
ಬಾಗಲಕೋಟೆ: ಬಾಗಲಕೋಟೆ, ವಿಜಯಪುರ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಬಣ್ಣ, ಬಣ್ಣದ ಸಮವಸ್ತ್ರಗಳನ್ನು ಧರಿಸಿ ನವನಗರದ ಕಲಾಭವನದತ್ತ ಹೆಜ್ಜೆ ಹಾಕಿದರು. ಬೆಳಿಗ್ಗೆ 9ರ ವೇಳೆಗೆ ಭವನದಲ್ಲಿ ವಿದ್ಯಾರ್ಥಿಗಳ ಕಲರವ ಜೋರಾಗಿತ್ತು.
ಬಾಗಲಕೋಟೆ ವಲಯದ ‘ಪ್ರಜಾವಾಣಿ’ ಕ್ವಿಜ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಪೋಷಕರು, ಶಿಕ್ಷಕರೊಂದಿಗೆ ವಿದ್ಯಾರ್ಥಿಗಳು ಕ್ವಿಜ್ ವಿಜೇತರಾಗಲು ಸಿದ್ಧರಾಗಿ ಬಂದಿದ್ದರು. 20 ಪ್ರಶ್ನೆಗಳ ಲಿಖಿತ ಪರೀಕ್ಷೆಯಲ್ಲಿ ಪ್ರಶ್ನೆಗಳು ಪರದೆ ಮೇಲೆ ಮೂಡಿ ಬರುತ್ತಿದ್ದಂತೆಯೇ ತನ್ನ ತಂಡದ ಸಹ ಸದಸ್ಯನೊಂದಿಗೆ ಚರ್ಚಿಸಿ, ಉತ್ತರ ಪತ್ರಿಕೆಯಲ್ಲಿ ನಮೂದಿಸಿದರು.
ಒಂದೆಡೆ ಮೌಲ್ಯಮಾಪನ ನಡೆಯುವಾಗಲೇ, ಇತ್ತ ಪ್ರಶ್ನೆಗಳಿಗೆ ವಿದ್ಯಾರ್ಥಿಗಳಿಂದಲೇ ಉತ್ತರ ಹೇಳಿಸುವ ಕಾರ್ಯವನ್ನು ಕ್ವಿಜ್ ಮಾಸ್ಟರ್ ಆರಂಭಿಸಿದರು.
ವಿದ್ಯಾರ್ಥಿಗಳು ಎದ್ದು ನಿಂತು ಸರಿಯಾದ ಉತ್ತರ ಹೇಳುತ್ತಿದ್ದಂತೆಯೇ ಕೆಲವರ ಮೊಗದಲ್ಲಿ ಮಂದಹಾಸ ಮೂಡಿದರೆ, ಇನ್ನೂ ಕೆಲವರ ಮೊಗದಲ್ಲಿ ನಿರಾಸೆ ಕಾಣಿಸಿತು. ಕೆಲವರು ಅಯ್ಯೋ ಸರಿಯಾದ ಉತ್ತರ ಗೊತ್ತಿದ್ದರೂ ತಪ್ಪು ಬರೆದವಲ್ಲ ಎಂದು ಪೇಚಾಡಿಕೊಂಡರು.
ಕ್ವಿಜ್ ಹಂತಕ್ಕೆ ಆಯ್ಕೆಯಾದ ಆರು ತಂಡಗಳ ಘೋಷಣೆಗೆ ವಿದ್ಯಾರ್ಥಿಗಳೆಲ್ಲ ಕುತೂಹಲದಿಂದ ಕಾದಿದ್ದರು. ತಂಡದ ಹೆಸರು ಘೋಷಿಸುತ್ತಿದ್ದಂತೆಯೇ ವಿದ್ಯಾರ್ಥಿಗಳ ಮೊಗದಲ್ಲಿ ಸಂಭ್ರಮ ಮನೆ ಮಾಡಿತು. ಉಳಿದವರು ಮುಂದಿನ ತಂಡದಲ್ಲಿ ತಮ್ಮ ಹೆಸರಿರಬಹುದೇ ಎಂದು ಕಾದು ಕುಳಿತರು.
