ಲಿ ಕೆಫೆಟೆರಿಯಾ, ಕಲಾ ಕೇಂದ್ರ, ಆಹಾರ ಮಳಿಗೆ ಆರಂಭಿಸುವ ಜೊತೆಗೆ ಸ್ಮಾರಕಗಳ ಬಳಿ ಪ್ರವಾಸಿಗರ ಅನುಕೂಲಕ್ಕೆ ವೈಫೈ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ಭದ್ರತೆಗೂ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ, ಮೆಟಲ್‌ ಡಿಟೆಕ್ಟರ್ ಹಾಗೂ ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ಈ ತಾಣಗಳ ಸಂಪರ್ಕಕ್ಕೆ ಸುತ್ತಲಿನ ರಸ್ತೆಗಳ ಅಭಿವೃದ್ಧಿ ಕೂಡ ನಡೆಯಲಿದೆ.

ಸ್ವಾಗತಾರ್ಹ ನಡೆ:

‘ಪಟ್ಟದಕಲ್ಲು ಹಾಗೂ ಹಂಪಿಯನ್ನು ಯುನೆಸ್ಕೊ ದಶಕಗಳ ಹಿಂದೆಯೇ ವಿಶ್ವಪಾರಂಪರಿಕ ತಾಣಗಳು ಎಂದು ಗುರುತಿಸಿದೆ. ಕೇಂದ್ರ ಸರ್ಕಾರ ಈಗ ಆದರ್ಶ ತಾಣಗಳು ಎಂದು ಹೇಳುತ್ತಿದೆ. ಇದು ಸ್ವಾಗತಾರ್ಹ ನಡೆ’ ಎಂದು ಬಾದಾಮಿಯ ಇತಿಹಾಸ ತಜ್ಞ ಡಾ.ಶಿಲಾಕಾಂತ ಪತ್ತಾರ ಹೇಳುತ್ತಾರೆ.

‘ವಿಶ್ವದ ಕೆಲವು ದೇಶಗಳಲ್ಲಿ ಒಂದೂ ವಿಶ್ವ ಪಾರಂಪರಿಕ ತಾಣ ಇಲ್ಲ. ಕರ್ನಾಟಕದಲ್ಲಿಯೇ ಎರಡು ತಾಣಗಳಿವೆ. ಆದರೆ ಅವುಗಳ ಬೆಲೆ ನಮಗೆ ಗೊತ್ತಿಲ್ಲ. ಪಟ್ಟದಕಲ್ಲಿಗೆ ಪ್ರವಾಸಿ ಬಂದರೆ ಮಧ್ಯಾಹ್ನ ತಿನ್ನಲು ಎರಡು ರೊಟ್ಟಿ ಸಿಗುವುದಿಲ್ಲ. ಅಷ್ಟೊಂದು ದುರಾವಸ್ಥೆ ಇದೆ. ಸರ್ಕಾರ ಈ ನೆಪದಲ್ಲಾದರೂ ಒಂದಷ್ಟು ಮೂಲ ಸೌಕರ್ಯ ಕಲ್ಪಿಸಲಿ’ ಎನ್ನುತ್ತಾರೆ.

ರಾಜ್ಯದ ಆದರ್ಶ ತಾಣಗಳು..

ಹಂಪಿ ಸ್ಮಾರಕಗಳ ಸಮುಚ್ಛಯ, ಪಟ್ಟದಕಲ್ಲು, ಐಹೊಳೆ ದೇವಾಲಯಗಳ ಸಮುಚ್ಛಯ, ಶ್ರೀರಂಗಪಟ್ಟಣ ದೇವಾಲಯ ಹಾಗೂ ಅಲ್ಲಿನ ದರಿಯಾ ದೌಲತ್‌ ಬಾಗ್, ಬೀದರ್ ಕೋಟೆ, ಬೇಲೂರು, ಶ್ರವಣಬೆಳಗೂಳ ಹಾಗೂ ವಿಜಯಪುರದ ಗೋಲಗುಂಬಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.