ತೀವ್ರ ಸ್ಪರ್ಧೆಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ಬಾಗಲಕೋಟೆಯ ಬಸವೇಶ್ವರ ಅಂತರರಾಷ್ಟ್ರೀಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ತೇಜಲ್ ಅಮಾರಿ, ಸ್ತುತಿ ರಾಠಿ ತಂಡ (75 ಅಂಕ) ಪ್ರಧಮ ಬಹುಮಾನ ಗೆದ್ದುಕೊಂಡಿತು.
ವಿಜಯಪುರದ ಎಸಿಟಿ ಶಾರದಾ ವಿದ್ಯಾಲಯದ ಸುಮಿತ್ ಕಳಸಗೊಂಡ ಹಾಗೂ ಚೇತನ ವಜ್ಜರಮಟ್ಟಿ ತಂಡ(60 ಅಂಕ) ದ್ವಿತೀಯ ಬಹುಮಾನ ಗಳಿಸಿತು. ನಾಲ್ಕನೇ ಸುತ್ತು ಪೂರ್ಣಗೊಂಡಾಗ ಈ ತಂಡ ಪ್ರಥಮ ಸ್ಥಾನದಲ್ಲಿತ್ತು. ಐದನೇ ಸುತ್ತಿನಲ್ಲಿ ತಪ್ಪು ಉತ್ತರ ಹೇಳಿದ್ದರಿಂದ ಎರಡನೇ ಸ್ಥಾನಕ್ಕೆ ಕುಸಿಯಿತು.
ಮುಷ್ಟಿಗೇರಿಯ ಬಿ.ಆರ್. ಅಂಬೇಡ್ಕರ್ ರೆಸಿಡೆನ್ಸಿಯಲ್ ಸ್ಕೂಲ್‌ನ ಚೈತ್ರಾ ಹಾಗೂ ಆಕಾಶ ತಂಡ (35 ಅಂಕ) ತೃತೀಯ ಸ್ಥಾನ ಗಳಿಸಿತು. ಬಾಗಲಕೋಟೆಯ ಸಮೃದ್ಧಿ ಗುರುಕುಲದ ಪೂಜಾ ಕೋನಪ್ಪನವರ ಹಾಗೂ ಆದರ್ಶ, ಚಿಕ್ಕಮುಚ್ಚಳಗುಡ್ಡದ ಆದರ್ಶ ವಿದ್ಯಾಲಯದ ಸಾಧನಾ ಕಲಾಲ ಹಾಗೂ ಸಿಂಚನಾ ವಸ್ತರ, ಜಮಖಂಡಿ ಬಿಎಲ್‌ಡಿಇ ಪಬ್ಲಿಕ್ ಸ್ಕೂಲ್‌ನ ಪ್ರಚೇತ ಹಿಪ್ಪರಗಿ ಹಾಗೂ ಕೃತಿ ಆರ್.ಎನ್ ಅವರ ತಂಡಗಳು ಕ್ರಮವಾಗಿ ನಾಲ್ಕು, ಐದು ಹಾಗೂ ಆರನೇ ಸ್ಥಾನ ಗಳಿಸಿದರು.
ರಸಪ್ರಶ್ನೆ ಸ್ಪರ್ಧೆಯು ಆರ್ಕಿಡ್ಸ್ ಇಂಟರ್ ನ್ಯಾಷನಲ್ ಸ್ಕೂಲ್, ಬ್ಯಾಂಕಿಂಗ್ ಪಾರ್ಟನರ್ –ಎಸ್‌ಬಿಐ, ರಿಫ್ರೆಶ್‌ಮೆಂಟ್ ಪಾರ್ಟನರ್ ಮೊಗು–ಮೊಗು, ಸ್ಪೆಷಲ್ ಪಾರ್ಟನರ್ - ಭೀಮ, ನ್ಯೂಟ್ರಿಷನ್ ಪಾರ್ಟನರ್ - ನಂದಿನಿ, ಇನ್ ಅಸೋಸಿಯೇಷನ್ ವಿಥ್ - ಪೂರ್ವಿಕಾ, ವಿಐಪಿಎಸ್, ಟ್ಯಾಲೆಂಟ್ ಸ್ಪ್ರಿಂಟ್, ಐಸಿಎಸ್ ಮಹೇಶ್ ಪಿಯು ಕಾಲೇಜು, ಸೂಪರ್ ಬ್ರೈನ್, ಮಾರ್ಗದರ್ಶಿ, ದಿ ಟೀಮ್ ಅಕಾಡೆಮಿ, ಐಬಿಎಂಆರ್, ಮಂಗಳೂರು ಪಿಯು ಕಾಲೇಜು, ಶಾರದಾ ವಿದ್ಯಾ ಮಂದಿರ, ಟಿವಿ ಪಾರ್ಟನರ್ ಏಷಿಯಾನೆಟ್ ಸುವರ್ಣ ನ್ಯೂಸ್ ಸಹಯೋಗದಲ್ಲಿ ಜರುಗಿತು.
ಬಾಗಲಕೋಟೆ: ಮಕ್ಕಳಲ್ಲಿ ಕ್ರಿಯಾಶೀಲತೆ ಬೆಳೆಸಿ, ಅವರ ಜ್ಞಾನ ವಿಸ್ತರಿಸುವಲ್ಲಿ ಕ್ವಿಜ್ ಅತ್ಯಂತ ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.
ಬಾಗಲಕೋಟೆ ವಲಯದ ‘ಪ್ರಜಾವಾಣಿ’ ಕ್ವಿಜ್ ಚಾಂಪಿಯನ್‌ಶಿಪ್ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ಅವರ ವ್ಯಕ್ತಿತ್ವ ವಿಕಾಸಕ್ಕೂ ನೆರವಾಗುತ್ತದೆ. ಅವರಲ್ಲಿ ಆತ್ಮಸ್ಥೈರ್ಯ ಬೆಳೆಸುತ್ತದೆ ಎಂದರು.
ಸ್ಪರ್ಧೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಜಯಶಾಲಿಯಾದವರಿಂದ ಪ್ರೇರಣೆ ಪಡೆದು ಮುಂಬರುವ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸುವ ಗುರಿ ಹೊಂದಬೇಕು. ‘ಪ್ರಜಾವಾಣಿ‘ ಪ್ರತಿ ವರ್ಷ ಸ್ಪರ್ಧೆ ಆಯೋಜಿಸಿ ಮಕ್ಕಳ ಜ್ಞಾನದ ಕ್ಷಿತಿಜ ಹೆಚ್ಚಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಕ್ವಿಜ್ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸುತ್ತದೆ ಎಂದರು.
‘ನಾನು ‘ಪ್ರಜಾವಾಣಿ’ ಓದಿಯೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಿದ್ದೇನೆ. ಶೈಕ್ಷಣಿಕ ಹಂತದಲ್ಲಿ ಪಠ್ಯದ ಜ್ಞಾನದೊಂದಿಗೆ ಸಾಮಾನ್ಯ ಜ್ಞಾನವೂ ಇರಬೇಕಾಗುತ್ತದೆ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಕ್ವಿಜ್ ಮಾಸ್ಟರ್ ಮೇಘವಿ ಮಂಜುನಾಥ, ವಿದ್ಯಾರ್ಥಿಗಳಾದ ಗೋಕುಲ ಹಾಗೂ ಸಾನ್ವಿ, ಜಾಹೀರಾತು ವಿಭಾಗದ ಎಜಿಎಂ ದಿವಾಕರ್ ಭಟ್, ಜಿಲ್ಲಾ ಪ್ರತಿನಿಧಿ ವಿನಾಯಕ ಬೋಕರೆ, ಪ್ರಸರಣ ವಿಭಾಗದ ಬೆಳಗಾವಿ ಪ್ರಾದೇಶಿಕ ವ್ಯವಸ್ಥಾಪಕ ರವಿ ಹೆಗಡೆ, ಜಿಲ್ಲಾ ಪ್ರತಿನಿಧಿ ರವಿಕುಮಾರ ಹೊಸಮನಿ ಪಾಲ್ಗೊಂಡಿದ್ದರು.
ನಂತರ ಬಹುಮಾನ ವಿತರಿಸಿದ ಶಾಲಾ ಶಿಕ್ಷಣ ಇಲಾಖೆ ಅಜಿತ್ ಮನ್ನಿಕೇರಿ ಮಾತನಾಡಿ, ಮಕ್ಕಳು ಜೀವನದಲ್ಲಿ ಚಾಂಪಿಯನ್ ಆಗುವ ಗುರಿ ಹೊಂದಿರಬೇಕು. ಸತತ ಪ್ರಯತ್ನ, ಕಠಿಣ ಪರಿಶ್ರಮದಿಂದ ಗುರಿ ಸಾಧನೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರಮುಖ ಸ್ಪರ್ಧೆಗೆ ಆಯ್ಕೆಯಾಗಿದ್ದೇ ನಮಗೆ ಖುಷಿ ತಂದಿತ್ತು. ಕ್ವಿಜ್‌ನಲ್ಲಿ ಮೊದಲಿಗರಾಗಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವುದು ನಮ್ಮ ಸಂತಸ ಇಮ್ಮಡಿಗೊಳಿಸಿದೆ. ‘ಪ್ರಜಾವಾಣಿ’ಯ ಪ್ರಶಸ್ತಿ ಪಡೆದಿರುವುದು ಜೀವನದುದ್ದಕ್ಕೂ ಮರೆಯಲಾಗದ ಕ್ಷಣತೇಜಲ್ ಅಮಾರಿ ಹಾಗೂ ಸ್ತುತಿ ರಾಠಿ (ಪ್ರಥಮ ಬಹುಮಾನ ವಿಜೇತರು)
ಸ್ಪರ್ಧೆ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ರನ್ನರ್ ಅಪ್ ಆಗಿರುವುದು ಖುಷಿ ತಂದಿದೆ. ಆತ್ಮಸ್ಥೈರ್ಯ ಹೆಚ್ಚಿಸಿದೆ. ಜ್ಞಾನ ಗಳಿಕೆಗೆ ಅವಕಾಶ ನೀಡಿದ ‘ಪ್ರಜಾವಾಣಿ’ ಬಳಗಕ್ಕೆ ಧನ್ಯವಾದಗಳುಸುಮಿತ್ ಕಳಸಗೊಂಡ ಹಾಗೂ ಚೇತನ್ ವಜ್ಜರಮಟ್ಟಿ (ದ್ವಿತೀಯ ಬಹುಮಾನ ವಿಜೇತರು)
ಮಕ್ಕಳು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಎಲ್ಲ ವಿಷಯಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಬಹುದಾಗಿದೆ. ದಿನನಿತ್ಯದ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಮಕ್ಕಳು ಪತ್ರಿಕೆ ಓದಬೇಕು.ರಶ್ಮಿ ರಾವಳ, ಶಿಕ್ಷಕಿ, ಬಿ.ಎಸ್.ಖೋತ ಅಂತರರಾಷ್ಟ್ರೀಯ ಶಾಲೆ, ಅನಗವಾಡಿ.
ಕ್ವಿಜ್ ಬಹಳ ಚೆನ್ನಾಗಿ ನಡೆಯಿತು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಗೊತ್ತಾಯಿತು. ಮುಂದಿನ ವರ್ಷ ಉತ್ತಮ ಸಿದ್ಧತೆಯೊಂದಿಗೆ ಭಾಗವಹಿಸಲು ಪ್ರೇರಣೆಯಾಗಿದೆನವ್ಯಾ ಹಿರೇಮಠ, ಸೇಂಟ್ ಆ್ಯನ್ಸ್ ಸ್ಕೂಲ್ ಬಾಗಲಕೋಟೆ.
ಕ್ವಿಜ್ ಸಾಮಾನ್ಯ ಜ್ಞಾನದ ಮಹತ್ವ ತಿಳಿಸಿತು. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದರಿಂದ ಪ್ರಶಸ್ತಿ ಸಿಗಲಿ, ಬಿಡಲಿ. ಹೆಚ್ಚಿನ ಜ್ಞಾನವಂತೂ ಸಿಗುತ್ತದೆ. ಜ್ಞಾನ ಗಳಿಸಿಕೊಳ್ಳಲು ಇದೊಂದು ಒಳ್ಳೆಯ ವೇದಿಕೆಸಂಗೀತಾ ಸಾರಂಗಮಠ, ವಿದ್ಯಾರ್ಥಿನಿ, ಬಾದಾಮಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.